ಭತ್ತ ನಾಟಿ ಕೆಲಸದಲ್ಲಿ ಜೊತೆಯಾದ ಶಾಸಕ ಎಂಪಿ ಕುಮಾರಸ್ವಾಮಿ

ಚಿಕ್ಕಮಗಳೂರು: ಭತ್ತದ ಗದ್ದೆಯೊಂದರಲ್ಲಿ ಮಹಿಳೆಯರು ಸೋಬಾನೆ ಪದ ಹಾಡಿಕೊಂಡು ಭತ್ತ ನಾಟಿ ಮಾಡುತ್ತಿದ್ದ ಸ್ಥಳಕ್ಕೆ ಶಾಸಕ ಎಂಪಿ ಕುಮಾರಸ್ವಾಮಿ ಧಾವಿಸಿ ತಾವೇನೂ ಕಮ್ಮಿಯಿಲ್ಲ ಎಂಬಂತೆ ಗದ್ದೆಗಿಳಿದು ನಾಟಿ ಕಾರ್ಯಕ್ಕೆ ಸಾಥ್ ನೀಡಿದ್ದಾರೆ.
ಕೊಟ್ಟಿಗೆಹಾರದ ದೇವನಗೂಲ್ ಎಂಬಲ್ಲಿ ಸುಂದರೇಶ್‌ಗೌಡ ಎಂಬುವರ ಗದ್ದೆಯಲ್ಲಿ ಭತ್ತದ ಸಸಿ ನಾಟಿ ಕಾರ್ಯ ನಡೆಯುತ್ತಿದ್ದಾಗ ಆ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ತಮ್ಮ ವಾಹನ ನಿಲ್ಲಿಸಿ, ಗದ್ದೆಗೆ ಇಳಿದು ಸಸಿಗಳನ್ನು ನೆಟ್ಟು ಕೆಲಕಾಲ ನಾಟಿ ಮಾಡಿದರು. ಇನ್ನೊಂದೆಡೆ ಹಾರೆ ಹಿಡಿದು ಮಣ್ಣು ಹದಗೊಳಿಸುವುದನ್ನು ತೋರಿಸಿದ್ದಲ್ಲದೆ, ಟಿಲ್ಲರ್ ಯಂತ್ರದ ಹ್ಯಾಂಡಲ್ ಹಿಡಿದು ಚಾಲನೆ ಮಾಡುವ ಮೂಲಕವೂ ಗಮನ ಸೆಳೆದರು. ಬಳಿಕ ಗದ್ದೆಯಲ್ಲೇ ಮಧ್ಯಾಹ್ನದ ಭೋಜನ ಮಾಡಿದರು. ಶಾಸಕರ ನಡೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಕುಮಾರಸ್ವಾಮಿ ಮಾತನಾಡಿ, ಯುವಕರು ಕೃಷಿಯಿಂದ ವಿಮುಖರಾಗಬಾರದು. ಕೃಷಿಯತ್ತ ಯುವಕರನ್ನು ಪ್ರೇರೇಪಿಸಬೇಕು. ಈ ನಿಟ್ಟಿನಲ್ಲಿ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ ಎಂದರು.
ಸಿಎಂ ಬದಲಾವಣೆ ಬಳಿಕ ನಿರಂತರ ರಾಜಕೀಯ ಜಂಜಾಟದೊಳಗೇ ಸಿಲುಕಿ ಹೈರಾಣಾಗಿದ್ದ ಎಂಪಿ ಕುಮಾರಸ್ವಾಮಿ ಇಂದು ಮಲೆನಾಡಿನ ಗದ್ದೆ ನಾಟಿ ಕಾರ್ಯದಲ್ಲಿ ಪಾಲ್ಗೊಳ್ಳುವ ಮೂಲಕ ಕೊಂಚ ರಿಲ್ಯಾಕ್ಸ್ ಆಗಿದ್ದು ಕಂಡುಬಂದಿದೆ.




