
ಮುಂಬೈ: ವಿಧಾನ ಪರಿಷತ್ ಸೀಟುಗಳನ್ನು ಅನಿರ್ದಿಷ್ಟಾವಧಿ ಖಾಲಿಯಾಗಿರಿಸುವಂತಿಲ್ಲ. ಈ ವಿಚಾರದಲ್ಲಿ ತೀರ್ಮಾನಿಸಲು 8 ತಿಂಗಳಷ್ಟು ವಿಳಂಬವಾಗಿರುವುದು ನ್ಯಾಯೋಚಿತವಲ್ಲ ಎಂದು ಬಾಂಬೆ ಹೈಕೋರ್ಟ್ ಮಹಾರಾಷ್ಟ್ರ ರಾಜ್ಯಪಾಲರಿಗೆ ನಯವಾಗಿಯೇ ತಿವಿದಿದೆ.
ಗವರ್ನರ್ ಮತ್ತು ಮುಖ್ಯಮಂತ್ರಿ ಪರಿಷತ್ಗೆ ಸದಸ್ಯರ ನಾಮಕರಣ ವಿಚಾರವನ್ನು ಚರ್ಚಿಸಿ ಬಗೆಹರಿಸಿಕೊಳ್ಳಬೇಕು ಎಂದು ಹೈಕೋರ್ಟ್ ಸೂಚಿಸಿದೆ.
ವಿಧಾನ ಪರಿಷತ್ಗೆ 12 ಸದಸ್ಯರ ನಾಮಕರಣ ವಿಚಾರದಲ್ಲಿ ಗವರ್ನರ್ ವಿಳಂಬ ಮಾಡುತ್ತಿರುವುದರ ವಿರುದ್ಧ ಮಹಾರಾಷ್ಟ್ರ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿತ್ತು.
ವಿಚಾರಣೆ ನಡೆಸಿದ ಹೈಕೋರ್ಟ್, ರಾಜ್ಯಪಾಲರಿಗೆ ಆದೇಶ ಮಾಡಲಾಗದು. ಆದರೆ, ರಾಜ್ಯಪಾಲರು ಈ ವಿಚಾರವಾಗಿ ಆದಷ್ಟು ಬೇಗ ತೀರ್ಮಾನಿಸುವರೆಂದು ಈ ನ್ಯಾಯಾಲಯ ಆಶಿಸುತ್ತದೆ ಎಂದು ಹೇಳಿದೆ.
ಪಟ್ಟಿಯಲ್ಲಿರುವ ಯಾವುದೇ ಹೆಸರಿನ ಬಗ್ಗೆ ತಕರಾರಿದ್ದಲ್ಲಿ ಗವರ್ನರ್ ಮತ್ತು ಮುಖ್ಯಮಂತ್ರಿ ಅದನ್ನು ಚರ್ಚಿಸಿ ಬಗೆಹರಿಸಿಕೊಳ್ಳಬೇಕು ಎಂದು ಹೈಕೋರ್ಟ್ ಸೂಚಿಸಿದೆ.
ಸರ್ಕಾರ ಶಿಫಾರಸು ಮಾಡಿರುವ ಹೆಸರುಗಳ ಪಟ್ಟಿ ಅಂಗೀಕರಿಸುವ ಇಲ್ಲವೆ ಹಿಂತಿರುಗಿಸುವ ರಾಜ್ಯಪಾಲರ ಪ್ರಕ್ರಿಯೆ ಒಂದು ನ್ಯಾಯೋಚಿತ ವಾಯಿದೆಯೊಳಗೆ ಆಗಬೇಕು. ಪರಿಷತ್ ಸೀಟುಗಳನ್ನು ಖಾಲಿಯಿರಿಸುವಂತಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಬೇಗ ತಮ್ಮ ತೀರ್ಮಾನವನ್ನು ಪ್ರಕಟಿಸಲಾಗದಿರುವುದಕ್ಕೆ ರಾಜ್ಯಪಾಲರಿಗೆ ಸೂಕ್ತ ಕಾರಣಗಳಿದ್ದಲ್ಲಿ, ಸಾಧ್ಯವಿರುವಷ್ಟೂ ಶೀಘ್ರವಾಗಿ ಇತ್ಯರ್ಥಪಡಿಸಬೇಕು. 8 ತಿಂಗಳ ಅವಧಿ ನ್ಯಾಯೋಚಿತ ಸಮಯಕ್ಕಿಂತ ಹೆಚ್ಚಾಯಿತು ಎಂದು ಕೋರ್ಟ್ ಹೆಳಿದೆ.
ರಾಜ್ಯಸರ್ಕಾರ ಪರಿಷತ್ಗೆ 12 ಜನ ನಾಮಾಂಕಿತರ ಪಟ್ಟಿಯನ್ನು 8 ತಿಂಗಳ ಹಿಂದೆಯೇ ರಾಜ್ಯಪಾಲರಿಗೆ ಕಳಿಸಿತ್ತು. ಆದರೆ ಗವರ್ನರ್ ಭಗತ್ಸಿಂಗ್ ಕೋಶ್ಯಾರಿ ಅದರ ಬಗ್ಗೆ ಯಾವ ತೀರ್ಮಾನವನ್ನು ಕೈಗೊಂಡಿರಲಿಲ್ಲ.
ಅವರು ಏನಾದರೊಂದು ತೀರ್ಮಾನ ತೆಗೆದುಕೊಳ್ಳಲೇಬೇಕು. ಅದನ್ನು ಹಾಗೇ ಇಟ್ಟುಕೊಳ್ಳುವಂತಿಲ್ಲ ಎಂದು ವಿಚಾರಣೆ ವೇಳೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಸರ್ಕಾರ ಕಳಿಸಿದ್ದ 12 ಜನರ ಪಟ್ಟಿಯಲ್ಲಿ ನಟಿ, ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್, ಕಾಂಗ್ರೆಸ್ ನಾಯಕ ಸಚಿನ್ ಸಾವಂತ್ ಅವರ ಹೆಸರುಗಳೂ ಇವೆಯೆನ್ನಲಾಗಿದೆ.



