ಪ್ರೀತಿಸಿದ ಯುವತಿ ಆತ್ಮಹತ್ಯೆ; ಕೊಲೆ ಎಂದು ಆರೋಪಿಸಿ ಯುವಕನ ಮನೆಗೆ ಬೆಂಕಿಯಿಟ್ಟ ಸಂಬಂಧಿಕರು

ಬಾಗಲಕೋಟೆ: ಪ್ರೀತಿಸಿ ಮದುವೆಯಾಗಿದ್ದ ಯುವತಿ ನೇಣಿಗೆ ಶರಣಾಗಿರುವ ಹಿನ್ನಲೆಯಲ್ಲಿ ಕೊಲೆ ಎಂದು ಆರೋಪಿಸಿ ಯುವತಿ ಮನೆಯವರು ರೊಚ್ಚಿಗೆದ್ದು ಯುವಕನ ಮನೆಗೆ ಬೆಂಕಿ ಹಚ್ಚಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಕೆಲೂರು ಗ್ರಾಮದಲ್ಲಿ ಘಟನೆ ನಡೆದಿದೆ. 20 ವರ್ಷದ ಬಸಮ್ಮ ಮಾದರ ನೇಣಿಗೆ ಶರಣಾಗಿದ್ದು, ಇದು ಕೊಲೆ ಎನ್ನುವ ಆರೋಪ ಯುವತಿ ಕುಟುಂಬದವರದ್ದು. ರೊಚ್ಚಿಗೆದ್ದು ಯುವಕನ ಮನೆಗೆ ಸೀಮೆ ಎಣ್ಣೆ ಸುರಿದು ಬೆಂಕಿಯಿಟ್ಟಿದ್ದಾರೆ.
ರಂಜೀತ್ ಪಂಚನ್ನವರ್ ಹಾಗೂ ಬಸಮ್ಮ ಮಾದರ ಪರಸ್ಪರ ಪ್ರೀತಿಸುತ್ತಿದ್ದರು. ಯುವತಿಗೆ ಕಳೆದ ಆರು ತಿಂಗಳ ಹಿಂದೆ ಬೇರೊಬ್ಬರೊಂದಿಗೆ ಮದುವೆ ಮಾಡಿಕೊಡಲಾಗಿತ್ತು . ಯುವಕ ಬಸಮ್ಮನೊಂದಿಗೆ ಸಂಪರ್ಕದಲ್ಲಿದ್ದು, ಮೊದಲನೇ ಗಂಡನನ್ನು ಬಸಮ್ಮ ಬಿಟ್ಟು ಬಂದು, ಇಬ್ಬರು ಸೇರಿ ಪೊಲೀಸರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಆ ಬಳಿಕ ಕೆಲೂರು ಗ್ರಾಮದ ರಂಜಿತ್ ಹಾಗೂ ಬಸಮ್ಮ ಹೊಲದ ಮನೆಯಲ್ಲಿ ವಾಸವಾಗಿದ್ದರು. ಇವತ್ತು ಹೊಲದ ಮನೆಯಲ್ಲಿ ಯುವತಿ ನೇಣಿಗೆ ಶರಣಾಗಿದ್ದಾಳೆ. ರಂಜಿತ್ ಬಸಮ್ಮಳನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಯುವಕನ ಮನೆಗೆ ಬೆಂಕಿಯಿಟ್ಟಿದ್ದಾರೆ ಎನ್ನಲಾಗಿದೆ.ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದಾರೆ.ಈ ಘಟನೆ ಅಮೀನಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.




