ಮೇಕೆದಾಟು ತಮಿಳುನಾಡು ಅರ್ಜಿ: ಸುಪ್ರೀಂಕೋರ್ಟ್ ನಲ್ಲಿ ಇಂದು ವಿಚಾರಣೆ

ನವದೆಹಲಿ: ಮೇಕೆದಾಟು ನ್ಯಾಯ ಮಂಡಳಿ ತೀರ್ಪು ಪ್ರಶ್ನಿಸಿ ತಮಿಳುನಾಡು ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಂಗಳವಾರ(ಜ.11) ಸುಪ್ರೀಂಕೋರ್ಟ್ ನಲ್ಲಿ ನಡೆಯಲಿದೆ. ಮೇಕೆದಾಟು ಜಲಾಶಯ ನಿರ್ಮಾಣ ಕುರಿತು ರಾಷ್ಟ್ರೀಯ ಹಸರು ನ್ಯಾಯಮಂಡಳಿಯ (ಎನ್ ಜಿಟಿ)ಚೆನ್ನೈ ಪೀಠ ತಡೆಯಾಜ್ಞೆ ನೀಡಿತ್ತು. ಇದನ್ನು ನವದೆಹಲಿಯ ಎನ್ ಜಿಟಿ ಪ್ರಧಾನ ಪೀಠ ತೆರವುಗೊಳಿಸಿತ್ತು. ಇದನ್ನು ಪ್ರಶ್ನಿಸಿ ತಮಿಳುನಾಡು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದೆ.
ಕಳೆದ ವರ್ಷ ಜ.3 ರಂದು ಈ ಸಂಬಂಧ ನಡೆದ ವಿಚಾರಣೆಯಲ್ಲಿ ಎನ್ ಜಿಟಿ ತೀರ್ಪು ಪ್ರಶ್ನಿಸಿ ತಮಿಳುನಾಡು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಜ.27ರಂದು ನಡೆಸುವುದಾಗಿ ಸುಪ್ರೀಂಕೋರ್ಟ್ ತಿಳಿಸಿತ್ತು. ಆದರೆ ಅದಕ್ಕೂ ಮುಂಚೆಯೇ ವಿಚಾರಣೆ ಕೈಗೆತ್ತಿಕೊಳ್ಳಲು ಸರ್ವೊಚ್ಚ ನ್ಯಾಯಾಲಯ ಅನುವಾಗಿದೆ.
ಕೃಷ್ಣ ಜಲವಿವಾದ: ಕೃಷ್ಣ ಜಲ ವಿವಾದದ ಐತೀರ್ಪನ್ನು ಗೆಜೆಟ್ನಲ್ಲಿ ಪ್ರಕಟಿಸಬೇಕೆಂದು ಕೋರಿದ್ದ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಭೋಪಣ್ಣ ರವರುಗಳು ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ.
