ಆಲಿಯಾ ಭಟ್ ಡೈಲಾಗ್ಗೆ ಸಿಡಿದೆದ್ದ ನೆಟ್ಟಿಗರು

ಭಾರತ ಚಿತ್ರರಂಗ ಕಂಡ ಅದ್ಭುತ ನಿರ್ದೇಶಕರಲ್ಲಿ ಸಂಜಯ್ ಲೀಲಾ ಬನ್ಸಾಲಿ ಕೂಡ ಒಬ್ಬರು. ಬಿಟೌನ್ನಲ್ಲಿ ಯಾರೂ ಮಾಡದಂತಹ ಸಿನಿಮಾಗಳನ್ನ ಮಾಡಿ ಸೈ ಎನಿಸಿಕೊಂಡ ಅದ್ಭುತ ನಿರ್ದೇಶಕ ಬನ್ಸಾಲಿ. ಇವರು ನಿರ್ದೇಶಿಸಿದ ಆಲ್ ಮೋಸ್ಟ್ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಆದ್ರೆ ಸಂಜಯ್ ಲೀಲಾ ಬನ್ಸಾಲಿ ಆಕ್ಷನ್ ಕಟ್ ಹೇಳೋ ಸಿನಿಮಾಗಳು ರಿಲೀಸ್ಗೂ ಮೊದಲೇ ವಿವಾದ ಹುಟ್ಟುಹಾಕುತ್ತಿವೆ. ಇದೀಗ ಬನ್ಸಾಲಿ ನಿರ್ದೇಶನದ ಆಲಿಯಾ ಭಟ್ ನಟನೆಯ ಗಂಗೂಬಾಯಿ ಕಾಠಿಯಾವಾಡಿ ಚಿತ್ರಕ್ಕೂ ವಿವಾದ ಸುತ್ತಿಕೊಂಡಿದೆ.
ಬನ್ಸಾಲಿ ನಿರ್ದೇಶನದ ಸಿನಿಮಾಗಳಿಗೂ ವಿವಾದಕ್ಕೂ ಬಿಡದ ನಂಟು. ಈ ಹಿಂದೆ ತೆರೆಕಂಡ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ನಟನೆಯ ಬಾಜಿರಾವ್ ಮಸ್ತಾನಿ, ಬಳಿಕ ಬಿಡುಗಡೆಯಾದ ಪದ್ಮವಾತ್ಗೂ ವಿವಾದ ಅಂಟಿಕೊಂಡಿತ್ತು. ಇದೀಗ ಆಲಿಯಾ ಭಟ್ ನಟನೆಯಗಂಗೂಬಾಯಿ ಕಾಠಿಯಾವಾಡಿ ಚಿತ್ರಕ್ಕೂ ವಿವಾದ ಸುತ್ತಿಕೊಂಡಿದೆ.
ಈ ಹಿಂದೆ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾದ ಟೈಟಲ್ನಿಂದ ಗಂಗೂಬಾಯಿ ಹಾನಗಲ್ ಅವರಿಗೆ ಅಪಮಾನ ಆಗಿದೆ. ಹೀಗಾಗಿ ಸಿನಿಮಾದ ಟೈಟಲ್ ಬದಲಾಯಿಸಬೇಕು ಎಂದು ಕನ್ನಡ ಜಾಗೃತಿ ವೇದಿಕೆ ಆಗ್ರಹಿಸಿತ್ತು. ಇದೀಗ ಟ್ರೈಲರ್ ಬಿಡುಗಡೆಯಾಗಿದ್ದು ಹೊಸ ವಿವಾದ ಶುರುವಾಗಿದೆ.
ಇತ್ತೀಚೆಗೆ ಬಿಡುಗಡೆಯಾಗಿರೋ ಟ್ರೈಲರ್ನಲ್ಲಿ ಚಿತ್ರದ ಸಂಭಾಷಣೆ ಹಾಗೂ ಕೆಲವೊಂದು ದಶ್ಯಗಳು ಪ್ರೇಕ್ಷಕರ ಸಿಟ್ಟಿಗೆ ಕಾರಣವಾಗಿದೆ. ಟ್ರೈಲರ್ನ ಕೊನೆಯಲ್ಲಿ ಆಲಿಯಾ ಭಟ್ ಹಲ್ಲು ಕೀಳಿಸುತ್ತಿರುವ ದೃಶ್ಯವಿದೆ. ಅದರಲ್ಲಿ ಈಶಾನ್ಯ ಭಾರತದ ಪಾತ್ರವನ್ನು ದಂತ ವೈದ್ಯರ ರೂಪದಲ್ಲಿ ತೋರಿಸಲಾಗಿದೆ. ಅವರು ಆಲಿಯಾಗೆ ಹಲ್ಲು ಕೀಳುವ ವೇಳೆ ಬಾಯಿಯನ್ನ ಮತ್ತಷ್ಟು ಅಗಲಿಸಲು ಹೇಳುತ್ತಾರೆ. ಆಗ ಪ್ರತಿಕ್ರಿಸೋ ಆಲಿಯಾ ಬಾಯಿಯನ್ನು ಇನ್ನೆಷ್ಟು ಅಗಲಿಸಬೇಕು? ಸಂಪೂರ್ಣ ಚೀನಾವನ್ನು ನನ್ನ ಬಾಯಿಯಲ್ಲಿ ಹಾಕುತ್ತೀರೋ ಹೇಗೆ? ಎಂದು ಪ್ರಶ್ನೆ ಮಾಡುತ್ತಾರೆ.
ಗಂಗೂಬಾಯಿ ಕಾಠಿಯಾವಾಡಿ ಚಿತ್ರದ ಈ ಡೈಲಾಗ್ಗೆ ನೆಟ್ಟಿಗರು ಗರಂ ಆಗಿದ್ದಾರೆ. ಈಶಾನ್ಯ ಭಾರತದ ಜನರನ್ನು ಚೀನಾದವರು ಎಂದು ಹೀಯಾಳಿಸುವುದು ಸರಿ ಅಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಸಿನಿಮಾದಲ್ಲಿ ನಟಿಸೋ ಕನಸು ಕಂಡು ಮುಂಬೈಗೆ ಬರೋ ಯುವತಿ ಬಳಿಕ ಮೋಸಕ್ಕೆ ಬಿದ್ದು ಮುಂಬೈನ ರೆಡ್ ಲೈಟ್ ಏರಿಯಾ ಸೇರುತ್ತಾಳೆ. ಮುಂದೊಂದು ದಿನ ಅದೇ ಕಾಮಾಟಿಪುರದ ಅಧಿ ನಾಯಕಿಯಾಗಿ ಬೆಳೆಯುವ ಪಾತ್ರದಲ್ಲಿ ಆಲಿಯಾ ಭಟ್ ಕಾಣಿಸಿಕೊಂಡಿದ್ದಾರೆ.




