Latestಅಂಕಣಗಳುರಾಜಕೀಯರಾಜ್ಯ

ಯಡಿಯೂರಪ್ಪಗೆ ಸರಿಸಾಟಿಯಾಗುವರೇ ಬಸವರಾಜ ಬೊಮ್ಮಾಯಿ?

ಮುಖ್ಯಮಂತ್ರಿ ಬೊಮ್ಮಾಯಿ ಬಿಜೆಪಿ ಪಾಲಿಗೆ ಲಿಂಗಾಯತ ಸಮುದಾಯದ ದೊಡ್ಡ ನಾಯಕರಾಗಿ ಹೊರಹೊಮ್ಮಲಿದ್ದಾರೆ. ಎಲ್ಲರ ವಿಶ್ವಾಸ ಹೇಗೆ ಗಳಿಸಿಕೊಳ್ಳಲಿದ್ದಾರೆ ಮುಖ್ಯವಾಗಿ ಯಡಿಯೂರಪ್ಪ ಎದುರು ಬೆಳೆಯುವ ಸವಾಲನ್ನು ಹೇಗೆ ನಿಭಾಯಿಸಲಿದ್ದಾರೆ ಎಂಬುದನ್ನು ಕಾಲವೇ ನಿರ್ಣಯಿಸಲಿದೆ.

ಜಿ.ಮುಮ್ತಾಜ್ ಅಲೀಮ್

ರಾಜ್ಯಕ್ಕೆ ದಿನದ ಮಟ್ಟಿಗೆ ಬಂದು ಹೋದ ಬಿಜೆಪಿ ವರಿಷ್ಠ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ ಎನ್ನುವ ಮೂಲಕ ಸೈಲೆಂಟಾಗಿ ಬಾಂಬೊಂದನ್ನು ಸ್ಪೋಟಿಸಿ ಹೋಗಿದ್ದಾರೆ. ಇದು ಬಿಜೆಪಿಯಲ್ಲಿ ತೀವ್ರ ತಲ್ಲಣ ಹಾಗೂ ಸಂಚಲನಕ್ಕೆ ಅವಕಾಶ ಮಾಡಿಕೊಟ್ಟಿದೆ.

ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ ಮೇಲೆ ಪರಮಾಪ್ತ ಬಸವರಾಜ ಬೊಮ್ಮಾಯಿ ಅವರನ್ನು ತಮ್ಮಿಚ್ಛೆಯಂತೆ ಪಟ್ಟದ ಮೇಲೆ ಕೂರಿಸುವಲ್ಲಿ ಯಶಸ್ವಿಯಾದ ಯಡಿಯೂರಪ್ಪಗೆ ಇದು ಚಿಂತೆಗೆ ಹಚ್ಚುವಂತೆ ಮಾಡಿದೆ.

ಬಿಜೆಪಿ ಹೈಕಮಾಂಡ್ ನಿಧಾನಕ್ಕೆ ಯಡಿಯೂರಪ್ಪರನ್ನು ಮೂಲೆಗುಂಪು ಮಾಡುತ್ತಿದೆ ಎಂಬ ಶಂಕೆ ನಡುವೆಯೇ ಮಾಲ್ಡೀವ್ಸ್ ದ್ವಿಪಕ್ಕೆ ಪ್ರವಾಸ ಹೋಗಿ ಬಂದ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರನ ಮುಂದಿನ ರಾಜಕೀಯ ಭವಿಷ್ಯ ಏನು ಎಂಬ ಪ್ರಶ್ನೆಗೆ ಇದು ಕಾರಣವಾಗಿದೆ.

