ವೃದ್ಧೆ ಕೊರಳಲಿದ್ದ ಚಿನ್ನಾಭರಣ ಮಂಗಮಾಯ: ಆಸ್ಪತ್ರೆಯ ಮೂವರು ಸಿಬ್ಬಂದಿ ವಿರುದ್ಧ ದೂರು ದಾಖಲು…!

ದಾವಣಗೆರೆ: ಚಿಕಿತ್ಸೆಗೆ ತೆರಳಿದ್ದ ಮಹಿಳೆಯ ಕೊರಳಲ್ಲಿ ಇದ್ದ 1.20 ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಸರ ಕಳುವಾದ ಘಟನೆ ನಡೆದಿದೆ. ಈ ಸಂಬಂಧ ನಗರದ ನಿಜಲಿಂಗಪ್ಪ ಬಡಾವಣೆಯಲ್ಲಿರುವ ವಿಶ್ವಾಸ್ ಆಸ್ಪತ್ರೆಯ ಮೂವರು ಸಿಬ್ಬಂದಿ ವಿರುದ್ಧ ಬಡಾವಣಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸರ ಕಳುವಾಗಿರುವ ಕುರಿತು ವೃದ್ದೆ ನೀಲಮ್ಮ ಅವರ ಸಹೋದರ ಜಗದೀಶ್ ಎನ್ನುವವರು ದೂರು ನೀಡಿದ್ದಾರೆ. ನಗರದ ವಿವೇಕಾನಂದ ಬಡಾವಣೆಯ ನೀಲಮ್ಮ ಅವರು ಇದೇ ಡಿಸೆಂಬರ್ 5 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ವಿಶ್ವಾಸ್ ಆಸ್ಪತ್ರೆಗೆ ಕರೆದೊಯ್ದು ಇಸಿಜಿ ಮಾಡಿಸಿ ಗ್ಲೂಕೋಸ್ ಹಾಕಿಸಲಾಗಿತ್ತು. ನಂತರ ಅವರ ಆರೋಗ್ಯ ಸುಧಾರಿಸಿದ ಹಿನ್ನೆಲೆಯಲ್ಲಿ ಸಂಜೆ 5 ಗಂಟೆ ವೇಳೆಗೆ ಮನೆಗೆ ಕರೆದೊಯ್ಯಲಾಗಿತ್ತು ಎಂದು ಜಗದೀಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮಾರನೆ ದಿನ ಅಂದರೆ ಡಿ.6 ರಂದು ಮುಂಜಾನೆ ನೀಲಮ್ಮ ತಮ್ಮ ಕೊರಳಲ್ಲಿ ಇದ್ದ 3 ತೊಲ ತೂಕದ ಹವಳ, ಬಂಗಾರದ ಸರ ಕಾಣಿಸುತ್ತಿಲ್ಲ ಎಂದು ತಿಳಿಸಿದಾಗ ಮನೆಯ ಸದಸ್ಯರು ಎಲ್ಲ ಕಡೆ ಹುಡುಕಿದರೂ ಸರ ಮಾತ್ರ ಪತ್ತೆಯಾಗಿಲ್ಲ. ಈ ವೇಳೆ ಅವರ ಆರೋಗ್ಯ ಮತ್ತೆ ಕೈ ಕೊಟ್ಟಾಗ ಅದೇ ದಿನ ಮತ್ತೆ ವಿಶ್ವಾಸ್ ಆಸ್ಪತ್ರೆಗೆ ಕರೆದೊಯ್ದು ಮತ್ತೊಮ್ಮೆ ದಾಖಲಿಸಲಾಯಿತು. ಈ ವೇಳೆ ನೀಲಮ್ಮ ಅವರ ಕೊರಳಲ್ಲಿ ಇದ್ದ ಬಂಗಾರದ ಸರ ಕಾಣೆಯಾಗಿರುವ ಬಗ್ಗೆ ಆಸ್ಪತ್ರೆಯ ಮೇಲ್ವಿಚಾರಕ ನಿರಂಜನ ಅವರಿಗೆ ತಿಳಿಸಲಾಗಿದೆ. ಈ ವೇಳೆ ನಿರಂಜನ್ ಎಂಬಾತ ರೋಗಿ ನೀಲಮ್ಮ ಅವರನ್ನು ನೋಡಿಕೊಂಡ ಸಿಬ್ಬಂದಿಗಳನ್ನು ವಿಚಾರಿಸಿ ನಿಮ್ಮ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ.
ನಂತರ ಅದೇ ದಿನ ನೀಲಮ್ಮ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಿಕೊಂಡು ಕರೆದೊಯ್ಯಲಾಗಿದೆ. ಈ ವೇಳೆ ಆಸ್ಪತ್ರೆಯ ಸಿಸಿ ಟಿವಿ ಪರಿಶೀಲಿಸಿದಾಗ ನೀಲಮ್ಮ ಅವರು ಡಿ.5 ರಂದು ಮೊದಲ ಬಾರಿಗೆ ಆಸ್ಪತ್ರೆಗೆ ಬಂದಾಗ ಅವರ ಕೊರಳಲ್ಲಿ ಬಂಗಾರದ ಸರ ಇರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ನೀಲಮ್ಮ ಅವರಿಗೆ ಚಿಕಿತ್ಸೆ ನೀಡಿದ ಸಿಬ್ಬಂದಿಯಾದ ಸಂತೋಷ್, ರತ್ಮಮ್ಮ, ಮಂಜುನಾಥ್ ಅವರ ಮೇಲೆ ಅನುಮಾನವಿದೆ ಎಂದು ನೀಲಮ್ಮ ಅವರ ಸಹೋದರ ಜಗದೀಶ್ ಬಡಾವಣೆ ಠಾಣೆಗೆ ದೂರು ನೀಡಿದ್ದಾರೆ.




