ಶಾಸಕ ಕೆ ಜಿ ಬೋಪಯ್ಯಗೆ 1 ಕೋಟಿ ರೂ ಬೇಡಿಕೆ : ಆರೋಪಿ ಬಂಧನ

ಮಡಿಕೇರಿ : ಕಳೆದ ವಾರ ವಿರಾಜಪೇಟೆ ಶಾಸಕಾದ ಕೆ ಜಿ ಬೋಪಯ್ಯ ಅವರಿಗೆ ಮೊಬೈಲ್ ಕರೆ ಮಾಡಿದ್ದ ವ್ಯಕ್ತಿ ನಿಮ್ಮ ಮನೆಯಲ್ಲಿ ಹಣ ಇರುವ ಬಗ್ಗೆ ಮಾಹಿತಿ ಇದೆ, ನಾನು ಎಸಿಬಿ ಅಧಿಕಾರಿ, ದಾಳಿ ಮಾಡಬಾರದೆಂದಿದ್ದರೆ 1 ಕೋಟಿ ರೂಪಾಯಿ ನನ್ನ ಖಾತೆಗೆ ಜಮಾ ಮಾಡಿ” ಎಂದು ತಿಳಿಸಿದ್ದ..
“ತಾನು ಎಸಿಬಿ ಅಧಿಕಾರಿ, 1 ಕೋಟಿ ರೂಪಾಯಿ ಕೊಡಿ, ಇಲ್ಲಾಂದ್ರೆ ರೈಡ್ ಮಾಡ್ತೀನಿ” ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರಿಗೆ ಕರೆ ಮಾಡಿದ್ದ ವ್ಯಕ್ತಿ ಈಗ ಮಡಿಕೇರಿ ಪೊಲೀಸರ ಅತಿಥಿಯಾಗಿದ್ದಾನೆ. ತುಮಕೂರು ಜಿಲ್ಲೆಯ ಕೊರಟಗೆರೆ ನಿವಾಸಿ ಆನಂದ (31) ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಈತ ರೌಡಿ ಶೀಟರ್ ಎಂದು ತಿಳಿದು ಬಂದಿದೆ.
ಅಪರಿಚಿತ ಕರೆಗೆ ಉತ್ತರಿಸಿ ದಾಳಿ ಮಾಡುವುದಾದರೆ ಮಾಡಿ ಎಂದು ಹೇಳಿದ ಬೋಪಯ್ಯ ಅವರು ಸಂಶಯಗೊಂಡು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರ ತಂಡ ಮೊಬೈಲ್ ಲೊಕೇಶನ್ ಆಧರಿಸಿ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಆನಂದನನ್ನು ಬಂಧಿಸಿದರು. ಆಂಧ್ರ ಗಡಿಯಿಂದ ರೈಲಿನಲ್ಲಿ ಪ್ರಯಾಣ ಬೆಳೆಸಿದ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಈತನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ತನಿಖೆ ಮುಂದುವರೆದಿದ್ದು, ಮತ್ತಷ್ಟು ಪ್ರಕರಣಗಳು ಬಯಲಾಗುವ ಸಾಧ್ಯತೆಗಳಿದ್ದು, ಅಪರಾಧ ಪತ್ತೆದಳದ ಠಾಣಾಧಿಕಾರಿ ಮೋಹನ್ ರಾಜ್, ಸಿಬ್ಬಂದಿಗಳಾದ ವಸಂತ್, ನಾಗರಾಜ್, ನಂದಕುಮಾರ್ ಮತ್ತಿತರ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿತು.