ಮಾಲ್ಡೀವ್ಸ್ ದ್ವೀಪದ ಪ್ರವಾಸದ ನಂತರ ಯಡಿಯೂರಪ್ಪ ಬೆಂಗಳೂರಿಗೆ ಹಿಂತಿರುಗಿದ ಮೇಲೆ ಕೋಟಿ ರೂಪಾಯಿ ಬೆಲೆ ಬಾಳುವ ಹೊಸ ಕಾರೊಂದನ್ನು ಖರೀದಿಸಿ ರಾಜ್ಯ ಪ್ರವಾಸಕ್ಕೆ ಅಣಿಯಾಗಿದ್ದರು. ಆ ಮೂಲಕ ಬಿಜೆಪಿಯಲ್ಲಿ ತಮ್ಮ ಚರಿಷ್ಮಾ ಉಳಿಸಿಕೊಳ್ಳುವ ಹಾಗೂ ಪುತ್ರ ವಿಜಯೇಂದ್ರನನ್ನು ಲಿಂಗಾಯುತ ಸಮುದಾಯದ ಪ್ರಬಲ ನಾಯಕನಾಗಿ ರೂಪಿಸುವ ಪ್ರಯತ್ನಕ್ಕೆ ಮುಂದಾಗಿದ್ದರು.

ಈಗ ನೋಡಿದರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮಗಳ ಮದುವೆ ನೆಪದಲ್ಲಿ ರಾಜ್ಯಕ್ಕೆ ಬಂದು ದಾವಣಗೆರೆಯಲ್ಲಿ ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅಮಿತ್ ಶಾ, ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ ನಡೆಯುತ್ತದೆ. ಪಕ್ಷ ಮರಳಿ ಅಧಿಕಾರಕ್ಕೆ ಬರಲಿದೆ ಎಂದು ನೀಡಿದ ಹೇಳಿಕೆ ಯಡಿಯೂರಪ್ಪ ಗರಬಡಿದು ಕೂರುವಂತೆ ಮಾಡಿದೆ.

ಈಗಾಗಲೇ 80ರ ಸನಿಹದಲ್ಲಿರುವ ಯಡಿಯೂರಪ್ಪ ಸಕ್ರಿಯ ರಾಜಕಾರಣದಲ್ಲಿದ್ದು ಮತ್ತೆ ಪಕ್ಷದ ಮೇಲೆ ಹಿಡಿತ ಸಾಧಿಸುವ ಸಲುವಾಗಿ ರಾಜ್ಯ ಪ್ರವಾಸಕ್ಕೆ ಮುಂದಾಗಿದ್ದಾರೆ ಎಂಬುದಕ್ಕಿಂತ ಮಗನ ರಾಜಕೀಯ ಭವಿಷ್ಯ ರೂಪಿಸುವುದೇ ಯಡಿಯೂರಪ್ಪ ಅವರ ರಾಜಕೀಯ ಸಕ್ರಿಯತೆ ಮತ್ತು ರಾಜ್ಯ ಪ್ರವಾಸದ ಹಿಂದಿನ ಪ್ರಮುಖ ಕಾರಣ.

ಬೊಮ್ಮಾಯಿ ಜಾಣ್ಮೆಯ ನಡೆ
ಒಂದು ತಿಂಗಳ ಆಡಳಿತವನ್ನಷ್ಟೇ ಪೂರೈಸಿರುವ ಬಸವರಾಜ ಬೊಮ್ಮಾಯಿ ಬಗ್ಗೆ ಅಮಿತ್ ಶಾ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ ನಿಜ. ಆದರೆ ಈ ಬಗ್ಗೆ ಜಾಣ್ಮೆ ಪ್ರದರ್ಶಿಸಿರುವ ಬೊಮ್ಮಾಯಿ ಮಾತ್ರ ಈವರೆಗೆ ಶಾ ಹೇಳಿಕೆ ಬಗ್ಗೆ ತುಟಿಬಿಚ್ಚಿಲ್ಲ.

ತುಟಿಬಿಚ್ಚಿ ರಾಡಿ ಮಾಡಿಕೊಳ್ಳುವ ಬದಲು ಸುಮ್ಮನೆ ಕೂತು ಎಲ್ಲವನ್ನೂ ಕಾದುನೋಡುವ ತಂತ್ರಕ್ಕೆ ಮೊರೆ ಹೋಗುವುದು ಲೇಸು ಎಂಬುದು ಬಸವರಾಜ ಬೊಮ್ಮಾಯಿ ಅವರ ಜಾಣ್ಮೆಯ ನಡೆಯ ಹಿಂದಿನ ಗುಟ್ಟು.

