Latestಕೊಡಗುಜಿಲ್ಲಾ ಸುದ್ದಿಸುದ್ದಿ

ವಿದ್ಯುತ್ ಕಂಬ ತಂದ ಆಪತ್ತು: ದಕ್ಷಿಣ ಕೊಡಗಿನ ಹಲವೆಡೆ ವಿದ್ಯುತ್ ಕಡಿತ

ಕೊಡಗು : ಶನಿವಾರ ಬೆಳಗ್ಗಿನ ಜಾವ ಕಲ್ಲಿಕೋಟೆಯಿಂದ ಕುಟ್ಟ ಗೋಣಿಕೊಪ್ಪಲು ಮಾರ್ಗ ಬೆಳಗಾವಿಗೆ ತೆರಳುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ಗೋಣಿಕೊಪ್ಪಲು ರಿಲಯನ್ಸ್ ಪೆಟ್ರೋಲ್ ಪಂಪ್ ಸಮೀಪ‌ ಅಟೋ ಫೋಕಸ್ ಮುಂಭಾಗ ಇರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಈ ಅಪಘಾತದಲ್ಲಿ ಚಾಲಕ ಹಾಗೂ ಪ್ರಯಾಣಿಕ ಆಶ್ಚರ್ಯಕರ ರೀತಿಯಲ್ಲಿ ಅಪಾಯದಿಂದ ಪಾರಾಗಿದ್ದಾರೆ.

ಕಾರ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೆಳಗ್ಗಿನಿಂದಲೇ ಪವರ್ ಕಟ್ ಆರಂಭವಾಗಿದ್ದು, ಈ ಹಿನ್ನೆಲೆ ಸಂಕ್ರಾಂತಿ ದಿನ ಗ್ರಾಹಕರು ತೊಂದರೆ ಅನುಭವಿಸಬೇಕಾಗಿದೆ. ಪೊನ್ನಂಪೇಟೆ ವಿದ್ಯುತ್ ಉಪಕೇಂದ್ರದಿಂದ F7 ಎರಡು 11 kV ವಿದ್ಯುತ್ ಲೇನುಗಳು ಗೋಣಿಕೊಪ್ಪಲಿಗೆ ಸಂಪರ್ಕ ಕಲ್ಪಿಸಿದ್ದು ಮತ್ತೊಂದು ಲೇನ್ ಕಾವೇರಿ ಹಿಲ್ಸ್ ಮಾರ್ಗ ಲೋಪಾಮುದ್ರ ಆಸ್ಪತ್ರೆ ಸನಿಹದಿಂದ ಪಾಲಿಬೆಟ್ಟಕ್ಕೆ ಎಕ್ಸ್ ಪ್ರೆಸ್ ಲೇನ್ ಹಾದುಹೋಗುತ್ತದೆ. ಗೋಣಿಕೊಪ್ಪ ನಗರಕ್ಕೆ ತುರ್ತು ವಿದ್ಯುತ್ ಸಂಪರ್ಕ ಕಲ್ಪಿಸಲು ಪ್ರಯತ್ನ ಸಾಗಿದೆ ಎಂದು ತಿಳಿದಿದೆ.

ಜತೆಗೆ ಅಪಘಾತದಿಂದ ಮುರಿದು ಬಿದ್ದ ಕಂಬವನ್ನು ಬದಲಾಯಿಸುವ ಪ್ರಯತ್ನವೂ ನಡೆದಿದೆ. ಗುರುವಾರ ಸಂಜೆ ಲೋಪಾಮುದ್ರ ಆಸ್ಪತ್ರೆ ಮುಂಭಾಗವೂ ಕುಶಾಲನಗರದ ವ್ಯಕ್ತಿಯೊಬ್ಬರಿಗೆ ಸೇರಿದ್ದ ಕಾರು ಅಲ್ಲಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಾಲಿಬೆಟ್ಟ ಕಡೆಗೆ ವಿದ್ಯುತ್ ಸರಬರಾಜು ಕಡಿತಗೊಂಡಿದ್ದು. ಅದನ್ನು ತುರ್ತು ಸರಿಪಡಿಸಿದ ಮೇರೆ ಇದೀಗ ವಿದ್ಯುತ್ ಸಂಪರ್ಕ ಎಂದಿನಂತೆ ಇದೆ.

ನೂತನ ವರ್ಷದಲ್ಲಿ ಎರಡು ಕಾರುಗಳು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು ಸಾವು ನೋವು ಸಂಭವಿಸದಿರುವುದು ಸಮಾಧಾನಕರ ಅಂಶವಾದರೂ, ರಸ್ತೆಯ ಬದಿಗೆ ಅಪಾಯಕಾರಿಯಾಗಿ ವಿದ್ಯುತ್ ಕಂಬ ಅಳವಡಿಸಿರುವದೇ ನಿರಂತರ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ವಿದ್ಯುತ್ ಕಂಬಗಳನ್ನು ಆದಷ್ಟು ತೋಟದ ಬೇಲಿಯ ಒಳಭಾಗ ಹಾಗೂ ಮುಖ್ಯರಸ್ತೆಯಿಂದ ಸಾಕಷ್ಟು ಅಂತರದಲ್ಲಿ ಅಳವಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button