ತ್ರಿವೇಣಿ ಸಂಗಮದಲ್ಲಿ ಟೆಂಟ್ ತೆರವುಗೊಳಿಸಲು ಒತ್ತಾಯ

ಕೊಡಗು : ಜಿಲ್ಲೆಯ ಪವಿತ್ರ ಕ್ಷೇತ್ರವಾದ ತ್ರಿವೇಣಿ ಸಂಗಮದ ಸಮೀಪ ಹೊರಗುತ್ತಿಗೆ ಕಾಮಗಾರಿಯ ಕಾರ್ಮಿಕರಿಗೆ ಟೆಂಟ್ ಹಾಕಿಕೊಳ್ಳಲು ಭಾಗಮಂಡಲ ಗ್ರಾಮ ಪಂಚಾಯತ್ ಅವಕಾಶ ನೀಡಿದ್ದು, ಈ ಕುರಿತು ಅಖಿಲ ಕೊಡವ ಸಮಾಜದ ಯೂತ್ ವಿಂಗ್ ಪೊಲೀಸರಿಗೆ ದೂರು ನೀಡಿದೆ. ತಕ್ಷಣ ಎಚ್ಚೆತ್ತುಕೊಂಡ ಪಂಚಾಯಿತಿ ಒಟ್ಟು 6 ಟೆಂಟ್‌ಗಳನ್ನು ತೆರವು ಮಾಡಿಸಿದೆ.
ಕಾವೇರಿ ಹೊಳೆಯಿಂದ ಕೇವಲ 10 ಅಡಿ ದೂರದಲ್ಲಿದ್ದ ಟೆಂಟ್ ವಾಸಿಗಳ ತ್ಯಾಜ್ಯ ನದಿಗೆ ಸೇರುವ ಆತಂಕ ವ್ಯಕ್ತಪಡಿಸಿದ್ದ ಯೂತ್ ವಿಂಗ್ ತೆರವುಗೊಳಿಸದಿದ್ದರೆ ಹೋರಾಟ ನಡೆಸುವುದಾಗಿ ಟೆಂಟ್ ಗಳನ್ನು ಎಚ್ಚರಿಕೆ ನೀಡಿತ್ತು. ಅಲ್ಲದೆ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರ ಕಚೇರಿಗೆ ಆನ್‌ಲೈನ್ ದೂರು ದಾಖಲು ಮಾಡಿತ್ತು.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ, ಕೊಡಗಿನಲ್ಲಿ ನೆಲೆ ಕಂಡುಕೊಂಡಿರುವ ವಿವಿಧ ಸಮುದಾಯ ಕಾವೇರಿ ಮಾತೆಯನ್ನು ಹೆತ್ತಮ್ಮನಂತೆ ಆರಾಧಿಸುತ್ತಿವೆ. ಹೀಗಿರುವಾಗ ಸ್ಥಳೀಯ ಪಂಚಾಯಿತಿ ತಲಕಾವೇರಿ ಮತ್ತು ಭಾಗಮಂಡಲ ಕ್ಷೇತ್ರದ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಬೇಕು ಎಂದು ಒತ್ತಾಯಿಸಿದ್ದಾರೆ.
ಮಡಿಕೇರಿ ಗ್ರಾಮಾಂತರ ವಿಭಾಗದ ವೃತ್ತ ನಿರೀಕ್ಷಕರಿಗೆ ಆನ್‌ಲೈನ್ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿತ್ತು. ಕೂಡಲೇ ಕ್ರಮ ಕೈಗೊಂಡ ಪೊಲೀಸ್ ಇಲಾಖೆ 6 ಟೆಂಟ್ ಗಳನ್ನು ತೆರವುಗೊಳಿಸಿದೆ. ಪೊಲೀಸರ ಕ್ರಮ ಸ್ವಾಗತಾರ್ಹ ಎಂದು ಪ್ರವೀಣ್ ಉತ್ತಪ್ಪ ಹೇಳಿದ್ದಾರೆ.