ಕೇಸರಿ ವರಿಷ್ಠರ ಚಾಣಾಕ್ಷತೆ
ಯಡಿಯೂರಪ್ಪರನ್ನು ಹೋಲಿಸಿದರೆ ಬಸವರಾಜಬೊಮ್ಮಾಯಿ ಸದ್ಯದ ಮಟ್ಟಿಗೆ ಯಾವುದೇ ರೀತಿಯಲ್ಲಿ ಸರಿಸಾಟಿ ಇಲ್ಲದಿರಬಹುದು. ಬಿಎಸ್ವೈ ಸಂಘಟನಾ ಚತುರತೆ ಮುಂದೆ ಬೊಮ್ಮಾಯಿ ಮಂಕಾಗಿ ಕಾಣಿಸಬಹುದು. ಆದರೆ ಬಿಜೆಪಿಯಲ್ಲಿ ನಿಜಕ್ಕೂ ಮೂಲೆಗುಂಪಾಗುತ್ತಿರುವ ಯಡ್ಡಿ ಅವರ ಜಾಗಕ್ಕೆ ಅವರ ಬತ್ತಳಿಕೆಯಲ್ಲಿದ್ದ ಬಾಣವನ್ನೇ ಬಿಜೆಪಿ ಹೈಕಮಾಂಡ್ ಪ್ರಯೋಗಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಯಕತ್ವಕ್ಕೆ ಒತ್ತು ನೀಡುವ ಮೂಲಕ ಪ್ರಬಲ ಲಿಂಗಾಯುತ ಓಟ್ ಬ್ಯಾಂಕ್ ಎಲ್ಲೂ ಕದಡದಂತೆ ಹಾಗೂ ರಾಜ್ಯದಲ್ಲಿ ಪಕ್ಷದ ಅಸ್ತಿತ್ವ ಸಡಿಲಗೊಳ್ಳದಂತೆ ನೋಡಿಕೊಳ್ಳುವ ಚಾಣಾಕ್ಷತೆ ಇದರ ಹಿಂದಿರಬಹುದು.

ಈಶ್ವರಪ್ಪ ಭಿನ್ನರಾಗ
ಆದರೆ ಸುಮ್ಮನೆ ಕೂರುವ ಜಾಯಮಾನಕ್ಕೆ ಸೇರದ ಪಕ್ಷದ ಮತ್ತೊಬ್ಬ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಸಾಮೂಹಿಕ ನಾಯಕತ್ವದಲ್ಲಿ ಮುಂದಿನ ಚುನಾವಣೆ ನಡೆದರೆ ಒಳಿತು ಎನ್ನುವ ಮೂಲಕ ತಮ್ಮ ಭಿನ್ನರಾಗ ಹಾಡಿದ್ದಾರೆ.

ಕೇಸರಿ ಪಡೆಯಲ್ಲಿ ಹಿರಿಯ ನಾಯಕರಾಗಿ ಅಪಾರ ರಾಜಕೀಯ ಅನುಭವ ಹೊಂದಿರುವ ಈಶ್ವರಪ್ಪ ರಾಜ್ಯದ ಮುಖ್ಯಮಂತ್ರಿಯಾಗುವ ಅರ್ಹತೆ ಹೊಂದಿದ್ದಾರೆ ನಿಜ. ಆದರೆ ಅವರ ಸಮಸ್ಯೆ ಎಂದರೆ, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಹೋಲಿಸಿದರೆ ಈಶ್ವರಪ್ಪ ಹಿಂದುಳಿದ ಸಮುದಾಯ ಇರಲಿ ಸ್ವತಃ ಕುರುಬ ಸಮುದಾಯದಲ್ಲಿ ಅಷ್ಟೇನೂ ಜನಮನ್ನಣೆ ಅಥವಾ ಜನಪ್ರಿಯತೆ ಪಡೆದಿರುವ ನಾಯಕರಲ್ಲ. ಹೀಗಾಗಿ ನಾಯಕತ್ವದ ಪ್ರಶ್ನೆ ಬಂದಾಗ ಬೊಮ್ಮಾಯಿ ಎದುರು ಪಕ್ಷ ವರಿಷ್ಠರ ದೃಷ್ಟಿಯಲ್ಲಿ ಈಶ್ವರಪ್ಪ ಮಸಕಾಗಿದ್ದಾರೆ.

