ಉತ್ತರ ಕನ್ನಡಜಿಲ್ಲಾ ಸುದ್ದಿ

ಉತ್ತರ ಕನ್ನಡ : ಕೋವಿಡ್​​ ಮೂರನೇ ಅಲೆ ಆತಂಕದಲ್ಲಿ ಪ್ರವಾಸೋದ್ಯಮ

ಕಾರವಾರ : ಉತ್ತರ ಕನ್ನಡ ಜಿಲ್ಲೆ ತಾನು ಹೊಂದಿರುವ ಹತ್ತು ಹಲವು ಪ್ರವಾಸಿ ತಾಣಗಳ ಮೂಲಕವೇ ರಾಜ್ಯ,ಹೊರರಾಜ್ಯ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ವಿದೇಶಿ ಪ್ರವಾಸಿಗರನ್ನ ತನ್ನತ್ತ ಸೆಳೆಯುತ್ತಿದೆ. ಕಳೆದೆರಡು ವರ್ಷಗಳಿಂದ ಕೊರೋನಾ ಅಟ್ಟಹಾಸ ಜಿಲ್ಲೆಯ ಪ್ರವಾಸೋದ್ಯಮ ಚಟುವಟಿಕೆಯ ಮೇಲೆ ಸಾಕಷ್ಟು ಹೊಡೆತ ನೀಡಿತ್ತು. ಸದ್ಯ ಪ್ರವಾಸಿಗರ ಆಗಮನದೊಂದಿಗೆ ಸುಧಾರಿಸಿಕೊಳ್ಳುತ್ತಿರುವ ಪ್ರವಾಸೋದ್ಯಮಕ್ಕೆ ಕೊರೋನಾ ಮೂರನೇ ಅಲೆಯ ಆತಂಕ ಎದುರಾಗಿದೆ.

ಪ್ರವಾಸಿಗರ ಫೇವರಿಟ್ ಎಂದೇ ಕರೆಯಲಾಗುತ್ತಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಮನಸೂರೆಗೊಳ್ಳುವ ಕಡಲ ತೀರಗಳು,ಇನ್ನೊಂದೆಡೆ ಘಟ್ಟದ ಮೇಲಿನ ತಾಲೂಕುಗಳಲ್ಲಿನ ಜಲಪಾತಗಳು, ದೇವಸ್ಥಾನಗಳು ರೆಸಾರ್ಟ್, ಹೀಗೆ ಹತ್ತಾರು ಪ್ರವಾಸಿ ತಾಣಗಳು ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರನ್ನು ಜಿಲ್ಲೆಯತ್ತ ಕೈಬೀಸಿ ಕರೆಯುತ್ತಿವೆ.

ರಾಜ್ಯದ ಕೆಲ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಪ್ರವಾಸೋದ್ಯಮ ಚಟುವಟಿಕೆ ಮತ್ತೆ ಸ್ಥಗಿತಗೊಳ್ಳುವ ಆತಂಕದಲ್ಲಿದೆ. ವರ್ಷಾಂತ್ಯದ ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಪ್ರತಿವರ್ಷ ಸಾಕಷ್ಟು ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡುತ್ತಿದ್ದರು. ಅಲ್ಲದೇ ಇದೀಗ ಮದುವೆಗಳ ಸೀಸನ್ ಸಹ ಆಗಿರುವುದರಿಂದ ಸಾಕಷ್ಟು ಸಂಖ್ಯೆಯಲ್ಲಿ ಹೊರಜಿಲ್ಲೆ, ರಾಜ್ಯಗಳಿಂದ ಜನರು ಆಗಮಿಸುತ್ತಾರೆ. ಆದರೆ ಪ್ರವಾಸಿಗರ ಆಗಮನದೊಂದಿಗೆ ಮತ್ತೆ ಕೊರೋನಾ ಪ್ರಕರಣಗಳು ಹೆಚ್ಚಾದಲ್ಲಿ ಮತ್ತೆ ಪ್ರವಾಸೋದ್ಯಮ ನೆಲಕಚ್ಚುವ ಭೀತಿ ಎದುರಾಗಿದೆ.

ಜಿಲ್ಲೆಯ ದಾಂಡೇಲಿ, ಗೋಕರ್ಣ,ಮುರ್ಡೇಶ್ವರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆ ನಂಬಿಕೊಂಡೇ ಸಾವಿರಾರು ಕುಟುಂಬಗಳು ಜೀವನ ಸಾಗಿಸುತ್ತಿವೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹಲವರಿಗೆ ಪ್ರವಾಸೋದ್ಯಮ ಉದ್ಯೋಗ ನೀಡಿದೆ.

ಸದ್ಯ ಕೊರೋನಾದಿಂದ ಪ್ರವಾಸೋದ್ಯಮಕ್ಕೆ ಹಿನ್ನೆಡೆಯಾದರೆ ಕಷ್ಟವಾಗಲಿದೆ. ಅಲ್ಲದೇ ಕಳೆದ ಬಾರಿಯಂತೆ ಕೊರೋನಾ ಹೆಚ್ಚಳವಾದ ಬಳಿಕ ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಂಡಲ್ಲಿ ಪ್ರವಾಸೋದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ತೊಂದರೆಯಾಗದಂತೆ ಕೋವಿಡ್ ನಿಯಮಾವಳಿಗಳನ್ನು ಜಾರಿಗೆ ಮಾಡುತ್ತೇವೆ.ಈಗಾಗಲೇ ದೇವಸ್ಥಾನಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ 15 ದಿನಕ್ಕೊಮ್ಮೆ ಕೋವಿಡ್ ತಪಾಸಣೆ ಮಾಡಿಸಿಕೊಳ್ಳಲು ಸೂಚನೆ ನೀಡಲಾಗಿದೆ.ಜನರು ಸಹ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದ್ದಾರೆ.

ಸದ್ಯ ಹೊಸ ವರ್ಷವನ್ನು ಸ್ವಾಗತಿಸಲು ಜಿಲ್ಲೆಯಲ್ಲಿ ಪ್ರವಾಸಿ ತಾಣಗಳು ಸಜ್ಜಾಗಿವೆ. ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ನಿರೀಕ್ಷೆಯಿದ್ದು, ಒಂದೊಮ್ಮೆ ಕೋವಿಡ್ ಹೆಚ್ಚಾದರೆ ಈ ಬಾರಿ ಹೊಸ ವರ್ಷಾಚರಣೆಗೂ ತೊಡಕಾಗಲಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button