ಕೆಜಿಎಫ್ ಬೆಡಗಿಯ ಅದ್ಧೂರಿ ಅರಿಶಿನ ಶಾಸ್ತ್ರ

ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಿತ್ರದ ಹಿಂದಿ ಅವತರಣಿಕೆಯ ಗಲಿ ಗಲಿ ಹಾಡಿನಲ್ಲಿ ಸೊಂಟ ಬಳುಕಿಸಿ ಸಖತ್ ಸೌಂಡ್ ಮಾಡಿದ್ದ, ಬಾಲಿವುಡ್ ಕಿರುತೆರೆಯಲ್ಲಿ ನಾಗಿಣಿ ಎಂದೇ ಖ್ಯಾತಿ ಘಳಿಸಿದ ಮೌನಿ ರಾಜ್ ಅದ್ದೂರಿಯಾಗಿ ಹಸೆ ಮಣೆ ಏರಲು ಸಜ್ಜಾಗಿದ್ದಾರೆ. ಬಹುಕಾಲದ ಗೆಳೆಯ ಸೂರಜ್ ನಂಬಿಯಾರ್ ಜೊತೆ ಇಂದು ನಟಿ ಮೌನಿ ರಾಯ್ ಸಪ್ತಪದಿ ತುಳಿಯುತ್ತಿದ್ದಾರೆ.
ಈಗಾಗಲೆ ಮದುವೆಯ ಶಾಸ್ತ್ರಗಳು ಆರಂಭವಾಗಿದ್ದು ಅದ್ದೂರಿಯಾಗಿ ಅರಿಶಿನ ಶಾಸ್ತ್ರ ಹಾಗೂ ಮೆಹಂದಿ ಶಾಸ್ತ್ರಗಳು ನೆರವೇರಿದೆ. ಅದರ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಮೌನಿ ರಾಯ್ ಆಗಲಿ ಸೂರಜ್ ಆಗಲಿ ಈ ಪೋಟೋಗಳನ್ನ ಹಂಚಿಕೊಂಡಿಲ್ಲ. ಬದಲಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಈ ಜೋಡಿಯ ಕೆಲ ಆಪ್ತರು ಪೋಟೋಗಳನ್ನ ಶೇರ್ ಮಾಡಿದ್ದಾರೆ.
ಅರಿಶಿನ ಶಾಸ್ತ್ರದಲ್ಲಿ ಮೌನಿ ಹಾಗೂ ಸೂರಜ್ ಇಬ್ಬರು ಬಿಳಿ ಬಣ್ಣದ ಧಿರಿಸಿನಲ್ಲಿ ಕಂಗೊಳಿಸಿದ್ದಾರೆ. ಹಳದಿ ಹೂವುಗಳೊಂದಿಗೆ ಮೌನಿ ಹಾಗೂ ಸೂರಜ್ ಎಂಜಾಯ್ ಮಾಡ್ತಿರೋ ವಿಡಿಯೋ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.

ಇಂದು ಗೋವಾದಲ್ಲಿ ಮೌನಿ ರಾಯ್ ಸೂರಜ್ ನಂಬಿಯಾರ್ರನ್ನ ವರಿಸಲಿದ್ದಾರೆ. ದುಬೈನಲ್ಲಿಯೇ ಸತಿ ಪತಿಗಳಾಗಲು ಈ ಜೋಡಿ ನಿರ್ಧರಿಸಿತ್ತು. ಆದ್ರೆ ಕೊನೆ ಕ್ಷಣದಲ್ಲಿ ಮನಸ್ಸು ಬದಲಾಯಿಸಿರೋ ಜೋಡಿ ಹಕ್ಕಿಗಳು ಸಮುದ್ರ ಕಿನಾರೆ ಗೋವಾದಲ್ಲಿ ಹಸೆ ಮಣೆ ಏರುತ್ತಿದ್ದಾರೆ.
ಗೋವಾದಲ್ಲಿ ನಾಗಚೈತನ್ಯ ಹಾಗೂ ಸಮಂತ ಸಪ್ತಪದಿ ತುಳಿದ ಸ್ಥಳದಲ್ಲೇ ಈ ಜೋಡಿ ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ ಅನ್ನೋ ಮಾತು ಕೇಳಿ ಬರ್ತಿದೆ. ಕೊರೊನಾ ಕಾರಣದಿಂದ ಕುಟುಂಬಸ್ಥರು ಹಾಗೂ ಆಪ್ತರಿಗೆ ಮಾತ್ರ ಮದುವೆಗೆ ಆಹ್ವಾನ ನೀಡಲಾಗಿದೆ. ಮದುವೆಯ ಬಳಿಕ ಮುಂಬೈನಲ್ಲಿ ಅದ್ದೂರಿಯಾಗಿ ಆರತಕ್ಷತೆ ನಡೆಯಲಿದೆಯಂತೆ.