ಆದರೆ ಈಶ್ವರಪ್ಪರನ್ನು ಹೊರತುಪಡಿಸಿದರೆ ಬಿಜೆಪಿಯಲ್ಲಿ ಸದ್ಯದ ಮಟ್ಟಿಗೆ ಕುರುಬ ಸಮುದಾಯದ ಮತ್ತೊಬ್ಬ ಪ್ರಬಲ ನಾಯಕನಿಲ್ಲ. ಹೀಗಾಗಿ ಈಶ್ವರಪ್ಪ ಈಗಲೂ ಮಂತ್ರಿಯಾಗಿ ಮುಂದುವರಿದಿದ್ದಾರೆ. ಕೇಸರಿ ನಾಯಕರಿಗೆ ಶರಣಾಗುವ ಬದಲು ಅವರಿಗೆ ಬೇರೆ ದಾರಿಯೂ ತೋಚದಂತಾಗಿದೆ.

ಬೊಮ್ಮಾಯಿ ಒಪ್ಪಲು ಸಿದ್ದರಾಗದ ಶೆಟ್ಟರ್
ಇನ್ನು ಮಾಜಿ ಸಿಎಂ ಜಗದೀಶ್ ಶೆಟ್ಟರ್, ಬೊಮ್ಮಾಯಿ ಸರ್ಕಾರ ಒಂದು ತಿಂಗಳಷ್ಟೇ ಪೂರೈಸಿದೆ. ಈ ಹಂತದಲ್ಲಿ ಅವರು ಪಾಸೋ, ಫೇಲೋ ಎಂದು ನಿರ್ಧರಿಸಲಾಗದು. ಚುನಾವಣೆ ಇನ್ನೂ ದೂರ ಇದೆ ಎನ್ನುವ ಮೂಲಕ ಬೊಮ್ಮಾಯಿ ನಾಯಕತ್ವಕ್ಕೆ ಈಗಲೇ ಅಷ್ಟು ಒತ್ತು ನೀಡುವ ಅಗತ್ಯ ಇಲ್ಲ ಇಲ್ಲ ಎಂಬ ಸಂದೇಶ ರವಾನಿಸಿದ್ದಾರೆ.

ಬೊಮ್ಮಾಯಿ ಸಂಪುಟ ಸೇರದೇ ತಮ್ಮ ಮಾತನ್ನು ಉಳಿಸಿಕೊಂಡ ಜಗದೀಶ್ ಶೆಟ್ಟರ್ ಸಕ್ರಿಯ ರಾಜಕೀಯದಲ್ಲಿ ಮುಂದುವರಿದಿದ್ದಾರೆ. ತಮ್ಮ ಪರಮಾಪ್ತ ಶಂಕರ ಮುನವಳ್ಳಿ ಅವರನ್ನು ಮಂತ್ರಿಯಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಖ್ಯವಾಗಿ ಬಿಜೆಪಿಯಲ್ಲಿ ಲಿಂಗಾಯತ ಸಮುದಾಯದ ದೊಡ್ಡ ನಾಯಕನಾಗಿ ಬೊಮ್ಮಾಯಿ ಅವರನ್ನು ಕಾಣಲು ಶೆಟ್ಟರ್ ಮನಸ್ಸು ಒಪ್ಪುತ್ತಿಲ್ಲ. ಹಾಗೆಂದು ಸಕ್ರಿಯ ರಾಜಕೀಯದಿಂದಲೂ ಅವರು ದೂರ ಸರಿದಿಲ್ಲ. ಮುಂದೊಂದು ದಿನ ಯಡಿಯೂರಪ್ಪ ತಿರಸ್ಕರಿಸಿರುವ ರಾಜ್ಯಪಾಲ ಹುದ್ದೆ ತಮ್ಮದಾಗಿಸಿಕೊಳ್ಳುವ ಹಾಗೂ ಬೊಮ್ಮಾಯಿ ಬದಲು ತಮ್ಮ ಪಠಾಲಂನ್ನು ಬೆಳೆಸುವ ಇರಾದೆ ಅವರದಾಗಿರಬಹುದು.

ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಅಶೋಕ್
ಇತ್ತ ಮಾಜಿ ಡಿಸಿಎಂ ಆರ್.ಅಶೋಕ್, ಮುಖ್ಯಮಂತ್ರಿ ನಾಯಕತ್ವದಲ್ಲಿ ಚುನಾವಣೆ ಎದುರಿಸುವುದು ಸಹಜ ಪ್ರಕ್ರಿಯೆ ಎನ್ನುವ ಮೂಲಕ ಅಮಿತ್ ಶಾ ಹೇಳಿಕೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪ ಪಠಾಲಂನಿಂದ ಜಾರಿಕೊಂಡು ಬದಲಾದ ರಾಜಕೀಯ ಪರಿಸ್ಥಿತಿಯ ಲಾಭ ಹಾಗೂ ಪಕ್ಷ ವರಿಷ್ಠರನ್ನು ಎದುರು ಹಾಕಿಕೊಳ್ಳದೇ ಉತ್ತಮ ರಾಜಕೀಯ ಭವಿಷ್ಯ ಕಂಡುಕೊಳ್ಳುವ ಉದ್ದೇಶ ಅಶೋಕ್ ಅವರದ್ದು. ಆದರೆ, ಡಿಸಿಎಂ ಆಗಿದ್ದ ಅಶೋಕ್ ಮತ್ತೆ ಡಿಸಿಎಂ ಆಗಲಿಲ್ಲ. ಜತೆಗೆ ಒಂದು ವೇಳೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ಬಂದರೆ ಒಕ್ಕಲಿಗ ಸಮುದಾಯಕ್ಕೆ ಸಿಎಂ ಸ್ಥಾನ ದಕ್ಕುವುದಿಲ್ಲ ಅಥವಾ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಂಡಿರಬಹುದು.

ತೇಪೆ ಹಾಕುತ್ತಿರುವ ಪ್ರಹ್ಲಾದ್ ಜೋಷಿ
ಇನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅಮಿತ್ ಶಾ ಹೇಳಿಕೆಗೆ ಮೊಹರು ಹಾಕುವ ಮೂಲಕ ಪಕ್ಷದಲ್ಲಿ ಯಾವುದೇ ಹಿರಿಯರನ್ನು ಕಡೆಗಣಿಸಿಲ್ಲ, ಮುಂಬರುವ ದಿನಗಳಲ್ಲಿ ಅವರ ರಾಜಕೀಯ ಅನುಭವವನ್ನು ಪಕ್ಷ ಸಮರ್ಪಕವಾಗಿ ಬಳಸಿಕೊಳ್ಳಲಿದೆ ಎನ್ನುವ ಮೂಲಕ ತೇಪೆ ಹಾಕುವ ಹಾಗೂ ಮುಂಬರುವ ದಿನಗಳಲ್ಲಿ ಸ್ಪೋಟಗೊಳ್ಳಬಹುದಾದ ಅಸಮಾಧಾನವನ್ನು ತಡೆಯುವ ಕೆಲಸಕ್ಕೆ ಮುಂದಾಗಿದ್ದಾರೆ.

