ಕೊರೊನಾ ನಿರ್ಬಂಧ ಸಡಿಲಿಕೆ ಕುರಿತು ಇಂದು ಸಿಎಂ ಮಹತ್ವದ ಸಭೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಾಗಿತ್ತು. ಇದನ್ನು ತಡೆಗಟ್ಟುವ ಸಲುವಾಗಿ ಸರ್ಕಾರ ಕೆಲ ನಿರ್ಬಂಧ ಹೇರಿತ್ತು. ಇದೀಗ ಕೊರೊನಾ ಪ್ರಮಾಣ ಸ್ವಲ್ಪ ಕಡಿಮೆಯಾಗಿದ್ದರಿಂದ ನಿರ್ಬಂಧ ಸಡಿಲಿಕೆ ಕುರಿತು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.
ಈಗಾಗಲೇ ಸರ್ಕಾರ ಎಲ್ಲದಕ್ಕೂ ಶೇ. 50 ರ ಅವಕಾಶ ನೀಡಿತ್ತು. ಇಂದಿನ ಸಭೆಯಲ್ಲಿ ಶೇಕಡ 50 ರ ಮಿತಿ ನಿರ್ಬಂಧ ಸಡಿಲಿಕೆ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ. ಜೊತೆಗೆ ನೈಟ್ ಕರ್ಫ್ಯೂ ಸಮಯ ಬದಲಾವಣೆ, ಕರ್ಫ್ಯೂ ಮುಂದುವರಿಕೆಕುರಿತು ಚರ್ಚೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ 1 ರಿಂದ 9ನೇ ತರಗತಿ ಆರಂಭ ಮೊದಲಾದ ವಿಚಾರಗಳ ಬಗ್ಗೆ ಚರ್ಚೆ ನಡೆಸಿ ತೀರ್ಮಾನಿಸುವ ಸಾಧ್ಯತೆ ಇದೆ.
ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಬೆಂಗಳೂರಿನಲ್ಲಿ ಶಾಲೆ ತೆರೆಯಲು ಶಿಫಾರಸು ಮಾಡಿದ್ದು, ಈ ಬಗ್ಗೆ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು. ಈಜುಕೊಳ, ಜಿಮ್, ಹೋಟೆಲ್, ಬಾರ್, ರೆಸ್ಟೋರೆಂಟ್, ಸಭಾಂಗಣಗಳಲ್ಲಿ ಶೇಕಡ 50 ರ ಮಿತಿ ಸಡಿಲಿಕೆ ಬಗ್ಗೆಯೂ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.
