ಬಿಟ್ ಕಾಯಿನ್ ಹಗರಣದ ಸತ್ಯಾಂಶ ಹೊರಬರಲಿದೆ, ಕಾಯಬೇಕಷ್ಟೇ: ಬಿ ವೈ ವಿಜಯೇಂದ್ರ

ದಾವಣಗೆರೆ: ಬಿಟ್ ಕಾಯಿನ್ ವಿಚಾರವಾಗಿ ಕಾಂಗ್ರೆಸ್ ಇಲ್ಲಸಲ್ಲದ ಆರೋಪ ಮಾಡುತ್ತಿದೆ. ಕಳೆದ ಚುನಾವಣೆಗಳಲ್ಲಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗಾರೊಂದಿಗೆ ಮಾತಣಾಡಿದ ಅವರು ಕಳೆದ ಕೆಲ ದಿನಗಳಿಂದ ವಿರೋಧ ಪಕ್ಷದವರು ಬಿಟ್ ಕಾಯಿನ್ ವಿಚಾರ ತೆಗೆದು ಟೀಕೆ ಮಾಡುತ್ತಿದ್ದಾರೆ. ಬಿಜೆಪಿ ಮುಖಂಡರು, ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ ಟೀಕಿಸುತ್ತಿದ್ದಾರೆ. ಇದೆಲ್ಲವನ್ನೂ ಕಾಂಗ್ರೆಸ್ ಹತಾಶೆ ಮನೋಭಾವದಿಂದ ಮಾಡುತ್ತಿದೆ ಎಂದು ಹೇಳಿದರು.
ಬಿಟ್ ಕಾಯಿನ್ ಹಗರಣ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ವಿನಾ ಕಾರಣ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಮುಖಂಡರ ಹೆಸರು ಹೇಳುವ ಮೂಲಕ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಕಾಂಗ್ರೆಸ್ ಶಾಸಕ ಹ್ಯಾರೀಸ್ ಕಿರಿಯ ಪುತ್ರ ನಲಪಾಡ್ ಸೇರಿ ಕಾಂಗ್ರೆಸ್ ನಾಯಕರ ಹೆಸರು ಕೇಳಿ ಬರುತ್ತಿದೆ. ಕುಂಬಳ ಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಳ್ಳುವಂತಿದೆ. ನೋಡೋಣ. ಈಗಾಗಲೇ ಸಿಎಂ ಬಸವರಾಜ್ ಬೊಮ್ಮಾಯಿ ಅವರು ತನಿಖೆ ನಡೆಯುತ್ತಿದೆ ಎಂಬುದಾಗಿ ಹೇಳಿದ್ದಾರೆ. ಬರುವ ದಿನಗಳಲ್ಲಿ ಸತ್ಯಾಂಶ ಹೊರ ಬರಲಿದೆ. ಯಾರೇ ಭಾಗಿಯಾಗಿದ್ದರೂ ಯಾವುದೇ ಕಾರಣಕ್ಕೂ ಮುಚ್ಚಿಡುವುದಕ್ಕೂ ಆಗಲ್ಲ. ಎಲ್ಲವೂ ಜನರ ಮುಂದೆ ಬಂದೇ ಬರುತ್ತದೆ ಎಂದು ಹೇಳಿದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ಬಳಿಕ ನಳಿನ್ ಕುಮಾರ್ ಕಟೀಲ್ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಉಪಚುನಾವಣೆಗಳು ಹಾಗೂ ಕಾರ್ಪೊರೇಷನ್ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ. ಪಕ್ಷದ ಬಲವರ್ಧನೆ ಹಾಗೂ ಸಂಘಟನೆ ವಿಚಾರದಲ್ಲಿ ಬಲಶಾಲಿಯಾಗುತ್ತಿದೆ. ಅಧ್ಯಕ್ಷರ ಬದಲಾವಣೆ ವಿಚಾರ ಕೇವಲ ಊಹಾಪೋಹ ಅಷ್ಟೇ. ಯಾರೂ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ತಮ್ಮ ಅವಧಿಯನ್ನು ಕಟೀಲ್ ಅವರು ಪೂರ್ಣಗೊಳಿಸಲಿದ್ದಾರೆ ಎಂದು ಹೇಳಿದರು.
