ಸಿನಿಮಾಸೆಲೆಬ್ರಿಟಿ

ಅವರಿದ್ದಿದ್ದರೆ ಹೀಗಾಗುತ್ತಿರಲಿಲ್ಲ; ಅಂಬಿ ನೆನೆದು ಪಿಆರ್​ಓ ಅನಂತು ಕಣ್ಣೀರು

“ಇದ್ಯಾಕೆ ಇವ್ರೆಲ್ಲಾ ಈಗ ಹೀಗೆ ಮಾತಾಡ್ತಿದಾರೋ ಗೊತ್ತಾಗ್ತಾ ಇಲ್ಲಾ…! ತುಂಬಾ ನೋವಾಗ್ತಿದೆ. ಯಾರಿಗೆ ಎಷ್ಟು ಮಾಡಿಲ್ಲಾ ಅವ್ರು? ಅಂಬರೀಶ್ ಅವ್ರಿಗೆ ಸಹಾಯ ಮಾಡಿರೋರು ಮೂರು ಪರ್ಸೆಂಟ್ ಆದ್ರೆ, ಅವ್ರಿಂದ ಸಹಾಯ ಪಡೆದಿರೋರು ನೂರು ಪರ್ಸೆಂಟ್! ನಾನೇ ಅದಕ್ಕೆ ಪ್ರತ್ಯಕ್ಷ ಸಾಕ್ಷಿ ಇದೀನಿ…”

ಹೀಗೆಂದು ಒಮ್ಮೆ ಉಸಿರು ಎಳೆದುಕೊಂಡಿದ್ದು ಪಿ.ಆರ್.ಓ. ಅನಂತು. ಅಂಬರೀಶ್ ಅವರ ಜೊತೆ ಇಪ್ಪತ್ತು ವರುಷಗಳ ಸ್ನೇಹ ಅವರದ್ದು. ಅವರ ಮನೆಯ ಕೆಲಸಗಳನ್ನು ಸೀನಣ್ಣ ನೋಡಿಕೊಳ್ಳುತ್ತಿದ್ದರೆ, ಹೊರಗಿನ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದದ್ದು, ಅಂಬರೀಶ್ ನೇತೃತ್ವದಲ್ಲಿ ಏನೇ ಸಭೆ ಸಮಾರಂಭ ನಡೆದರೂ ಅದರ ಜವಾಬ್ದಾರಿ ಹೊತ್ತು ಕಲಾವಿದರನ್ನು ಕರೆಸುತ್ತಿದ್ದದ್ದು ಇದೇ ಅನಂತು.

ಅದೇ ಅನಂತು ಇದೀಗ ಬಿಟ್ಟ ಕಣ್ಣು ಮುಚ್ಚದಂತೇ ನಡೆಯುತ್ತಿರುವ ಬೆಳವಣಿಗೆಗಳನ್ನು, ಕುಮಾರಸ್ವಾಮಿ ಹಾಗೂ ಸುಮಲತಾ ಅಂಬರೀಶ್ ನಡುವಿನ ವಾಗ್ದಾಳಿಯನ್ನು ನೋಡುತ್ತಿದ್ದಾರೆ. ಅವರಿದ್ದಿದ್ದರೆ ಇವೆಲ್ಲಾ ಆಗುತ್ತಿತ್ತಾ ಎಂದು ಅಂದುಕೊಳ್ಳುತ್ತಲೇ ಬೇಸರಕ್ಕೊಳಗಾಗುತ್ತಿದ್ದಾರೆ.

“ನಮ್ ಯಜಮಾನ್ರು ಎಷ್ಟು ಜನಕ್ಕೆ ಸಹಾಯ ಮಾಡಿದಾರೆ? ಎಷ್ಟೆಲ್ಲಾ ಮಾಡಿದಾರೆ ಅಂತ ನನ್ನ ಅಂತರಂಗಕ್ಕೆ ಚೆನ್ನಾಗಿ ಗೊತ್ತು. ಅದನ್ನು ಈ ಸಮಯದಲ್ಲಿ ಹೇಳಿಕೊಳ್ಳೋದು ಅಷ್ಟು ಸಮಂಜಸ ಅಲ್ಲ. ಅಂಬರೀಶ್ ಯಾವತ್ತೂ ಯಾರಿಗೂ ಕೇಡು ಬಯಸದ ವ್ಯಕ್ತಿತ್ವ. ಅವರು ಒಂದು ಚಿಟಕಿ ಹೊಡೆದು ಕೆಲಸ ಮಾಡಿಸೋ ತಾಕತ್ತಿದ್ದ ಮನುಷ್ಯ. ಅವರು ಯಾರ್ಯಾರಿಗೆಲ್ಲಾ ಹೆಲ್ಪ್ ಮಾಡಿದ್ದಾರೆ ಅನ್ನೋದು ಅವರವರಿಗೆ ಗೊತ್ತಿದ್ರೆ ಸಾಕು.

“ನಾನು ದೊಡ್ಡ ದೊಡ್ಡವರ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ. ಆದರೆ ಒಂದು ವಿಷ್ಯ ಮಾತ್ರ ಕ್ಲೀಯರ್ ಆಗಿ ಹೇಳ್ತೀನಿ. ಅಂಬರೀಶ್ ಅವರೊಬ್ಬ ನಿಷ್ಪಕ್ಷಪಾತಿ, ಸ್ನೇಹಜೀವಿ. ಅವರಿಗೆ ಎಲ್ಲಾ ಪಕ್ಷದಲ್ಲೂ, ಎಲ್ಲಾ ಭಾಷೆಯಲ್ಲೂ, ಎಲ್ಲಾ ರಾಜ್ಯದಲ್ಲೂ, ಎಲ್ಲಾ ದೇಶದಲ್ಲೂ, ಎಲ್ಲಾ ದಿಕ್ಕಿನಲ್ಲೂ ಗೆಳೆಯರಿದ್ದರು. ಅದೇ ಗೆಳೆತನ ಅವರನ್ನು ದೊಡ್ಡ ಮನುಷ್ಯನನ್ನಾಗಿ ಮಾಡಿದ್ದು. ವಿಷಯ ಹೀಗಿರುವಾಗ ಎಲ್ಲಾ ರಾಜಕಾರಣಿಗಳೂ ಅಂಬರೀಶಣ್ಣನ ಸ್ನೇಹಕ್ಕೆ ಬೆಲೆಕೊಟ್ಟು ಕೆಲಸ ಮಾಡಿದ್ದಾರೆ ಎನ್ನುವುದು ನನ್ನ ಭಾವನೆ.

“ಅದೊಂದು ಜೀವ ಅಷ್ಟೇ ಅಲ್ಲ ಕಣ್ರೀ…ಅದೊಂದು ಶಕ್ತಿ. ಅದೊಂದು ಪವರ್. ಅದೊಂದು ಸಮುದ್ರ. ಅವರನ್ನ ನೆನೆದಾಗಲೆಲ್ಲಾ ನನಗೆ ಮಾತೇ ಬರಲ್ಲ…ಅಷ್ಟು ಮಾಡಿದಾರೆ ಕಣ್ರೀ ನಂಗೇ…ನಾನು ತಿನ್ನೋ ಪ್ರತೀ ತುತ್ತಲ್ಲೂ ಅವ್ರನ್ನ ನೆನೀತೀನಿ.”

Spread the love

Related Articles

Leave a Reply

Your email address will not be published. Required fields are marked *

Back to top button