Latestಮೆಟ್ರೋರಾಜಕೀಯರಾಜ್ಯಸುದ್ದಿ

ವಿಧಾನ ಪರಿಷತ್​ ಫಲಿತಾಂಶ: ಬಿಜೆಪಿಗೆ ಮೇಲುಗೈ, ಪ್ರಬಲ ಪೈಪೋಟಿ ನೀಡಿದ ಕಾಂಗ್ರೆಸ್

ಬೆಂಗಳೂರು: ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಹಣಾಹಣಿಗೆ ಎಡೆಯಾಗಿದ್ದ ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಯ 25 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಈ ಬಾರಿ ಆಡಳಿತರೂಢ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರಾಬಲ್ಯ ಮೆರೆದಿದೆ. ಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳನ್ನು ಗೆದ್ದು ಮೊದಲ ಸ್ಥಾನದಲ್ಲಿದ್ದರೆ, ಬಿಜೆಪಿ ಪ್ರಬಲ ಪೈಪೋಟಿ ನೀಡಿದ ಕಾಂಗ್ರೆಸ್ 11 ಸ್ಥಾನಗಳನ್ನು ಗೆಲ್ಲುವ ಮೂಲಕ ವಿರೋಧ ಪಕ್ಷವಾದರೂ ಆಡಳಿತ ಪಕ್ಷಕ್ಕೆ ತಾನೇನೂ ಕಡಿಮೆ ಇಲ್ಲ ಎಂಬುದನ್ನು ರುಜುವಾತುಪಡಿಸಿದೆ.

ಚುನಾವಣೆಯಲ್ಲಿ ತಮ್ಮ ಕುಟುಂಬದ ಕುಡಿಯನ್ನು ಗೆಲ್ಲಿಸುವ ಮೂಲಕ ಕೇವಲ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿರುವ ಜೆಡಿಎಸ್ ವರಿಷ್ಠರು ಈ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸುವಂತಾಗಿದೆ. ಕಳೆದ ಬಾರಿ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 14 ಸ್ಥಾನಗಳನ್ನು ಗಳಿಸಿತ್ತು. ಈ ಬಾರಿ 11 ಸ್ಥಾನಗಳನ್ನು ಗೆದ್ದಿದೆ. ನಾಲ್ಕು ಸ್ಥಾನಗಳನ್ನು ಗೆದ್ದಿದ್ದ ಜೆಡಿಎಸ್ ಮೂರು ಸ್ಥಾನಗಳನ್ನು ಕಳೆದುಕೊಂಡಿದೆ.

ಆಡಳಿತ ಪಕ್ಷವಾದರೂ ವಿಧಾನಪರಿಷತ್ತಿನಲ್ಲಿ ಅಗತ್ಯ ಸಂಖ್ಯಾಬಲದ ಕೊರತೆ ಎದುರಿಸಿದ್ದ ಬಿಜೆಪಿಗೆ ಈಗ ಬಲ ಬಂದಂತಾಗಿದೆ ಆದರೂ ನಿರೀಕ್ಷಿತ ಫಲಿತಾಂಶ ಪಡೆಯಲಾಗದೇ ಬಿಜೆಪಿ ನಿರಾಶೆ ಅನುಭವಿಸುವಂತಾಗಿದೆ. ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 15 ಸ್ಥಾನಗಳಲ್ಲಿ ಗೆಲುವ ಸಾಧಿಸಲಿದೆ ಎಂದು ಬಿಜೆಪಿ ವರಿಷ್ಠರು ನಿರೀಕ್ಷಿಸಿದ್ದರು.

ಜೆಡಿಎಸ್ ನ ಭದ್ರಕೋಟೆ ಎಂದು ಭಾವಿಸಲಾಗಿದ್ದ ಮೈಸೂರು, ಮಂಡ್ಯ ಮತ್ತು ತುಮಕೂರು ಕ್ಷೇತ್ರಗಳನ್ನು ಈ ಬಾರಿ ಕಾಂಗ್ರೆಸ್ ತನ್ನದಾಗಿಸಿಕೊಂಡಿದೆ. ಹಾಸನದಲ್ಲಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ಮೊಮ್ಮಗ ಹಾಗೂ ಹೆಚ್.ಡಿ.ರೇವಣ್ಣ ಪುತ್ರ ಸೂರಜ್ ರೇವಣ್ಣ ವಿಜಯದ ನಗೆ ಬೀರಿದ್ದಾರೆ.