ಡಿಸೆಂಬರ್ ನಲ್ಲಿ 25 ಕ್ಷೇತ್ರಗಳಿಗೆ ವಿಧಾನ ಪರಿಷತ್ ಚುನಾವಣೆ ನಡೆಯುತ್ತಿದ್ದು, ಬಿಜೆಪಿ ಇದನ್ನು ಗಂಭೀರವಾಗಿ ಪರಿಗಣಿಸಿದೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಬೆಂಗಳೂರಿಗೆ ಬಂದಾಗ ಚುನಾವಣೆಯ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಿದ್ದಾರೆ. ಅತಿ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ. ಇದರಲ್ಲಿ ಅನುಮಾನವೇ ಬೇಡ. 25 ಕ್ಷೇತ್ರಗಳಲ್ಲಿಯೂ ಗೆಲ್ಲಬೇಕೆಂಬ ಇರಾದೆ ಇದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಪರವಾಗಿಯೇ ಇದೆ. ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅವರು ಸಹ ಗಂಭೀರವಾಗಿ ಪರಿಗಣಿಸಿದ್ದು, ಚುನಾವಣೆಯಲ್ಲಿ ಗೆಲ್ಲಲು ಎಲ್ಲಾ ರೀತಿಯ ರಣತಂತ್ರ ರೂಪಿಸಲಾಗುವುದು ಎಂದರು.
ಹಾನಗಲ್ ವಿಧಾನಸಭಾ ಚುನಾವಣೆ ಒಂದು ಗೆದ್ದಿರಬಹುದು. ಆದರೆ ಹಿಂದೆ ಎಲ್ಲಾ ಚುನಾವಣೆಯಲ್ಲಿ ಸತತವಾಗಿ ಸೋಲು ಕಂಡಿದ್ದಾರೆ. ಹಾಗಾಗಿ ಹತಾಶೆರಾಗಿ ಈ ರೀತಿ ಟೀಕೆ, ಆರೋಪಗಳನ್ನ ಮಾಡುತಿದ್ದಾರೆ. ಇದೆಲ್ಲಾ ಸತ್ಯಕ್ಕೆ ದೂರವಾದದ್ದು. ಸಿಎಂ ಬೊಮ್ಮಾಯಿ ಕೂಡ ದೆಹಲಿಯಲ್ಲಿ ಇದನ್ನ ಯಾವುದೇ ತನಿಖೆ ಕೂಡ ಕೊಡಲು ಸಿದ್ದ ಅಂತ ಹೇಳಿದ್ದಾರೆ. ಹೀಗಾಗಿ ಇಲ್ಲಸಲ್ಲದ ಆರೋಪ ಮಾಡೋದು ಶೋಭೆ ತರಲ್ಲ ಎಂದ ವಿಜಯೇಂದ್ರ ತಿಳಿಸಿದರು.
ಹಾನಗಲ್ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲಿನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಒಬ್ಬೊಬ್ಬ ಮುಖಂಡರು ಒಂದೊಂದು ಅಭಿಪ್ರಾಯ ಹೇಳ್ತಾರೆ. ನಮ್ಮ ಪಕ್ಷಕ್ಕೆ ಯಾವ ಕಾರಣಕ್ಕೆ ಸೋಲಾಯಿತು ಎಂಬುವುದು ಸಿಎಂ, ಪಕ್ಷದ ರಾಜ್ಯಾಧ್ಯಕ್ಷರು, ಯಡಿಯೂರಪ್ಪ, ಪಕ್ಷದ ಮುಖಂಡರು ಕುಳಿತು ಚರ್ಚಿಸುತ್ತಾರೆ ಎಂದರು.
ಚುನಾವಣೆಗೆ ಇನ್ನೂ ಒಂದು ವರ್ಷ ಸಮಯ ಇದೆ. ನಾನು ಚುನಾವಣೆಗೆ ನಿಲ್ಲಬೇಕೋ, ಬೇಡ್ವೋ, ಎಲ್ಲಿ ನಿಲ್ಲಬೇಕು ಅನ್ನೋದು ಪಕ್ಷದ ಮುಖಂಡರು ತೀರ್ಮಾನ ಮಾಡ್ತಾರೆ. ಸದ್ಯಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷನಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಆಸಕ್ತಿ ಕ್ಷೇತ್ರ ಅಂತ ಇಲ್ಲ. ಪಕ್ಷ ಎಲ್ಲಿ ಹೇಳುತ್ತೋ ಅಲ್ಲಿ ನಿಲ್ತೀನಿ ಎಂದು ತಿಳಿಸಿದರು.



