ನೆಲ, ಜಲ ಹೋರಾಟಕ್ಕೆ ದೊಡ್ಮನೆ ಕುಟುಂಬ ಸದಾ ಮುಂದು: ನಟಿ ಉಮಾಶ್ರೀ

ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ನಡೆಯುತ್ತಿರುವ ಮೇಕೆದಾಟು ಪಾದಯಾತ್ರೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಪಾದಯಾತ್ರೆಯಲ್ಲಿ ನಟ ಶಿವರಾಜ್ ಕುಮಾರ್ ಭಾಗಿಯಾಗ್ತಾರಾ? ಇಲ್ಲವೋ ಅನ್ನು ಪ್ರಶ್ನೆ ಶುರುವಾಗಿದೆ. ನೀರಿಗಾಗಿ ನಡೆಯುತ್ತಿರುವ ನಡಿಗೆಯಲ್ಲಿ ಶಿವಣ್ಣ ಭಾಗವಹಿಸುತ್ತಾರೆ ಅನ್ನೋ ನಂಬಿಕೆ ಸಾಕಷ್ಟು ಮಂದಿಗಿದೆ.
ಕಳೆದ ಭಾನುವಾರ ಆರಂಭವಾದ ಮೇಕೆದಾಟು ಪಾದಯಾತ್ರೆಯನ್ನ ನಟ ಶಿವರಾಜ್ ಕುಮಾರ್ ಉದ್ಘಾಟಿಸಬೇಕಿತ್ತು. ಆದ್ರೆ ಕೊನೆ ಕ್ಷಣದಲ್ಲಿ ಶಿವರಾಜ್ ಕುಮಾರ್ ಗೈರಾಗಿದ್ದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು. ಶಿವರಾಜ್ ಕುಮಾರ್ಗೆ ಬೇರೆ ಕೆಲಸಗಳು ಇದ್ದ ಕಾರಣಕ್ಕೆ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಿಲ್ಲ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದ್ದರು. ಅಲ್ಲದೆ ಮೇಕೆದಾಟು ಹೋರಾಟಕ್ಕೆ ಶಿವಣ್ಣನ ಬೆಂಬಲ ಇದ್ದೆ ಇರುತ್ತದೆ ಅಂತ ತಿಳಿಸಿದ್ದರು.
ಇದೀಗ ನಟಿ, ಮಾಜಿ ಶಾಸಕಿ ಉಮಾಶ್ರೀ ಕೂಡ ಶಿವಣ್ಣನ ಬಗ್ಗೆ ಮಾತನಾಡಿದ್ದಾರೆ. ಶಿವಣ್ಣ ನಮ್ಮ ಹೋರಾಟಕ್ಕೆ ಸಾಥ್ ನೀಡುತ್ತಾರೆ ಎನ್ನುವ ನಂಬಿಕೆ ನಮಗೆ ಇದೆ. ನೆಲ, ಜಲದ ವಿಷಯಕ್ಕೆ ಬಂದಾಗ ದೊಡ್ಮನೆ ಕುಟುಂಬ ಸದಾ ಕಾಲ ಎದ್ದು ನಿಲ್ಲುತ್ತದೆ. ಮುಂದಿನ ದಿನಗಳಲ್ಲಿ ಸಮಯ ಹೊಂದಿಸಿಕೊಂಡು ಶಿವರಾಜ್ ಕುಮಾರ್ ಈ ಮೇಕೆದಾಟು ಪಾದಯಾತ್ರೆಯಲ್ಲಿ ಭಾಗಿಯಾಗ್ತಾರೆ ಎಂದು ನಟಿ ಊಮಾಶ್ರೀ ಹೇಳಿದ್ದಾರೆ.
ಅಲ್ಲದೆ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಚಿತ್ರರಂಗದ ಸಾಕಷ್ಟು ಕಲಾವಿದರು ಈ ಪಾದಯಾತ್ರೆಗೆ ಸಾಥ್ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಸಾಕಷ್ಟು ಮಂದಿ ಹೋರಾಟದಲ್ಲಿ ಭಾಗಿಯಾಗುವುದಾಗಿ ತಿಳಿಸಿದ್ದಾರೆ.



