
ನವದೆಹಲಿ: ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಉಚಿತ ಪಡಿತರ ವಿತರಣಾ ಕೆಂದ್ರಗಳಲ್ಲಿ ಪ್ರಧಾನಿಯ ಚಿತ್ರ ಮತ್ತು ರಾಜ್ಯದ ಮುಖ್ಯಮಂತ್ರಿಯ ಚಿತ್ರವಿರುವ ಬ್ಯಾನರ್ ಪ್ರದರ್ಶಿಸಲು ಕ್ರಮ ತೆಗೆದುಕೊಳ್ಳುವಂತೆ ತನ್ನ ಆಡಳಿತವಿರುವ ರಾಜ್ಯಗಳಲ್ಲಿನ ಘಟಕಗಳಿಗೆ ಬಿಜೆಪಿ ಸೂಚನೆ ಕೊಟ್ಟಿದೆ. ಪಡಿತರದ ಚೀಲಗಳ ಮೇಲೆಯೂ ಪಕ್ಷದ ಚಿಹ್ನೆ ಮುದ್ರಿಸುವಂತೆ ಸೂಚಿಸಲಾಗಿದೆ.
ಕೊರೊನಾ 2ನೇ ಅಲೆ ವ್ಯಾಪಕಗೊಂಡ ಸಂದರ್ಭದಲ್ಲಿ ಮೇ ಮತ್ತು ಜೂನ್ ತಿಂಗಳಿಗೆಂದು ಮರು ಜಾರಿಗೆ ತರಲಾಗಿದ್ದ ಗರೀಬ್ ಕಲ್ಯಾಣ್ ಯೋಜನೆಯನ್ನು ಈ ವರ್ಷದ ನವೆಂಬರ್ವರೆಗೆ ವಿಸ್ತರಿಸಲಾಗಿದ್ದು, ಪಕ್ಷದ ದೃಷ್ಟಿಯಿಂದಲೂ ಇದರ ಲಾಭ ಪಡೆಯಲು ಬಿಜೆಪಿ ಮುಂದಾಗಿರುವುದು ಸ್ಪಷ್ಟ.
ಎಲ್ಲಾ ರಾಜ್ಯ ಘಟಕಗಳಿಗೆ ಪತ್ರ ಬರೆದಿರುವ ಬಿಜಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ಈ ಯೋಜನೆಯ ಬಗ್ಗೆ ವ್ಯಾಪಕ ಪ್ರಚಾರ ಆಗಬೇಕೆಂದು ಸೂಚಿಸಿದ್ದಾರೆ ಎನ್ನಲಾಗಿದೆ.
ಪಡಿತರ ವಿತರಾಣಾ ಕೇಂದ್ರಗಳೆದುರು ಪ್ರದರ್ಶನವಾಗಬೇಕಿರುವ ಬ್ಯಾನರ್ನ್ನು ಬಿಜೆಪಿ ದೆಹಲಿ ಕಚೇರಿಯು ಸಿದ್ಧಪಡಿಸಿದ್ದು, ಇದನ್ನು ಅನುಸರಿಸುವಂತೆ ರಾಜ್ಯ ಬಿಜೆಪಿ ಘಟಕಗಳಿಗೆ ಸೂಚಿಸಲಾಗಿದೆ. ಈ ಸೂಚನೆ ಸಮರ್ಪಕವಾಗಿ ಪಾಲನೆಯಾಗುವಂತೆ ನೋಡಿಕೊಳ್ಳಬೇಕೆಂದು ರಾಜ್ಯ ಘಟಕಗಳ ಅಧ್ಯಕ್ಷರು, ಶಾಸಕರು ಮತ್ತು ಸಂಸದರಿಗೂ ಸೂಚನೆ ಬಂದಿದೆ.
ಬಿಜೆಪಿಯೇತರ ಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲೂ ಪಡಿತರ ಬ್ಯಾಗ್ ಮೇಲೆ ಬಿಜೆಪಿಯದ್ದೇ ಚಿಹ್ನೆ ಇರಬೇಕೆಂದೂ, ಬ್ಯಾನರ್ಗಳ ಮೇಲೆ ಪ್ರಧಾನಿ ಚಿತ್ರದ ಬದಲು ಆಯಾ ರಾಜ್ಯದ ಮುಖ್ಯಮಂತ್ರಿಯ ಚಿತ್ರವಿರುವಂತೆ ಸೂಚನೆಡಯಲ್ಲಿ ತಿಳಿಸಲಾಗಿದೆ.
ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಚಿತ್ರವಿರುವುದು ಈಗಾಗಲೇ ಪ್ರತಿಪಕ್ಷಗಳಿಂದ ವ್ಯಾಪಕ ಟೀಕೆಗೊಳಗಾಗಿದ್ದರೂ ಬಿಜೆಪಿ ಮತ್ತೊಮ್ಮೆ ಅಂಥದೇ ನಡೆಯನ್ನು ಪ್ರದರ್ಶಿಸಲು ಮುಂದಾಗಿದೆ. ಇದನ್ನು ಪ್ರತಿಭಟಿಸಿ ಛತ್ತೀಸ್ಘಡ, ಪಶ್ಚಿಮ ಬಂಗಾಳದಂತ ರಾಜ್ಯಗಳು ಕೋವಿಡ್ ಪ್ರಮಾಣಪತ್ರದ ಮೇಲೆ ಮುಖ್ಯಮಂತ್ರಿಯ ಚಿತ್ರ ಪ್ರಕಟಿಸುತ್ತಿರುವುದನ್ನೂ ಗಮನಿಸಬಹುದು. ಕೋವಿಡ್ ಹೊತ್ತಿನಲ್ಲಿ ಜಾರಿಗೆ ತರಲಾಗಿರುವ ಯೋಜನೆಯನ್ನು ಪಕ್ಷದ ಲಾಭಕ್ಕೋಸ್ಕರ ಪ್ರಚಾರಪಡಿಸುವ ಬಿಜೆಪಿಯ ನಡೆಗೆ ಪ್ರತಿಪಕ್ಷಗಳ ಪ್ರತಿಕ್ರಿಯೆ ಹೇಗಿರಲಿದೆ ಎಂಬುದು ಕುತೂಹಲಕರ.



