ಹಳಬರನ್ನು ಕೈಬಿಡಿ, ಹೊಸಬರಿಗೆ ಸಚಿವ ಸ್ಥಾನ ನೀಡಿ: ಎಂ ಪಿ ರೇಣುಕಾಚಾರ್ಯ

ದಾವಣಗೆರೆ: ನಾಲ್ಕು ಸ್ಥಾನಗಳು ಖಾಲಿ ಇವೆ. ಕೆಲವರಿಗೆ ಸಂಘಟನೆ ಜವಾಬ್ದಾರಿ ನೀಡಿ. ಕೆಲವರು ಪದೇ ಪದೇ ಮಂತ್ರಿಗಳಾಗುತ್ತಿದ್ದಾರೆ. ಹೊಸಬರಿಗೂ ಅವಕಾಶ ನೀಡಿ. ಒಳ್ಳೆಯ ಕೆಲಸ ಮಾಡಲು ಸಚಿವ ಸ್ಥಾನ ನೀಡಿ ಎಂಬುದು ಕೆಲ ಶಾಸಕರ ಅಭಿಪ್ರಾಯವಾಗಿದೆ. ಯಡಿಯೂರಪ್ಪ, ಈಶ್ವರಪ್ಪ, ಅನಂತ್ ಕುಮಾರ್ ಪಕ್ಷಕ್ಕಾಗಿ ದುಡಿದಿದ್ದಾರೆ. ನಮಗೆ ಆಶೀರ್ವಾದ ಮಾಡಿದ್ದಾರೆ. ನನ್ನ ಮತ್ತು ಈಶ್ವರಪ್ಪರ ನಡುವೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಇತ್ತು. ಈಗ ಎಲ್ಲವೂ ಸರಿ ಹೋಗಿದೆ. ಪಕ್ಷದ ಹಿತದೃಷ್ಟಿಯಿಂದ ಹಾಗೂ ಸಂಘಟನೆ ಉದ್ದೇಶದಿಂದ ಕೆಲ ಸಚಿವರನ್ನು ಕೈಬಿಟ್ಟು ಹೊಸಮುಖಗಳಿಗೆ ಆದ್ಯತೆ ಕೊಡಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಮನವಿ ಮಾಡಿದ್ದಾರೆ.
ಹೊನ್ನಾಳಿ ಪಟ್ಟಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾನು ಸಚಿವ ಸ್ಥಾನ ಆಕಾಂಕ್ಷಿ ಅಲ್ಲ ಎಂಬುದಾಗಿ ಬಹಿರಂಗವಾಗಿ ಎಲ್ಲಿಯೂ ಹೇಳಿಲ್ಲ. ಹೀಗೆ ಹೇಳಿದ ಬಗ್ಗೆ ಸಾಕ್ಷ್ಯ ಕೊಟ್ಟರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ನಾಲ್ಕು ಗೋಡೆಗಳ ಮಧ್ಯೆ ಈ ಹಿಂದೆ ಮಾಜಿ ಸಿಎಂ ಯಡಿಯೂರಪ್ಪ ಅವರಿಗೂ ಕೇಳಿದ್ದೆ. ಅದೇ ರೀತಿಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ಪಕ್ಷದ ರಾಜ್ಯಾಧ್ಯಕ್ಷರಿಗೂ ನನಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದೇನೆ ಎಂದರು.
ಕಳೆದ ವಾರ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಸಚಿವ ಸ್ಥಾನ ನೀಡಿ ಅಂತಾ ಕೇಳಿದ್ದು ನಿಜ. ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ. ಅಭಿಪ್ರಾಯ ಹೇಳೋದಕ್ಕೆ ಅವಕಾಶ ಇದೆ. ನಾನು ಕೇಳಿದ್ದೇನೆ. ಸಚಿವ ಸ್ಥಾನ ಆಕಾಂಕ್ಷಿ ಅಲ್ಲ ಎಂದು ಹೇಳಲು ಆಗದು ಎಂದು ತಿಳಿಸಿದರು.
ಮಾಧ್ಯಮದ ಮುಂದೆ ಆಕಾಂಕ್ಷಿ ಅಂತಾ ಕೇಳಿದ್ರೆ ಕೊಡ್ತಾರಾ. ಈ ಹಿಂದೆ ಅಬಕಾರಿ ಸಚಿವನಾಗಿಯೂ ಕೆಲಸ ಮಾಡಿದ್ದೇನೆ. ಮೊದಲನೇ, ಎರಡನೇ ಹಾಗೂ ಮೂರನೇ ಕೊರೊನಾ ಅಲೆ ಬಂದರೂ ಕೆಲಸ ಮಾಡಿದ್ದೇನೆ. ಹೊನ್ನಾಳಿ – ನ್ಯಾಮತಿ ತಾಲೂಕಿನಲ್ಲಿ ದೇಶ ಮೆಚ್ಚುವ ರೀತಿ ನಾನು, ಅಧಿಕಾರಿಗಳು, ಕೊರೊನಾ ವಾರಿಯರ್ಸ್ ಎಲ್ಲರೂ ಸೇರಿ ಮಾಡಿದ್ದೇವೆ. ಜನರಿಗೆ ನಾನು ಸಚಿವ ಸ್ಥಾನ ನೀಡಬೇಕೆಂಬ ಅಪೇಕ್ಷೆ ಇದೆ ಎಂದು ಹೇಳಿದರು.