ಗೆದ್ದ ಕಾಂಗ್ರೆಸ್ ಅಭ್ಯರ್ಥಿಗಳು

ಬೀದರ್ – ಭೀಮರಾವ್ ಬಿ ಪಾಟೀಲ್, ತುಮಕೂರು – ರಾಜೇಂದ್ರ, ಕೋಲಾರ – ಎಂ.ಎಲ್. ಅನಿಲ್ ಕುಮಾರ್, ವಿಜಯಪುರ-ಬಾಗಲಕೋಟೆ – ಸುನೀಲ್ ಗೌಡ ಪಾಟೀಲ್
ಹುಬ್ಬಳ್ಳಿ – ಧಾರವಾಡ – ಸಲೀಂ ಅಹ್ಮದ್, ರಾಯಚೂರು-ಕೊಪ್ಪಳ – ಶರಣಗೌಡ ಪಾಟೀಲ್ ಬಯ್ಯಾಪುರ, ಮಂಡ್ಯ – ದಿನೇಶ್ ಗೂಳಿಗೌಡ, ಮೈಸೂರು – ಚಾಮರಾಜನಗರ – ಡಿ. ತಿಮ್ಮಯ್ಯ, ಉಡುಪಿ-ದಕ್ಷಿಣ ಕನ್ನಡ – ಮಂಜುನಾಥ್ ಭಂಡಾರಿ, ಬೆಳಗಾವಿ-ಚಿಕ್ಕೋಡಿ ಚನ್ನರಾಜು, ಬೆಂಗಳೂರು ಗ್ರಾಮಾಂತರ – ಎಸ್.ರವಿ.

ತೀವ್ರ ಕುತೂಹಲ ಹಾಗೂ ರಾಜ್ಯದ ಗಮನಸೆಳೆದಿದ್ದ ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಮಣ್ಣು ಮುಕ್ಕಿದೆ. ಕಾಂಗ್ರೆಸ್ ಪ್ರಾಬಲ್ಯ ಮೆರೆದಿದ್ದರೆ, ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಲಖನ್ ಜಾರಕಿಹೊಳಿ ಬಿಜೆಪಿಯ ಅಧಿಕೃತ ಅಭ್ಯರ್ಥಿ ವಿರುದ್ಧ ಗೆಲುವು ಸಾಧಿಸುವ ಮೂಲಕ ಗೆಲುವಿನ ನರೆ ಬೀರಿದ್ದಾರೆ.

ದ್ವಿಸದಸ್ಯ ಸ್ಥಾನ ಹೊಂದಿರುವ ಬೆಳಗಾವಿಯಲ್ಲಿ ಸರ್ಕಾರದ ಮುಖ್ಯಸಚೇತಕರಾಗಿದ್ದ ಬಿಜೆಪಿಯ ಮಹಾಂತೇಶ್ ಕವಟಗಿಮಠ ಸೋಲು ಅನುಭವಿಸುವ ಮೂಲಕ ಬಿಜೆಪಿ ಮುಖಭಂಗಕ್ಕೆ ಕಾರಣರಾಗಿದ್ದಾರೆ. ಜಿಲ್ಲೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಟ್ಟಾ ಬೆಂಬಲಿಗರಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕೈ ಮೇಲಾಗುವಂತಾಗಿದೆ.

ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ಉಪಸಭಾಪತಿ ಎಂ.ಕೆ.ಪ್ರಾಣೇಶ್ 6 ಮತಗಳ ಅಂತರದಿಂದ ಜಯಶಾಲಿಯಾಗಿದ್ದಾರೆ. ಕ್ಷೇತ್ರದಲ್ಲಿ 39 ಮತಗಳು ತಿರಸ್ಕೃತಗೊಂಡಿದ್ದವು. ಕಡೂರು ಪುರಸಭೆಯ ಕಾಂಗ್ರೆಸ್ ಪಕ್ಷದ 7 ಮತದಾರರು ಪ್ರವಾಸದ ನೆಪದಲ್ಲಿ ಮತದಾನಕ್ಕೆ ಗೈರು ಹಾಜರಾಗಿದ್ದರು.

