ಜಾಮೀನು ಸಿಕ್ಕರು ಚೇತನ್ಗಿಲ್ಲ ಬಿಡುಗಡೆ ಭಾಗ್ಯ: ಇನ್ನೆರಡು ದಿನ ಜೈಲಿನಲ್ಲೇ ವಾಸ್ತವ್ಯ

ಸದಾ ವಿವಾದದ ಮೂಲಕವೇ ಸುದ್ದಿಯಾಗೋ ನಟ ಚೇತನ್ ಕುಮಾರ್ ಇತ್ತೀಚೆಗೆ ಆಕ್ಷೇಪಾರ್ಹ ಟ್ವೀಟ್ ಮಾಡಿ ಬಂಧನಕೊಳಗಾಗಿದ್ದಾರೆ. ಫೆಬ್ರವರಿ 22ರಂದು ನ್ಯಾಯಾಂಗ ನಿಂದನೆ ಆರೋಪದಡಿ ಚೇತನ್ರನ್ನ ಶೇಷಾದ್ರಿಪುರಂ ಪೊಲೀಸರು ಬಂಧಿಸಿದ್ದು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ಹೊರಡಿಸಿತ್ತು. ಇದೀಗ ಚೇತನ್ಗೆ ಜಾಮೀನು ಸಿಕ್ಕಿದ್ರು, ಇನ್ನೆರಡು ದಿನ ಚೇತನ್ ಜೈಲಿನಲ್ಲೇ ಕಳೆಯಬೇಕಾಗಿದೆ.
32ನೇ ಎಸಿಎಂಎಂ ನ್ಯಾಯಾಲಯ ಕೆಲವು ಷರತ್ತುಗಳನ್ನ ವಿಧಿಸಿ ಚೇತನ್ಗೆ ಜಾಮೀನು ನೀಡಿದೆ. ಇದರಿಂದ ಚೇತನ್ ಕುಟುಂಬಸ್ಥರಿಗೆ ಹಾಗೂ ಅಭಿಮಾನಿಗಳಿಗೆ ರಿಲೀಫ್ ಸಿಕ್ಕಂತಾಗಿದೆ. ಆದರೆ ಚೇತನ್ಗೆ ಜಾಮೀನು ಸಿಕ್ಕರು ಇನ್ನೆರಡು ದಿನ ಜೈಲಿನಲ್ಲೇ ಕಳೆಯಬೇಕಾದ ಪರಿಸ್ಥಿತಿ ಇದೆ.
ಚೇತನ್ ಜಾಮೀನಿಗೆ ಸಂಬಂಧಿಸಿದಂತೆ ಶ್ಯೂರಿಟಿ ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಇನ್ನೂ ಎರಡು ದಿನ ಜೈಲಿನಲ್ಲೇ ಇರಬೇಕಾಗುತ್ತದೆ. ಇಂದು ನಾಲ್ಕನೇ ಶನಿವಾರ ಹಾಗೂ ನಾಳೆ ಭಾನುವಾರ ಆಗಿರುವ ಕಾರಣ ಸರ್ಕಾರಿ ರಜೆ ಇದೆ. ಹೀಗಾಗಿ ಚೇತನ್ಗೆ ಜಾಮೀನು ಸಿಕ್ಕರು ಎರಡು ದಿನ ಹೊರ ಬರೋಕೆ ಸಾಧ್ಯವಿಲ್ಲ. ಸೋಮವಾರ ಬಾಂಡ್ ಪ್ರಕ್ರಿಯೆ ಮುಗಿದ ಬಳಿಕ ಚೇತನ್ ಜೈಲಿನಿಂದ ಹೊರ ಬರುತ್ತಾರೆ.
ಚೇತನ್ ಮಾಡಿದ್ದ ಟ್ವೀಟ್ನಲ್ಲಿ ಏನಿತ್ತು?
ಹಿಜಾಬ್ ಕುರಿತಾಗಿ ನಟ ಚೇತನ್ ನೀಡಿದ ಹೇಳಿಕೆಯಿಂದಾಗಿ ಚೇತನ್ ಅವರನ್ನ ಬಂಧಿಸಲಾಗಿತ್ತು ಫೆ.16ರಂದು ನಟ ಚೇತನ್ ಹಿಜಾಬ್ ವಿಚಾರದಲ್ಲಿ ಕೋರ್ಟ್ನಲ್ಲಿ ನಡೆಯುತ್ತಿರುವ ವಿಚಾರಣೆಯ ಕುರಿತಾಗಿ ಟ್ವೀಟ್ ಮಾಡಿ ನ್ಯಾ.ಕೃಷ್ಣ ದೀಕ್ಷಿತ್ ಅವರನ್ನು ನಿಂದಿಸಿದ್ದರು. ಜೊತೆಗೆ ಕಳೆದ ಎರಡು ವರ್ಷದ ಹಿಂದಿನ ತಾವು ಮಾಡಿದ್ದ ಟ್ವೀಟ್ ಅನ್ನು ರೀಟ್ವೀಟ್ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ವಿಚಾರಣೆ ನಡೆಯುವ ಸಂದರ್ಭದಲ್ಲಿ ಜಡ್ಜ್ ಅವರನ್ನು ನಿಂದಿಸುವುದು ಅಪರಾಧವಾಗಿದ್ದು, ಈ ಹಿನ್ನೆಲೆಯಲ್ಲಿ ಚೇತನ್ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಿಸಿಕೊಂಡು ಅರೆಸ್ಟ್ ಮಾಡಿದ್ದರು.
ಚೇತನ್ ಕುಮಾರ್ ವಿರುದ್ಧ ದೂರಿನಲ್ಲಿ ಏನಿತ್ತು?
ನಟ ಚೇತನ್ ಕುಮಾರ್ ಸಾಮಾನ್ಯ ಜನರಲ್ಲಿ ಹಾಗೂ ಒಂದು ಕೋಮಿನ ಜನಾಂಗದವರಿಗೆ ಕಾನೂನು ಮತ್ತು ಸುವ್ಯವಸ್ಥೆ, ನ್ಯಾಯಾಲಯ, ಸರ್ಕಾರ ಮತ್ತು ನಮ್ಮ ದೇಶದ ಸಾಂವಿಧಾನಿಕ ವ್ಯವಸ್ಥೆಯ ಮೇಲೆ ಅಪನಂಬಿಕೆ, ಆಕ್ರೋಶ ಬರುವ ಹಾಗೆ ಟ್ವೀಟ್ ಮಾಡಿದ್ದಾರೆ. ಮುಸ್ಲಿಂ ಕೋಮಿನವರು ಮತ್ತು ಇತರೆ ಜನರು ಪ್ರತಿಭಟನೆ, ಗಲಭೆ ಹಾಗೂ ಇತ್ಯಾದಿಗಳನ್ನು ಮಾಡುವಂತೆ ಪ್ರಚೋದಿಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.



