ಬ್ರಾಹ್ಮಣ್ಯದ ಬಗ್ಗೆ ಟ್ವೀಟ್; ನಟ ಚೇತನ್ ವಿರುದ್ಧ ಬ್ರಾಹ್ಮಣ ಮಂಡಳಿ ದೂರು ಬೆನ್ನಲ್ಲೇ ಅಭಿಮಾನಿಗಳ ಬೆಂಬಲ

ಬೆಂಗಳೂರು: ಕನ್ನಡ ನಟ ಚೇತನ್ ಬ್ರಾಹ್ಮಣ್ಯದ ಬಗ್ಗೆ ಮಾಡಿರುವ ಟ್ವೀಟ್ ವಿರುದ್ಧ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ ಬೆನ್ನಲ್ಲೇ ಚೇತನ್ಗೆ ಬೆಂಬಲಿಸಿ ಅಭಿಮಾನಿಗಳಿಂದ ಸಂದೇಶಗಳ ಮಹಾಪೂರವೇ ಹರಿದುಬರುತ್ತಿದೆ.
ಚೇತನ್ ತಮ್ಮದೊಂದು ಫೋಟೋವನ್ನು ಟ್ವೀಟ್ ಮಾಡಿ ಅದಕ್ಕೆ ಅಡಿಬರಹವಾಗಿ ಅಂಬೇಡ್ಕರ್ ಮತ್ತು ಪೆರಿಯಾರ್ ಅವರ ಮಾತುಗಳನ್ನು ಹಾಕಿದ್ದರು. “ಬ್ರಾಹ್ಮಣ್ಯವು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ನಿರಾಕರಣೆಯಾಗಿದೆ. ನಾವು ಬ್ರಾಹ್ಮಣ ಧರ್ಮವನ್ನು ಬೇರುಸಹಿತ ಕಿತ್ತುಹಾಕಬೇಕು” ಎಂಬ ಅಂಬೇಡ್ಕರ್ ಮಾತನ್ನೂ “ಎಲ್ಲರೂ ಸಮಾನರಾಗಿ ಜನಿಸಿದರೂ, ಬ್ರಾಹ್ಮಣರು ಮಾತ್ರ ಶ್ರೇಷ್ಠ ಮತ್ತು ಉಳಿದೆಲ್ಲರೂ ಅಸ್ಪೃಶ್ಯರು ಎಂಬುದು ಸಂಪೂರ್ಣ ಅಸಂಬದ್ಧ. ಇದು ದೊಡ್ಡ ವಂಚನೆ” ಎಂಬ ಪೆರಿಯಾರ್ ಮಾತನ್ನೂ ಚೇತನ್ ಉಲ್ಲೇಖಿಸಿದ್ದರು.

ಜಾತಿ ವ್ಯವಸ್ಥೆಯನ್ನು ಪ್ರಶ್ನಿಸುವ ಚೇತನ್ ನಿಲುವನ್ನು ಹಲವರು ಶ್ಲಾಘಿಸಿದರೆ, ಕೆಲವರು ಚೇತನ್ ಯಾವಾಗಲೂ ಅಂಚಿನಲ್ಲಿರುವವರ ಹಕ್ಕುಗಳಿಗೆ ಸಂಬಂಧಿಸಿದ ವಿಚಾರಗಳನ್ನು ಬೆಂಬಲಿಸಿದ್ದಾರೆ ಎಂದು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ.
ಆದರೆ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸ ಚ್ಚಿದಾನಂದ ಮೂರ್ತಿ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ದೂರು ಸಲ್ಲಿಸಿ, ನಟನ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಚೇತನ್ ಸಮುದಾಯದ ಭಾವನೆಗಳನ್ನು ನೋಯಿಸಿದ್ದಾರೆ, ಅವರು ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ದಾರಕರಣ ದಾಖಲಿಸಿದ್ದಾರೆಯೇ ಎಂಬುದು ತಿಳಿದಿಲ್ಲ. ಪೊಲೀಸರಿಂದ ಯಾವುದೇ ನೋಟಿಸ್ ಬಂದಿಲ್ಲ ಎಂದು ಚೇತನ್ ಹೇಳಿರುವುದಾಗಿ ವರದಿಯಾಗಿದೆ.
ಸಾಮಾಜಿಕ-ಆರ್ಥಿಕ ಅಥವಾ ಲಿಂಗ ಸಂಬಂಧಿತ ಅನ್ಯಾಯವು ಸಮಾಜದಲ್ಲಿ ಪ್ರಚಲಿತದಲ್ಲಿರುವುದನ್ನು ನಾನು ಬಯಸುವುದಿಲ್ಲ. ತಾರತಮ್ಯವಿಲ್ಲದ ಸಮಾಜವನ್ನು ಕಟ್ಟುವುದು ನಮ್ಮ ಗುರಿಯಾಗಿದೆ ಎಂಬುದು ಚೇತನ್ ನಿಲುವು.
ಜೂ. 6ರ ಚೇತನ್ ಟ್ವೀಟ್ ಸಂಬಂಧ ಬ್ರಾಹ್ಮಣ ಮಂಡಳಿಯಿಂದ ದೂರು ದಾಖಲಾಗಿದೆ.




