
ನವದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿರುವ ಮಕ್ಕಳ ಮೇಲೆ ಆನ್ಲೈನ್ ಲೈಂಗಿಕ ಕಿರುಕುಳ ಆರೋಪಗಳಿಗೆ ಸಂಬಂಧಿಸಿ ಸಿಬಿಐ ಹಲವು ರಾಜ್ಯಗಳ ಒಟ್ಟು 76 ಕಡೆ ಶೋಧ ಕಾರ್ಯಾಚರಣೆ ನಡೆಸಿದೆ.
ದೆಹಲಿ, ಉತ್ತರಪ್ರದೇಶ, ಆಂಧ್ರಪ್ರದೇಶ, ಗುಜರಾತ್, ಸಹಿತ ಒಟ್ಟು14 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸಿದೆ. ಪ್ರಕರಣದಲ್ಲಿ ಸಿಬಿಐ ಒಟ್ಟು 83 ಆರೋಪಿಗಳ ವಿರುದ್ಧ ಪ್ರತ್ಯೇಕ 23 ಪ್ರಕರಣಗಳನ್ನು ದಾಖಲಿಸಿದೆ.
ಮಕ್ಕಳ ಅಶ್ಲೀಲ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಮಾರಾಟ ಹಾಗೂ ಖರೀದಿ ಆರೋಪದಲ್ಲಿ ಸಿಬಿಐ ಇಬ್ಬರನ್ನು ಈ ವರ್ಷದ ಆರಂಭದಲ್ಲಿ ಬಂಧಿಸಿತ್ತು. ಬಂಧಿತ ಆರೋಪಿಗಳಲ್ಲಿ ಓರ್ವ ಬಿಟೆಕ್ ಎಂಜಿನಿಯರ್ ನೀರಜ್ ಕುಮಾರ್ ಯಾದವ್ ಹಾಗೂ ಇನ್ನೋರ್ವನನ್ನು ಕುಲಜೀತ್ ಸಿಂಗ್ ಮಕಾನ್ ಎಂದು ಗುರುತಿಸಲಾಗಿತ್ತು. ಇವರಿಬ್ಬರೂ ಮಕ್ಕಳ ಅಶ್ಲೀಲ ಚಿತ್ರ ಸೇರಿದಂತೆ ಆಕ್ಷೇಪಾರ್ಹ ವಸ್ತುಗಳ ದೊಡ್ಡ ಪ್ರಮಾಣದ ಡಾಟಾದ ವ್ಯಾಪಾರ ನಡೆಸಿದ್ದಾರೆ.
ಪೇಟಿಎಂ ಮೂಲಕ ಹಣ ಪಾವತಿ ಮಾಡಿರುವುದು ಪತ್ತೆಯಾಗಿದೆ. ಅಲ್ಲದೆ ಆರೋಪಿ ಯಾದವ್ ಮಕ್ಕಳ ಅಶ್ಲೀಲ ಚಿತ್ರಗಳ ಸಹಿತ ಆಕ್ಷೇಪಾರ್ಹ ವಸ್ತುಗಳನ್ನು ಮಾರಾಟ ಮಾಡುವ ಬಗ್ಗೆ ಇನ್ಸ್ಟ್ರಾಗ್ರಾಂ ನಲ್ಲಿ ಜಾಹೀರಾತು ಪ್ರಕಟಿಸಿದ್ದ ಎಂದು ಸಿಬಿಐ ವಕ್ತಾರ ಆರ್ ಸಿ ಜೋಷಿ ತಿಳಿಸಿದ್ದಾರೆ.



