ಕ್ಯಾಬ್ ಡ್ರೈವರ್ಗಳಿಗಾಗಿ ಸಂಭಾವನೆ ನಿರಾಕರಿಸಿದ ಪುನೀತ್ ರಾಜ್ಕುಮಾರ್

ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹಾಡಿರುವ ಎಲ್ಲೋ ಬೋರ್ಡ್ ಸಿನಿಮಾದ ಹಾಡು ರಿಲೀಸ್ ಆಗಿದೆ. ಇದು ರ್ಯಾಪ್ ಸಾಂಗ್ ಆಗಿದ್ದು ಇದೇ ಮೊದಲ ಬಾರಿಗೆ ಇಂಥದೊಂದು ಹಾಡಿಗೆ ಅಪ್ಪು ಧ್ವನಿಯಾಗಿದ್ದಾರೆ. ಅಂದ್ಹಾಗೆ ಪುನೀತ್ ಈ ಹಾಡಿಗೆ ಒಂದೇ ಒಂದು ರೂಪಾಯಿ ಕೂಡ ಸಂಭಾವನೆ ಪಡೆದುಕೊಂಡಿಲ್ಲವಂತೆ.
ಅಪ್ಪು ಹಾಡಿರುವ ಹಾಡಿನಲ್ಲಿ ಟ್ಯಾಕ್ಸಿ ಓಡಿಸುವವರ ಜೀವನದ ಬಗ್ಗೆ ಹೇಳಲಾಗಿದೆ. ಸಮಾಜದಲ್ಲಿ ಟ್ಯಾಕ್ಸಿ ಓಡಿಸುವ ಡ್ರೈವರ್ಗಳು ಎಷ್ಟು ಮುಖ್ಯ ಅನ್ನೋದನ್ನ ವರ್ಣಿಸಲಾಗಿದೆ. ಚಿತ್ರತಂಡ ಸದ್ಯ ಪುನೀತ್ ರಾಜ್ಕುಮಾರ್ ಹಾಡಿರುವ ಬ್ಲಾಕ್ ಬೋರ್ಡ್, ವೈಟ್ ಬೋರ್ಡ್, ಗ್ರೀನ್ ಬೋರ್ಡ್, ಬ್ಲೂ ಬೋರ್ಡ್ ಎಂಬ ಹಾಡಿನ ಮೇಕಿಂಗ್ ವಿಡಿಯೋವನ್ನ ಬಿಡುಗಡೆ ಮಾಡಿದೆ.
ಚಿತ್ರತಂಡ ಪುನೀತ್ ಅವರಿಗೆ ಸಂಭಾವನೆ ನೀಡಲು ಹೋದಾಗ ನಯವಾಗಿಯೇ ನಿರಾಕರಿಸಿದ್ದಾರಂತೆ. ಈ ಚಿತ್ರ ಟ್ಯಾಕ್ಸಿ ಡ್ರೈವರ್ಗಳ ಕಥೆಯನ್ನು ಹೇಳುವ ಚಿತ್ರ. ಸಮಾಜದಲ್ಲಿ ಟ್ಯಾಕ್ಸಿ ಡ್ರೈವರ್ಗಳ ಸೇವಾ ಮನೋಭಾವ ಮಹತ್ವದ್ದು. ನಾನು ಈ ಹಾಡಿನ ಮೂಲಕ ಅವರಿಗೆ ಗೌರವವನ್ನು ಸಲ್ಲಿಸುತ್ತಿದ್ದೇನೆ ಎಂದು ಸಂಭಾವನೆ ಪಡೆದುಕೊಳ್ಳಲು ನಿರಾಕರಿಸಿದ್ದಾರಂತೆ.
ಪ್ರದೀಪ್ ನಾಯಕನಾಗಿ ಕಾಣಿಸಿಕೊಂಡಿರುವ ಎಲ್ಲೋ ಬೋರ್ಡ್ ಚಿತ್ರವನ್ನ ತ್ರಿಲೋಕ್ ನಿರ್ದೇಶನ ಮಾಡಿದ್ದಾರೆ. ವಿಂಟೇಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರೋ ಚಿತ್ರದಲ್ಲಿ ಅಹಲ್ಯಾ ಸುರೇಶ್, ಸ್ನೇಹಾ, ಚಂದನಾ, ಭವಾನಿ ಪ್ರಕಾಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.