ದಾರಿ ಕಾಣದ ಯಡಿಯೂರಪ್ಪ
ಅತಿ ಮುಖ್ಯವಾಗಿ ಯಡಿಯೂರಪ್ಪ ಮತ್ತು ಬೆಂಬಲಿಗ ಶಾಸಕರ್ಯಾರೂ ಅಮಿತ್ ಶಾ ರಾಜ್ಯ ಭೇಟಿ ಸಂದರ್ಭದಲ್ಲಿ ದಾವಣಗೆರೆಯತ್ತ ಮುಖ ಮಾಡಲಿಲ್ಲ ಎಂಬುದು ಗಮನಾರ್ಹ. ರಾಜ್ಯ ರಾಜಕಾರಣದಿಂದ ತಮ್ಮನ್ನು ದೂರ ಇಡುವ ಹಾಗೂ ಮಗ ವಿಜಯೇಂದ್ರನಿಗೆ ಪರೋಕ್ಷವಾಗಿ ಅವಕಾಶ ನಿರಾಕರಿಸುವ ಅಮಿತ್ ಶಾ ಚಾಣಾಕ್ಷತೆಯನ್ನು ಯಡಿಯೂರಪ್ಪ ಮೊದಲೇ ಅರಿತಿರಬಹುದು. ತೀವ್ರ ಒತ್ತಡ ಮತ್ತು ಲಾಬಿ ನಡುವೆಯೂ ತಮ್ಮನ್ನು ಅವಧಿ ಪೂರ್ಣಗೊಳಿಸಲು ಬಿಡದ ಹಾಗೂ ಅಪ್ಪನ ಕುರ್ಚಿ ಉಳಿಸಲು ದೆಹಲಿಯಲ್ಲಿ ಬೀಡು ಬಿಟ್ಟಿದ್ದ ಪುತ್ರ ವಿಜಯೇಂದ್ರನ ಭೇಟಿಗೆ ಅವಕಾಶ ನೀಡದ ಅಮಿತ್ ಶಾ ನಡೆಯೂ ಇದಕ್ಕೆ ಕಾರಣವಾಗಿರಬಹುದು.

ಮಗನ ಪ್ರತಿಷ್ಠಾಪನೆಗೆ ಕಡಿವಾಣ
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಂತೆ ತಮ್ಮ ಪುತ್ರರನ್ನು ರಾಜಕೀಯವಾಗಿ ಬೆಳೆಸುವ ಪ್ರಬಲ ನಾಯಕರಾಗಿ ರೂಪಿಸುವ ಇಚ್ಚೆ ಹಾಗೂ ಆಕಾಂಕ್ಷೆಯನ್ನು ಯಡಿಯೂರಪ್ಪ ಮೊದಲಿನಿಂದಲೂ ಹೊಂದಿದ್ದಾರೆ. ಆದರೆ ಪಕ್ಷದ ಹೈಕಮಾಂಡ್ ಅದಕ್ಕೆ ಆಗಿಂದಾಗ್ಗೆ ಕಡಿವಾಣ ಹಾಕುತ್ತಲೇ ಬಂದಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪುತ್ರ ವಿಜಯೇಂದ್ರನ ಸ್ಪರ್ಧೆಗೆ ಬಿಜೆಪಿ ಹೈಕಮಾಂಡ್ ಅವಕಾಶ ನೀಡಲಿಲ್ಲ. ಬೊಮ್ಮಾಯಿ ಸಂಪುಟದಲ್ಲಿ ಸ್ಥಾನಮಾನ ದೊರಕಿಸುವಲ್ಲಿಯೂ ಯಡಿಯೂರಪ್ಪ ವಿಫಲರಾದರು. ವಂಶಪಾರಂಪರ್ಯ ಅಧಿಕಾರದ ಸಿದ್ದಾಂತಕ್ಕೆ ಬಿಜೆಪಿ ವಿರುದ್ದವಾಗಿರುವುದೇ ಇದಕ್ಕೆ ಮುಖ್ಯಕಾರಣ.

