ವರುಣ ಅಬ್ಬರ: ಕಲಬುರಗಿ ಜಿಲ್ಲೆಯಲ್ಲಿ ಹಲವು ಅವಘಡಗಳು

ಕಲಬುರಗಿ: ಜಿಲ್ಲೆಯಾದ್ಯಂತ ವರುಣನ ಅರ್ಭಟ ಜೋರಾಗಿದೆ. ಜಿಲ್ಲೆಯ ಬೆಣ್ಣೆತೋರಾ ಜಲಾಶಯ ಭರ್ತಿಯಾಗಿರುವುದರಿಂದ 20 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ನಗರದ ವಿವಿಧ ಬಡಾವಣೆಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಗಿದೆ.
ಜಿಲ್ಲೆಯ ಚಿಂಚೋಳಿ ತಾಲೂಕಿನ ದೇಗಲಮಡಿ ಗ್ರಾಮದಲ್ಲಿ 50ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಪಟಪಳ್ಳಿ, ಹಸರಗುಂಡಗಿ, ಗಡಿಕೇಶ್ವರ, ಯಂಪಳ್ಳಿ, ಕಂಚಿನಾಳ, ಶಾದಿಪೂರ್ ಗ್ರಾಮಗಳಲ್ಲೂ ಕೂಡ ಮಳೆ ನೀರಿನಿಂದ ಮನೆಗಳು ಜಲಾವೃತವಾಗಿವೆ.
ಕಾಳಗಿ ತಾಲೂಕಿನ ಹಳೆ ಹೆಬ್ಬಾಳ ಗ್ರಾಮಸ್ಥರಿಗೆ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಇಲ್ಲಿನ ಸಣ್ಣ ಸೇತುವೆ ಸಂಪೂರ್ಣ ಜಲಾವೃತವಾಗಿದ್ದು, ನದಿ ಪಾತ್ರದ ಜನರಲ್ಲಿ ಆತಂಕ ಮನೆ ಮಾಡಿದೆ. ಮಳೆಯಿಂದಾಗಿ ಕಟಾವಿಗೆ ಬಂದಿದ್ದ ಉದ್ದು, ಹೆಸರಿನ ಬೆಳೆ ಹಾಳಾಗುವ ಆತಂಕ ರೈತರಲ್ಲಿ ಮೂಡಿದೆ. ತಡರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಾಳಗಿ ತಾಲೂಕಿನ ನೀಲಕಂಠೇಶ್ವರ ದೇವಸ್ಥಾನ ಸಂಪೂರ್ಣ ಜಲಾವೃತವಾಗಿದೆ. ಮಳಖೇಡ ಗ್ರಾಮದ ಕಾಗಿಣಾ ನದಿ ಮೇಲ್ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಮೇಲ್ಸೇತುವೆ ಮೇಲೆ ನೀರು ಹರಿಯುತ್ತಿರುವ ಪರಿಣಾಮ ಕಲಬುರಗಿ- ಹೈದರಾಬಾದ್ ಮುಖ್ಯರಸ್ತೆ ಸಂಪರ್ಕ ಕಲ್ಪಿಸುವ ವಾಗ್ದಾರಿ-ರಿಬ್ಬನಪಲ್ಲಿ ಹೆದ್ದಾರಿ ಸಂಪೂರ್ಣ ಸ್ಥಗಿತಗೊಂಡಿದೆ.
ನದಿಯ ತಟದಲ್ಲಿರುವ ಐತಿಹಾಸಿಕ ಟೀಕಾಚಾರ್ಯರ ಮೂಲ ವೃಂದಾವನ ಸಮೀಪಕ್ಕೆ ನೀರು ಬಂದು ನಿಂತಿದ್ದು, ಮೂಲ ವೃಂದಾವನಕ್ಕೆ ನೀರು ನುಗ್ಗುವ ಆತಂಕವಿದೆ. ಅಲ್ಲದೇ, ಪಟ್ಟಣದ ಚೋಟಿಗಿರಣಿ ಬಡಾವಣೆಯ ಅನೇಕ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಭೀಕರ ಮಳೆ ಪರಿಣಾಮ ಬಡಾವಣೆಯ ಅನೇಕ ರಸ್ತೆಗಳಲ್ಲಿ ಮೊಳಕಾಲೆತ್ತರಕ್ಕೆ ನೀರು ಜಮಾವಣೆಯಾಗಿದ್ದು, ಮನೆಯಿಂದ ಹೊರಬರಲಾರದೆ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ
