
ಕೋಲ್ಕತ್ತಾ: ಟಿಎಂಸಿ ನಾಯಕನ ಹತ್ಯೆ ನಂತರ ರೊಚ್ಚಿಗೆದ್ದ ಟಿಎಂಸಿ ಕಾರ್ಯಕರ್ತರು ಮನೆಗಳಿಗೆ ಬೆಂಕಿ ಹಚ್ಚಿದ ಪರಿಣಾಮ ಮಕ್ಕಳು ಮಹಿಳೆಯರು ಸೇರಿದಂತೆ 10 ಜನ ಸಜೀವ ದಹನವಾದ ಘಟನೆ ಪಶ್ಚಿಮ ಬಂಗಾಳದ ಬಿರ್ಭೂಮ್ನಲ್ಲಿ ನಡೆದಿದೆ.
ರಾಮ್ಪುರಹತ್ನಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದ ಮುಖಂಡನೋರ್ವ ಕಚ್ಚಾ ಬಾಂಬ್ ಸ್ಫೋಟದಿಂದ ಮೃತಪಟ್ಟಿದ್ದ. ಬಾಡು ಶೇಕ್ ಕಚ್ಚಾ ಬಾಂಬ್ ಸ್ಫೋಟಕ್ಕೆ ಬಲಿಯಾದ ವ್ಯಕ್ತಿ. ಈತನ ಸಾವಿನಿಂದ ರೊಚ್ಚಿಗೆದ್ದ ಗುಂಪೊಂದು ಮನೆಗಳಿಗೆ ಬೆಂಕಿ ಹಚ್ಚಿದ ಪರಿಣಾಮ ಮಕ್ಕಳು ಮಹಿಳೆಯರು ಸೇರಿ ಒಟ್ಟು ಹತ್ತು ಜನ ಸಜೀವವಾಗಿ ದಹನಗೊಂಡಿದ್ದಾರೆ. ಒಟ್ಟು ಹತ್ತು ಮನೆಗಳಿಗೆ ಬೆಂಕಿ ಹಚ್ಚಲಾಗಿದ್ದು, ಮನೆಗಳೆಲ್ಲಾ ಸುಟ್ಟು ಭಸ್ಮವಾಗಿವೆ.

ಈ ಮನೆಗಳಿಂದ ಒಟ್ಟು 10 ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಮೃತಪಟ್ಟವರಲ್ಲಿ 10 ಮಹಿಳೆಯರು ಹಾಗೂ ಎರಡು ಮಕ್ಕಳು ಸೇರಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಹೇಳಿದ್ದಾರೆ. ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಬಂಗಾಳದ ಬಿರ್ಭೂಮ್ ಜಿಲ್ಲೆಯ ರಾಮ್ಪುರಹತ್ನಲ್ಲಿ ಕೆಲವು ಸುಟ್ಟ ಮನೆಗಳಿಂದ ಏಳು ಮೃತದೇಹಗಳನ್ನು ಮಂಗಳವಾರ ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟಿಎಂಸಿ ಪಕ್ಷದೊಳಗಿನ ಆಂತರಿಕ ಪೈಪೋಟಿಯಿಂದಾಗಿ ಈ ಹಿಂಸಾಚಾರ ನಡೆದಿದೆ ಎಂದು ಸಿಪಿಐ(ಎಂ) ನಾಯಕ ಸುಜನ್ ಚಕ್ರವರ್ತಿ ಆರೋಪಿಸಿದ್ದಾರೆ. ಆದರೆ, ಟಿಎಂಸಿ ಜಿಲ್ಲಾಧ್ಯಕ್ಷ ಅನುಬ್ರತಾ ಮಂಡಲ್, ಯಾವುದೇ ಕೊಲೆ ಅಥವಾ ಹಿಂಸಾಚಾರ ನಡೆದಿಲ್ಲ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡು ಈ ದುರಂತ ಸಂಭವಿಸಿದೆ ಎಂದು ಹೇಳಿದ್ದಾರೆ.

ಈ ಘಟನೆಯು ಸಿಪಿಐ(ಎಂ) ಆಡಳಿತದಲ್ಲಾದ ಸಾಮೂಹಿಕ ಹತ್ಯೆ ಪ್ರಕರಣವನ್ನು ಹೋಲುತ್ತದೆ ಎಂದು ಬಿಜೆಪಿ ಆರೋಪಿಸಿದೆ. ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕೆಂದು ಬಿಜೆಪಿ ಆಗ್ರಹಿಸಿದೆ. ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಲಾಗಿದೆ ಎಂಬುದು ದೃಢಪಟ್ಟರೆ, 2011 ರಲ್ಲಿ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಇದು ಮೊದಲ ಸಾಮೂಹಿಕ ರಾಜಕೀಯ ಹತ್ಯೆಯಾಗಲಿದೆ. 2007 ರಲ್ಲಿ ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಸಾಮೂಹಿಕ ಹತ್ಯೆಗಳ ಘಟನೆಗಳು ನಡೆದಿದ್ದವು.
ಪಶ್ಚಿಮ ಬಂಗಾಳದಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಾಮಾನ್ಯವೆನಿಸಿದೆ. ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಕಮರ್ ಹಾಟಿ ಗೋಲಘಾಟ್ ಪ್ರದೇಶದ ಮನೆಯೊಂದರಲ್ಲಿ 2020ರಲ್ಲಿ ಕಚ್ಚಾ ಬಾಂಬ್ ಸ್ಫೋಟಗೊಂಡು ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿತ್ತು. ಇದೀಗ ಬಾಂಬ್ ಸ್ಫೋಟಕ್ಕೆ ಓರ್ವ ಮೃತಪಟ್ಟರೆ, ಅದರ ಸೇಡಿಗೆ 10 ಮಂದಿ ಬೆಂದು ಹೋಗಿದ್ದಾರೆ.



