ಕಾಂಗ್ರೆಸ್ ನಿಂದ ಬಂಡಾಯ ಎದ್ದು ಗೆದ್ದಿರುವವರ ಜತೆ ಮಾತನಾಡಿ ಅಧಿಕಾರ ಹಿಡಿಯುವ ಪ್ರಯತ್ನ ಮಾಡುತ್ತೇವೆ: ಅಲ್ತಾಫ್ ಹಳ್ಳೂರ

ಧಾರವಾಡ: ಹುಬ್ಬಳ್ಳಿ – ಧಾರವಾಡ ಅವಳಿನಗರ ಪಾಲಿಕೆಯಲ್ಲಿ ನಮ್ಮ ಪಕ್ಷದ 33 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಪಕ್ಷದಿಂದ ಬಂಡಾಯ ಎದ್ದು ಸ್ಪರ್ಧೆ ಮಾಡಿ ಗೆದ್ದಿರುವವರ ಜೊತೆಗೆ ಮಾತನಾಡಿ ಪಾಲಿಕೆಯ ಅಧಿಕಾರ ಹಿಡಿಯುವ ಪ್ರಯತ್ನ ಮಾಡುತ್ತೇವೆ ಎಂದು ಹುಬ್ಬಳ್ಳಿ- ಧಾರವಾಡ ಮಹಾನಗರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ತಾಪ್ ಹಳ್ಳೂರ ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹು-ಧಾ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 50 ವಾರ್ಡಿನಲ್ಲಿ ಗೆಲ್ಲುವ ನಿರೀಕ್ಷೆ ಇತ್ತು. ಆದರೆ ಪಕ್ಷದ ಕೆಲ ನ್ಯೂನತೆಗಳಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ. ಈ ಕಾರಣದಿಂದ ಇನ್ನೂ 5-6 ಕಡೆಗಳಲ್ಲಿ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿದ್ದೇವೆ ಎಂದರು.
ಈ ಬಾರಿ ಬಿಜೆಪಿಯ ಕೆಲ ದೋಷಗಳೇ ನಮಗೆ ವರದಾನ ಆಗಿದ್ದರಿಂದ ಕಳೆದ ಬಾರಿಗಿಂತ ಈ ಬಾರಿ ನಮ್ಮ ಪಕ್ಷ ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸಿದೆ. ಬಿಜೆಪಿ ಪಕ್ಷ ಈ ಹಿಂದೆ ಹೇಳಿದ ಪ್ರಣಾಳಿಕೆ ಪ್ರಕಾರ ಕೆಲಸ ಮಾಡಿಲ್ಲ. ಈ ಬಾರಿ ಜನರು ನಮ್ಮ ಪಕ್ಷದ ಪ್ರಣಾಳಿಕೆ ನೋಡಿ ಮತ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಬಂಡಾಯವೆದ್ದು ಗೆಲುವು ಸಾಧಿಸಿದವರನ್ನು ಮತ್ತೇ ಪಕ್ಷಕ್ಕೆ ಕರೆತರುವ ಬಗ್ಗೆ ನಮ್ಮ ವರಿಷ್ಠರು ತೀರ್ಮಾನದಂತೆ ನಡೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.