ಗೆದ್ದ ಬಿಜೆಪಿ ಅಭ್ಯರ್ಥಿಗಳು

ಬೆಂಗಳೂರು ನಗರ – ಗೋಪಿನಾಥ ರೆಡ್ಡಿ, ಮಡಿಕೇರಿ – ಸುಜಾ ಕುಶಾಲಪ್ಪ, ಶಿವಮೊಗ್ಗ – ಡಿ.ಎಸ್.ಅರುಣ್, ಚಿತ್ರದುರ್ಗ – ಕೆಎಸ್ ನವೀನ್, ಬಳ್ಳಾರಿ – ವೈಎಂ ಸತೀಶ್, ಉತ್ತರ ಕನ್ನಡ – ಗಣಪತಿ ಉಳ್ವೇಕರ್, ಚಿಕ್ಕಮಗಳೂರು – ಎಂ.ಕೆ.ಪ್ರಾಣೇಶ್, ಉಡುಪಿ-ದಕ್ಷಿಣ ಕನ್ನಡ – ಕೋಟಾ ಶ್ರೀನಿವಾಸ ಪೂಜಾರಿ, ಕಲಬುರಗಿ – ಯಾದಗಿರಿ – ಬಿ ಜಿ ಪಾಟೀಲ್, ಹುಬ್ಬಳ್ಳಿ – ಧಾರವಾಡ – ಪ್ರದೀಪ್ ಶೆಟ್ಟರ್, ವಿಜಯಪುರ-ಬಾಗಲಕೋಟೆ – ಪಿ ಎಚ್ ಪೂಜಾರ್, ಮೈಸೂರು-ಚಾಮರಾಜನಗರ – ರಘು ಕೌಟಿಲ್ಯ.

ಬಳ್ಳಾರಿಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮೇಲ್ಮನೆಗೆ ಮರು ಆಯ್ಕೆ ಬಯಸಿದ್ದ ಕೆ.ಸಿ.ಕೊಂಡಯ್ಯ ಬಿಜಿಪಿ ಅಭ್ಯರ್ಥಿ ವೈ.ಎಂ.ಸತೀಶ್ ಎದುರು ಸೋಲುವ ಮೂಲಕ ಚುನಾವಣೆಯಲ್ಲಿ ಸೋತ ಪ್ರಮುಖರಲ್ಲಿ ಒಬ್ಬರಾಗಿದ್ದಾರೆ

ಮೇಲ್ಮನೆಯಲ್ಲಿ ಸಭಾನಾಯಕರಾಗಿರುವ ಕೋಟಾ ಶ್ರೀನಿವಾಸ ಪೂಜಾರಿ ಮಂಗಳೂರು ಕ್ಷೇತ್ರದಿಂದ ಮರು ಆಯ್ಕೆಯಾಗುವ ಮೂಲಕ ಮೇಲ್ಮನೆಯಲ್ಲಿ ಸಭಾನಾಯಕ ಸ್ಥಾನಕ್ಕೆ ಚ್ಯುತಿ ಬಾರದಂತೆ ನೋಡಿಕೊಂಡಿದ್ದಾರೆ. ಕ್ಷೇತ್ರದ ಸದಸ್ಯರಾಗಿದ್ದ ಮಾಜಿ ಸಭಾಪತಿ ಕೆ.ಪ್ರತಾಪ್ ಶೆಟ್ಟಿ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದ್ದರು.

ಗೆದ್ದ ಜೆಡಿಎಸ್ ಅಭ್ಯರ್ಥ ಡಾ ಸೂರಜ್​ ರೇವಣ್ಣ

ಧಾರವಾಡದ ಹಾನಗಲ್ ವಿಧಾನಸಭೆ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಶ್ರೀನಿವಾಸ ಮಾನೆ ಅವರು ಮೇಲ್ಮನೆ ಸದಸ್ಯ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದರಿಂದ ತೆರವಾಗಿದ್ದ ಧಾರವಾಡ ಕ್ಷೇತ್ರದಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹಮದ್ ಮರು ಆಯ್ಕೆಯಾಗಿದ್ದಾರೆ.

ಗೆದ್ದ ಪಕ್ಷೇತರ ಅಭ್ಯರ್ಥಿ ಲಖನ್​​​​ ಜಾರಕಿಹೊಳಿ

ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾಧ್ಯಮ ಕಾರ್ಯದರ್ಶಿಯಾಗಿದ್ದ ದಿನೇಶ್ ಗೂಳಿಗೌಡ ಮಾಜಿ ಸಿಎಂ ಎಸ್.ಎಂ.ಕೃಷ್ಣಾ ಕೃಪಾರ್ಶೀವಾದದೊಂದಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಚುನಾವಣೆಯಲ್ಲಿ ಜಯ ಸಾಧಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button