ಕಳ್ಳರಿಗೆ ಕಾಂಗ್ರೆಸ್ ಇಷ್ಟವಾಗುತ್ತದೆ ಎಂದ ಕಂಗನಾ ರಾಣವತ್

ಬಿಟೌನ್ ನಟಿ ಕಂಗನಾ ರಾಣವತ್ ತಮ್ಮ ಖಡಕ್ ಹೇಳಿಕೆಗಳಿಂದಲೇ ಪದೇ ಪದೇ ಸುದ್ದಿಯಾಗುವಾಕೆ. ಘಟಾನುಘಟಿ ಸ್ಟಾರ್ಗಳನ್ನ ಬೇಕಾದರು ಎದುರು ಹಾಕಿಕೊಳ್ಳುವ ಡೋಂಟ್ ಕೇರ್ ನಟಿ ಈಕೆ. ತಮಗನಿಸಿದ್ದನ್ನ ನೇರಾನೇರವಾಗಿ ಹೇಳುವ ಕ್ವೀನ್ ಇದೀಗ ಕಾಂಗ್ರೆಸ್ ಹಾಗೂ ಬಿಜೆಪಿಯ ಕುರಿತಾಗಿ ತಮ್ಮದೇ ವಾದ ಮುಂದಿಟ್ಟಿದ್ದಾರೆ.
ಕಂಗನಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೇಳಿಕೆಯೊಂದನ್ನ ಬಿಡುಗಡೆ ಮಾಡಿ ಜೀವನದ 4 ಸೂತ್ರಗಳನ್ನ ನೆನಪಿಡಿ ಎಂದು ಶೀರ್ಷಿಕೆಯನ್ನ ನೀಡಿದ್ದಾರೆ. ಮೊದಲ ಸೂತ್ರದಲ್ಲಿ “ಮೋಸಗಾರರು ಮತ್ತೋರ್ವ ಮೋಸಗಾರರಿಗೆ ಸಹಾಯ ಮಾಡುತ್ತಾರೆ” ಎಂದು ಬರೆದುಕೊಂಡಿದ್ದಾರೆ. ಎರಡನೇ ಸೂತ್ರದಲ್ಲಿ “ಯಾರಿಗೆ ತಮ್ಮ ಕುರಿತು ನಂಬಿಕೆ ಇಲ್ಲವೋ ಅವರಿಗೆ ದೇವರು ಅಥವಾ ಮತ್ಯಾವುದರ ಕುರಿತೂ ನಂಬಿಕೆ ಇರುವುದಿಲ್ಲ ಎಂದು ಬರೆದಿದ್ದಾರೆ.
ಮೂರನೇ ಹೇಳಿಕೆಯಲ್ಲಿ ಗುರುವಿನ ಬಗ್ಗೆ ಕಂಗನಾ ಬರೆದುಕೊಂಡಿದ್ದಾರೆ. ಎಲ್ಲರಿಗೂ ಅವರೊಳಗಿನ ಮನಸ್ಥಿತಿಗೆ ತಕ್ಕಂತೆ ಗುರು ಸಿಗುತ್ತಾನೆ. ಒಳ್ಳೆಯವರಾಗಿದ್ದರೆ ಒಳ್ಳೆಯ ಗುರು ಹಾಗೂ ಕೆಟ್ಟವರಾಗಿದ್ದರೆ ಮೋಸಗಾರ ಗುರು ಸಿಗುತ್ತಾರೆ ಎಂದು ಬರೆದುಕೊಂಡಿದ್ದಾರೆ.
ಕೊನೆಯ ಹಾಗೂ ನಾಲ್ಕನೇಯ ಅಂಶದಲ್ಲಿ ಕಂಗನಾ ಕಾಂಗ್ರೆಸ್ ಹಾಗೂ ಬಿಜೆಪಿ ಕುರಿತು ಪ್ರಸ್ತಾಪಿಸಿದ್ದಾರೆ. “ನೀವು ಒಂದು ವೇಳೆ ಕಳ್ಳನಾಗಿದ್ದರೆ ನೀವು ಕಾಂಗ್ರೆಸ್ ಅನ್ನು ಇಷ್ಟಪಡುತ್ತೀರಿ. ಒಂದು ವೇಳೆ ನಿಜವಾದ ರಾಷ್ಟ್ರೀಯವಾದಿಯಾಗಿದ್ದರೆ ಬಿಜೆಪಿಗೆ ಮತ ಹಾಕುತ್ತೀರಿ” ಎಂದು ಅವರು ಬರೆದುಕೊಂಡಿದ್ದಾರೆ. ಕಂಗನಾ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವಿವಾದ ಸೃಷ್ಟಿಸಿದ್ದು ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ.
ಇತ್ತೀಚೆಗೆ ಕಂಗನಾ ಬಿಜೆಪಿ ಪಕ್ಷಕ್ಕೆ ತಮ್ಮ ಬೆಂಬಲವನ್ನ ಸೂಚಿಸಿದ್ದರು. ಅಲ್ಲದೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿ ಯೋಗಿ ಆದಿತ್ಯನಾಥ್ ಅವರಿಗೆ ಮತ ಹಾಕುವಂತೆ ಕಂಗನಾ ಕೇಳಿಕೊಂಡಿದ್ದರು. ಟ್ವಿಟರ್ನಿಂದ ಬ್ಯಾನ್ ಆದ ಬಳಿಕ ಕಂಗನಾ ತಮ್ಮ ಹೇಳಿಕೆಗಳನ್ನ ಇನ್ಸ್ಟಾಗ್ರಾಂ ಖಾತೆಯ ಮೂಲಕ ಶೇರ್ ಮಾಡುತ್ತಿದ್ದಾರೆ.




