
ರಾಜಸ್ಥಾನ: ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿ ಮೃತಪಟ್ಟ ಬೆನ್ನಲ್ಲೇ ಆಕೆಗೆ ಚಿಕಿತ್ಸೆ ನೀಡಿದ್ದ ವೈದ್ಯೆ ಕೂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ರೋಗಿಯ ಸಾವಿಗೆ ವೈದ್ಯರೇ ಕಾರಣ ಅಂತೇಳಿ ಸಂಬಂಧಿಕರು ಮಾಡಿದ ಗಲಾಟೆ ಮತ್ತು ನೀಡಿದ ದೂರು ವೈದ್ಯೆಯನ್ನ ಸೂಸೈಡ್ ಮಾಡಿಕೊಳ್ಳುವಂತೆ ಮಾಡಿದೆ. ಇಷ್ಟಕ್ಕೂ ಏನಿದು ಘಟನೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ರಾಜಸ್ಥಾನದ ಜೈಪುರ ಸಮೀಪದ ದೌಸಾ ಎಂಬಲ್ಲಿ ಸ್ತ್ರೀರೋಗ ತಜ್ಞೆ ಡಾ. ಅರ್ಚನಾ ಶರ್ಮಾ (42) ಎಂಬುವವರ ಮೇಲೆ ಐಪಿಸಿ ಸೆಕ್ಷನ್ 302ರ ಅಡಿ ಎಫ್‌ಐಆರ್ ದಾಖಲಾಗಿತ್ತು. ಇದರಿಂದ ನೊಂದ ಅವರು ಮರುದಿನವೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಮಾನ್ಯ ಪ್ರಕ್ರಿಯೆ ವೇಳೆ ರೋಗಿ ಮೃತಪಟ್ಟಿದ್ದಾಳೆ ಎಂದು ಅವರು ಸಾಯುವ ಮುನ್ನ ಬರೆದ ಡೆತ್ ನೋಟ್ ನಲ್ಲಿ ಹೇಳಿದ್ದಾರೆ.
ಈ ಆತ್ಮಹತ್ಯೆ ಘಟನೆ ರಾಜ್ಯದ ವೈದ್ಯಕೀಯ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಜೈಪುರದಲ್ಲಿ ಎಲ್ಲ ಖಾಸಗಿ ಆಸ್ಪತ್ರೆಗಳು ಮುಷ್ಕರಕ್ಕೆ ಕರೆ ನೀಡಿದ್ದವು. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜಸ್ಥಾನ ವೈದ್ಯಕೀಯ ಕಾಲೇಜು ಶಿಕ್ಷಕರ ಸಂಘ ಮತ್ತು ಜೈಪುರ ನಿವಾಸಿ ವೈದ್ಯರ ಸಂಘ ಆಗ್ರಹಿಸಿದೆ. “ಆತ್ಮಹತ್ಯಾ ಪತ್ರದಲ್ಲಿ ಅವರು, ರೋಗಿ ಸಾಮಾನ್ಯ ಪ್ರಕ್ರಿಯೆ ವೇಳೆ ಮೃತಪಟ್ಟಿರುವುದಾಗಿ ಉಲ್ಲೇಖಿಸಿದ್ದಾರೆ. ಅಮಾಯಕ ವೈದ್ಯರಿಗೆ ಕಿರುಕುಳ ನೀಡಬೇಡಿ ಎಂದೂ ಮನವಿ ಮಾಡಿದ್ದಾರೆ” ಎಂಬುದಾಗಿ ದೌಸಾ ಎಸ್‌ಪಿ ಅನಿಲ್ ಬೆನಿವಾಲ್ ಹೇಳಿದ್ದಾರೆ.
ತಮ್ಮ ಆಸ್ಪತ್ರೆಯಲ್ಲಿ ಗರ್ಭಿಣಿಯೊಬ್ಬರ ಸಾವಿಗೆ ಸಂಬಂಧಿಸಿದಂತೆ ವೈದ್ಯೆ ಅರ್ಚನಾ ಶರ್ಮಾ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಅರ್ಚನಾ ಅವರು ಗುಜರಾತ್‌ನ ಗಾಂಧಿನಗರದಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿದ್ದರು. ಬಳಿಕ ದೌಸಾದ ಲಾಲ್ಸೋಟ್‌ನಲ್ಲಿ ಪತಿ ಜತೆಗೂಡಿ ಆನಂದ್ ಆಸ್ಪತ್ರೆ ಸ್ಥಾಪಿಸಿದ್ದರು. ಇವರ ಆಸ್ಪತ್ರೆಗೆ ಗರ್ಭಿಣಿ ದಾಖಲಾಗಿದ್ದರು. ತೀವ್ರ ರಕ್ತಸ್ರಾವದಿಂದಾಗಿ ಆಕೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಳು. ಬಳಿಕ ರೋಗಿ ಸಂಬಂಧಿಕರು ವೈದ್ಯರೇ ಸಾವಿಗೆ ಕಾರಣ ಎಂದು ಪ್ರತಿಭಟನೆ ನಡೆಸಿ ದೂರು ನೀಡಿದ್ದರು. ಇದರಿಂದ ಮನನೊಂದ ವೈದ್ಯೆ ಆತ್ಮಹತ್ಯೆ ಮಾಡಿಕೊಂಡು ಪ್ರಾಣಬಿಟ್ಟಿದ್ದಾಳೆ.



