ಯಡಿಯೂರಪ್ಪ ಅವರನ್ನು ಸೈಡ್ಲೈನ್ ಮಾಡೋ ಪ್ರಶ್ನೆಯೇ ಇಲ್ಲ: ರೇಣುಕಾಚಾರ್ಯ

ದಾವಣಗೆರೆ: ಮುಂದಿನ ಚುನಾವಣೆಯನ್ನು ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಎದುರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದು, ಯಾರು ಮುಖ್ಯಮಂತ್ರಿ ಆಗಿರುತ್ತಾರೋ ಅವರ ನೇತೃತ್ವದಲ್ಲಿ ಹೋಗುವುದು ಸಹಜ. ಯಡಿಯೂರಪ್ಪರ ಮಾರ್ಗದರ್ಶನವೂ ಇರುತ್ತದೆ ಎಂದು ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ನ್ಯಾಮತಿಯಲ್ಲಿ ಮಾತನಾಡಿದ ಅವರು, ಅಮಿತ್ ಶಾ ಹೇಳಿಕೆಯನ್ನು ಮಾಧ್ಯಮಗಳಲ್ಲಿ ತಪ್ಪಾಗಿ ಬಿಂಬಿಸಲಾಗುತ್ತಿದೆ. ಯಡಿಯೂರಪ್ಪ ಅವರನ್ನು ಸೈಡ್ ಲೈನ್ ಮಾಡಿದರು. ಜಗದೀಶ್ ಶೆಟ್ಟರ್ ಅವರನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬುದು ಶುದ್ಧ ಸುಳ್ಳು ಎಂದು ತಿಳಿಸಿದರು.
ಯಡಿಯೂರಪ್ಪ ಸಿಎಂ ಆಗಿದ್ದಾಗ ಕೋವಿಡ್ ನಿಯಂತ್ರಣಕ್ಕೆ ಹಾಗೂ ಅಭಿವೃದ್ಧಿಯಂತಹ ಒಳ್ಳೆಯ ಕೆಲಸ ಮಾಡಿದ್ದಾರೆ. ಯಡಿಯೂರಪ್ಪ ಅವರ ಕಾರ್ಯವೈಖರಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆ. ಪಿ. ನಡ್ಡಾ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮೆಚ್ಚಿಕೊಂಡಿದ್ದಾರೆ. ಯಡಿಯೂರಪ್ಪರ ಮಾರ್ಗದರ್ಶನ ಪಡೆಯಲಾಗುತ್ತದೆ. ಹಾಗೆಂದ ಮಾತ್ರಕ್ಕೆ ಸೈಡ್ ಲೈನ್ ಮಾಡಲಾಗ್ತಿದೆ ಎಂಬ ರೀತಿಯಲ್ಲಿ ಅಪಪ್ರಚಾರ ನಡೆಸಲಾಗ್ತಿದೆ. ಯಡಿಯೂರಪ್ಪ ಅವರು ಪಕ್ಷ ಕಟ್ಟಲು ಕೊಟ್ಟಿರುವ ಕೊಡುಗೆ ದೊಡ್ಡದು ಎಂದು ಹೇಳಿದರು.
ಎಂ. ಬಿ. ಪಾಟೀಲ್ ಅವರು ವೀರಶೈವ ಲಿಂಗಾಯತ ಮುಖಂಡರು, ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಎತ್ತಿದ್ದಕ್ಕೆ ಜನರು ತಕ್ಕ ಪಾಠ ಕಲಿಸಿದ್ದಾರೆ. ಅಖಂಡ ವೀರಶೈವ ಲಿಂಗಾಯತ ಸಮುದಾಯ ಬೇಕು. ಪ್ರತ್ಯೇಕ ಧರ್ಮದ ಅವಶ್ಯಕತೆ ಇಲ್ಲ. ಇದೇ ರೀತಿ ಮಾತನಾಡಿದರೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ರೇಣುಕಾಚಾರ್ಯ ಹೇಳಿದರು.