ಒಟ್ಟಾರೆ, ಅಮಿತ್ ಶಾ ಭೇಟಿ ರಾಜ್ಯ ಬಿಜೆಪಿಯಲ್ಲಿ ತೀರ್ವ ಸಂಚಲನ ಸೃಷ್ಟಿಸಿದೆ. ರಾಜ್ಯ ರಾಜಕೀಯದಲ್ಲಿ ಅತ್ಯಂತ ಮಹತ್ವ ಪಡೆದಿದೆ. ಬಿಜೆಪಿ ವರಿಷ್ಠರ ಕೃಪಾಶೀರ್ವಾದದೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಯಡಿಯೂರಪ್ಪ ಅವರಿಗೆ ಪರ್ಯಾಯ ನಾಯಕರಾಗಿ ಬೆಳೆಸುವ ಸ್ಪಷ್ಟ ಮತ್ತು ಖಚಿತ ಸಂದೇಶ ರವಾನೆಯಾಗಿದೆ. ಪಕ್ಷಕ್ಕಿಂತ ಹೆಚ್ಚಾಗಿ ತಮ್ಮ ವರ್ಚಸ್ಸು ವೃದ್ಧಿಗೆ ರಾಜ್ಯ ಪ್ರವಾಸ ಹಮ್ಮಿಕೊಳ್ಳಲು ಉದ್ದೇಶಿಸಿದ್ದ ಅಪ್ಪ-ಮಗನ ಆಸೆಗೆ ತಣ್ಣೀರು ಎರೆಚುವಂತಾಗಿದೆ.

ಮುಖ್ಯಮಂತ್ರಿ ಬೊಮ್ಮಾಯಿ ಬಿಜೆಪಿ ಪಾಲಿಗೆ ಲಿಂಗಾಯತ ಸಮುದಾಯದ ದೊಡ್ಡ ನಾಯಕರಾಗಿ ಹೊರಹೊಮ್ಮಲಿದ್ದಾರೆ. ಎಲ್ಲರ ವಿಶ್ವಾಸ ಹೇಗೆ ಗಳಿಸಿಕೊಳ್ಳಲಿದ್ದಾರೆ ಮುಖ್ಯವಾಗಿ ಯಡಿಯೂರಪ್ಪ ಎದುರು ಬೆಳೆಯುವ ಸವಾಲನ್ನು ಹೇಗೆ ನಿಭಾಯಿಸಲಿದ್ದಾರೆ ಎಂಬುದನ್ನು ಕಾಲವೇ ನಿರ್ಣಯಿಸಲಿದೆ.
ಮತ್ತೊಂದೆಡೆ ತಾತ್ಕಾಲಿಕವಾಗಿ ತಮ್ಮ ರಾಜ್ಯ ಪ್ರವಾಸವನ್ನು ಮುಂದೂಡಿರುವ ಯಡಿಯೂರಪ್ಪ ಅವರ ಮುಂದಿನ ರಾಜಕೀಯ ದಾಳವೇನು ಎಂಬುದು ಕುತೂಹಲಕಾರಿಯಾಗಿದೆ. ಯಡಿಯೂರಪ್ಪರನ್ನು ಹೊಗಳಿರುವ ಅಮಿತ್ ಶಾ, ಮುಂಬರುವ ದಿನಗಳಲ್ಲಿ ರಾಜಕೀಯವಾಗಿ ಅವರಿಗೆ ಯಾವ ಸ್ಥಾನಮಾನ ಹಾಗೂ ಜವಾಬ್ದಾರಿ ದೊರಕಿಸಲಿದ್ದಾರೆ ಅಥವಾ ರಾಜ್ಯ ರಾಜಕೀಯದಲ್ಲಿ ಅವರ ಪಾತ್ರವನ್ನು ಸಂಪೂರ್ಣ ಗೌಣವಾಗಿಸುವರೇ ಎಂಬುದಕ್ಕೆ ಮುಂಬರುವ ದಿನಗಳಲ್ಲಿ ಉತ್ತರ ದೊರೆಯಲಿದೆ.

Spread the love

Related Articles

Leave a Reply

Your email address will not be published. Required fields are marked *

Back to top button