ಸಿನಿಮಾಸೆಲೆಬ್ರಿಟಿ

ಹೇಗಿದೆ ಶಿವಣ್ಣನ ಬರ್ತ್​ಡೇ ಸ್ಪೆಷಲ್ ಭಜರಂಗಿ 2 ಟೀಸರ್?

ಪೂರ್ಣ ವಿ-ರಾಮ

“ಭಗವಂತನ ಸ್ವತ್ತನ್ನ ನಾಶ ಮಾಡ್ತೀನಿ ಅಂತ ಹೊರಟ್ರೆ ಅದನ್ನ ಕಾಪಾಡೋಕೆ ಅವನೇ ಅವತಾರ ಎತ್ತಿ ಬರಬೇಕಾಗಿಲ್ಲಾ. ಅವನ ರೂಪದಲ್ಲಿ ಇನ್ನೊಬ್ಬ ರಕ್ಷಕ ಹುಟ್ಟಿಬರ್ತಾನೆ!”
-ಹೀಗೆನ್ನುತ ಓಪನ್ ಆಗೋ ವಿಶುವಲ್ ವೈಬ್ರೇಷನ್ ಭಜರಂಗಿ 2 ಟೀಸರ್!

ಹೌದು, ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಭಜರಂಗಿ 2 ಚಿತ್ರತಂಡ ಹೀಗೊಂದು ಕಲರ್ ಫುಲ್ ಕೊಡುಗೆ ನೀಡಿದೆ. ಒಂದು ನಿಮಿಷದ ವಿಶೇಷ ಟೀಸರ್ ಪ್ಯಾಕೇಜ್ ಕೊಟ್ಟಿದೆ. ಹೇಗಿದೆ ಆ ಟೀಸರ್?

ನಟ್ಟ ನಡುರಾತ್ರಿ. ಕೆಟ್ಟ ಕಾಡು. ಅಲ್ಲೊಬ್ಬ ವಿಚಿತ್ರ ರೀತಿಯ ಧಿರಿಸಿನೊಂದಿಗೆ ವ್ಯಕ್ತಿಯೊಬ್ಬ ನಡೆನಡೆದು ಹೋಗುತ್ತಿರುತ್ತಾನೆ. ಕಡಿದ ಮರದ ಮೇಲೆ ಮುಖ ತೋರಿಸದೇ ಸಾಗುತ್ತಿರುತ್ತಾನೆ. ಆಗ ಮೇಲೆ ಹೇಳಿದ ವಾಯ್ಸ್ ಬರುತ್ತದೆ…”ಭಗವಂತನ ಸ್ವತ್ತನ್ನ…” ಅದು ಮುಗಿಯುವ ಮುನ್ನ ಈಗ ಖಂಡಿತ ಭಜರಂಗಿಯ ಭೋರ್ಗರೆತ ಆಗುತ್ತದೆ ಎಂಬ ಸೂಚನೆ ಸಿಕ್ಕೇ ಸಿಗುತ್ತದೆ. ವಿಚಿತ್ರ ಕಾನನದ ವಿಶುವಲ್ ಟ್ರೀಟ್ ಅಷ್ಟೊತ್ತಿಗಾಗಲೇ ನಮ್ಮ ನೆತ್ತಿಯನ್ನೊಮ್ಮೆ ಕುಕ್ಕಿಯಾಗಿರುತ್ತದೆ. ರೋಚಕತೆ ಎಂಬ ಹರಳಿನ ರಾಶಿಯನ್ನ ಹೆಕ್ಕಿಯಾಗಿರುತ್ತದೆ!

ಆಗ ಬರ್ತಾನೆ ನೋಡಿ ಭಜರಂಗಿ ಎಂಬ ಬೆಂಕಿಚೆಂಡು!

ಇಷ್ಟು ಮುಗಿದು ರಣ ರಾಕ್ಷಸರ ಕೂಪದ ಪ್ರದರ್ಶನ, ದಿಗ್ದರ್ಶನವಾದ ಕೆಲವೇ ಸೆಕೆಂಡಿಗೆ ಬೂಟಿನ ಹೆಜ್ಜೆಯೊಂದು ಫ್ರೇಮಿಗೆ ಎಂಟ್ರಿ ಕೊಡುತ್ತದೆ. ಧೂಳಿನ ರಾಶಿ ರಾಶಿ. ಆ ಹೆಜ್ಜೆಗುರುತು ಮಾಸುವ ಮುನ್ನ ಮಾಸ್ ಮೂಖವೊಂದು ಇಡೀ ಪರದೆಯನ್ನ ಆವರಿಸಿಕೊಳ್ಳುತ್ತದೆ. ರೋಷ + ಆವೇಶ + ಆಕ್ರೋಶ + ಪಾಸಿಟಿವಿಟಿ + ಬೆಂಕಿ ಉಗುಳುವ ಕಣ್ಣೋಟ + ಕೋಪ + ತಾಪವನ್ನು ಮಿಕ್ಸಿಗೆ ಹಾಕಿ ರುಬ್ಬಿ ಕೊನೆಗೆ ಅದಕ್ಕೊಂದು ಮೌನದ ಮಿಶ್ರಣ ಮಾಡಿದರೆ ಹೇಗಿರುತ್ತದೆ? ಅವೆಲ್ಲದರ ಸಮ್ಮಿಶ್ರ ಸರ್ಕಾರದಂತೇ ಎದ್ದುಬರುತ್ತಾನೆ ನೋಡಿ ಭಜರಂಗಿ ರೂಪದ ಡಾ. ಶಿವರಾಜಕುಮಾರ್!

ನಿರ್ದೇಶಕ ಹರ್ಷನ ಕೆಲಸ ಇಚಿಂಚೂ ಕಾಣುತ್ತದೆ. ಕಾಡುತ್ತದೆ. ಕಾಡಿನಲ್ಲಿ ನಡೆಯೋ ಸೇಡಿನ ಕಥೆ ಎನ್ನುವ ಗುಟ್ಟು ರಟ್ಟಾಗುತ್ತದೆ. ಜೊತೆಗೆ ಶಿವರಾಜ್ ಕುಮಾರ್ ಎಂಬ ಆಗರ್ಭ ನಟನ ಆಹಾ ಎನಿಸೋ ನಟನೆಯ ಸಣ್ಣ ಝಲಕ್ ಸ್ಯಾಂಪಲ್ ಇದಷ್ಟೇ ಎಂದೆನಿಸುತ್ತದೆ. ಎರಡೂಕಾಲು ಗಂಟೆಗಳ ಕಾಲದ ಭಜರಂಗಿಯ ಭೋರ್ಗರೆತ ಹೇಗಿರಬಹುದು ಎಂಬ ನಿರೀಕ್ಷೆಯ ಬಿಸಿ ಮುಟ್ಟಿಸಿ ಭಜರಂಗಿ 2 ವಿಶೇಷ ಬರ್ತ್ ಡೇ ಟೀಸರ್ ಸಮಾಪ್ತಿಯಾಗುತ್ತದೆ!

Spread the love

Related Articles

Leave a Reply

Your email address will not be published. Required fields are marked *

Back to top button