Latestಮನರಂಜನೆಸಿನಿಮಾಸೆಲೆಬ್ರಿಟಿ

ಬೀದಿ ನಾಯಿ ಲಾರಾಳ ಅಂತ್ಯಕ್ರಿಯೆಯಲ್ಲಿ ಕಣ್ಣೀರು ಹಾಕಿದ ನಟಿ ರಮ್ಯಾ

ಬೆಂಗಳೂರು: ಉದ್ಯಮಿ ಆದಿಕೇಶವಲು ಮೊಮ್ಮಗ ಆದಿನಾರಾಯಣ ಕಾರು ಹತ್ತಿಸಿ ಹತ್ಯೆ ಮಾಡಿದ್ದ ಬೀದಿ ನಾಯಿಯ ಅಂತ್ಯಸಂಸ್ಕಾರ ನಿನ್ನೆ ನಡೆದಿದೆ. ಆದಿನಾರಾಯಣನ ವರ್ತನೆಗೆ ಸ್ಯಾಂಡಲ್​ವುಡ್ ನಟಿ ರಮ್ಯಾ ಸೇರಿದಂತೆ ಸಾಕಷ್ಟು ಮಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆ ಸಂಜೆ ಸುಮ್ಮನಹಳ್ಳಿಯ ಪ್ರಾಣಿಗಳ ಚಿತಾಗಾರದಲ್ಲಿ ಲಾರಾಳ ಅಂತ್ಯಕ್ರಿಯೆ ನಡೆದಿದ್ದು ಈ ವೇಳೆ ನಟಿ ರಮ್ಯಾ ಕಣ್ಣೀರು ಹಾಕಿದ್ದಾರೆ.

ಸ್ಯಾಂಡಲ್​ವುಡ್ ನಟಿ ರಮ್ಯಾ ಅವರಿಗೆ ಶ್ವಾನಗಳ ಬಗ್ಗೆ ಅತೀವ ಪ್ರೀತಿ. ಪ್ರಾಣಿಗಳಿಗಾಗಿ ಸದಾ ಮಿಡಿಯುವ ನಟಿ ರಮ್ಯಾ ಇತ್ತೀಚೆಗೆ ಬೆಂಗಳೂರಿನಲ್ಲಿ ಆದಿ ನಾರಾಯಣರಿಂದ ಹತ್ಯೆಯಾದ ಬೀದಿ ನಾಯಿ ಲಾರಾಳ ಹತ್ಯೆಯನ್ನ ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೆ ಪ್ರಾಣಿಗಳ ರಕ್ಷಣೆಗೆ ಕಠಿಣ ಕಾನೂನು ಬೇಕು ಎಂದು ಒತ್ತಾಯಿಸಿದ್ದಾರೆ.

ಲಾರಾಳ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾದ ನಟಿ ರಮ್ಯಾ ಪ್ರತಿಕ್ರಿಯಿಸಿದ್ದು “ಲಾರಾ ನಾಯಿ ಹತ್ಯೆಯ ಬಗ್ಗೆ ನನಗೆ ಟ್ವಿಟ್ಟರ್​ನಲ್ಲಿ ಮಾಹಿತಿ ತಿಳಿಯಿತು. ಇದು ಅಕಸ್ಮಿಕವಾಗಿ ನಡೆದ ಘಟನೆಯಲ್ಲ. ಆರೋಪಿ ಉದ್ದೇಶ ಪೂರ್ವಕವಾಗಿಯೇ ನಾಯಿಯನ್ನು ಕೊಂದಿದ್ದಾನೆ. ಈ ಭೂಮಿ ಮೇಲೆ ಬದಕಲು ನಮಗೆ ಇರುವಷ್ಟೇ ಹಕ್ಕು ಬೇರೆ ಪ್ರಾಣಿ-ಪಕ್ಷಿಗಳಿಗೂ ಇದೆ. ಆದರೆ ನಾವು ಅವುಗಳಿಗೆ ಬೆಲೆ ಕೊಡುತ್ತಿಲ್ಲ. ಈಗ ನಾನು ಒಬ್ಬ ಸೆಲೆಬ್ರಿಟಿಯಾಗಿ ನನ್ನ ಸ್ಥಾನವನ್ನು ಒಳ್ಳೆಯದಕ್ಕಾಗಿ ಬಳಕೆ ಮಾಡದಿದ್ದರೆ ವ್ಯರ್ಥ ಆದಂತೆ ಆಗುತ್ತದೆ. ಇಂಥ ಘಟನೆ ಬಗ್ಗೆ ನಾನು ಮಾತನಾಡದೇ ಇದ್ದರೆ ನನಗೆ ಪಾಪಪ್ರಜ್ಞೆ ಕಾಡುತ್ತದೆ” ಎಂದಿದ್ದಾರೆ.

ನಮ್ಮ ದೇಶದಲ್ಲಿ ಪ್ರಾಣಿಗಳ ರಕ್ಷಣೆಗೆ ಕಠಿಣ ಕಾನೂನು ಇಲ್ಲ. 50 ರೂಪಾಯಿ ದಂಡ ಕಟ್ಟಿ ಹೊರಗೆ ಬಂದು ಬಿಡುತ್ತಾರೆ. ದಯೆ ಅನ್ನೋದು ಕೇವಲ ಮನುಷ್ಯನ ಮೇಲೆ ಮಾತ್ರ ಅಲ್ಲ, ಪ್ರಾಣಿ ಪಕ್ಷಗಳ ಬಗ್ಗೆಯೂ ಇರಬೇಕು. ದೊಡ್ಡವರು, ದುಡ್ಡು ಇರುವವರು ಕಾನೂನಿನಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಪ್ರಾಣಿ ರಕ್ಷಣೆಗೆ ಇರುವ ಕಾನೂನನ್ನು ಕಠಿಣವಾಗಿಸಬೇಕು ಎಂದು ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ನಟಿ ರಮ್ಯಾ ಹೇಳಿದ್ದಾರೆ.

ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸುಮ್ಮನಹಳ್ಳಿಯ ಪ್ರಾಣಿಗಳ ಚಿತಾಗಾರದಲ್ಲಿ ಲಾರಾಳ ಅಂತ್ಯಕ್ರಿಯೆ ನಡೆಸಲಾಯಿತು. ಈ ವೇಳೆ ಸೇಂಟ್ ಪೀಟರ್ಸ್ ಶಾಲೆಯ ಮಕ್ಕಳು ಲಾರಾಳ ಶವಕ್ಕೆ ಹೂವು ಅರ್ಪಿಸುವ ಮೂಲಕ ಅಂತಿಮ ವಿದಾಯ ಹೇಳಿದರು.

Spread the love

Related Articles

Leave a Reply

Your email address will not be published. Required fields are marked *

Back to top button