ಉತ್ತರ ಕನ್ನಡಜಿಲ್ಲಾ ಸುದ್ದಿ

ತುಳಸಿ ಹಬ್ಬದ ಕಳೆ‌ ಕಸಿದ ಮಳೆ : ವ್ಯಾಪಾರಿಗಳಿಗೂ ನಿರಾಶೆ

ಕಾರವಾರ : ಉತ್ತರ ಕನ್ನಡ ಜಿಲ್ಲೆಯಾದ್ಯಂತ ಬಿಡದೆ ಸುರಿಯುತ್ತಿರುವ ಮಳೆ ಉತ್ಥಾನ ದ್ವಾದಶಿಯ ತುಳಸಿ ಹಬ್ಬದ ಕಳೆಯನ್ನು ಕಸಿದುಕೊಡಿದೆ. ಜಿಲ್ಲೆಯಲ್ಲಿ ವಿಶೇಷವಾಗಿ ಅನೇಕ ಕಡೆಗಳಲ್ಲಿ ಅದ್ದೂರಿಯಾಗಿ ತುಳಸಿ ಹಬ್ಬವನ್ನು ಆಚರಣೆ ಮಾಡಲಾಗುತ್ತಿತ್ತು.ಆದರೆ ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಹಬ್ಬ ಕಳೆಗುಂದಿದೆ. ಹಬ್ಬದ ಕುರಿತಾಗಿ ವ್ಯಾಪಾರಕ್ಕಾಗಿ ಬಂದ ಬೇರೆ ಜಿಲ್ಲೆಯ ಹೂವು ಹಾಗೂ ಕಬ್ಬಿನ ವ್ಯಾಪಾರಿಗಳಿಗೆ ನಿರಾಶೆ ಮೂಡಿಸಿದೆ.

ತುಳಸಿ ಹಬ್ಬದ ನಿಮಿತ್ತ ಧಾರವಾಡ,ಹಾವೇರಿ ಹಾಗೂ ಶಿವಮೊಗ್ಗ ಜಿಲ್ಲೆಗಳಿಂದ ಉತ್ತರ ಕನ್ನಡ ಜಿಲ್ಲೆಗೆ ಬಂದು ಸೇವಂತಿಗೆ,ಗೊಂಡೆ (ಚೆಂಡುಹೂವು) ಹಾಗೂ ವಿವಿಧ ಜಾತಿಯ ಹೂವುಗಳನ್ನು ಮತ್ತು ಕಬ್ಬುಗಳನ್ನು ಯತೇಚ್ಛವಾಗಿ ತಂದು ವ್ಯಾಪಾರ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಎಡೆಬಿಡದೇ ಸುರಿಯುತ್ತಿರುವ ಜೋರಾದ ಮಳೆಯಿಂದಾಗಿ ವ್ಯಾಪಾರಿಗಳಿಗೆ ವ್ಯಾಪಾರವಿಲ್ಲದೇ ಕಣ್ಣೀರು ಹಾಕುವಂತಾಗಿದೆ.ಕಳೆದ ನಾಲ್ಕೈದು ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದ ಹಬ್ಬ ಕಳೆಗುಂದಿದೆ. ಮಳೆಯಿಂದಾಗಿ ಗ್ರಾಹಕರು ಮನೆಯಿಂದ ಹೊರಗೆ ಬರುತ್ತಿಲ್ಲ. ಇತ್ತ ಗ್ರಾಹಕರಿಲ್ಲದೇ ವ್ಯಾಪಾರಿಗಳು ತಲೆಯ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ.

ತಾವು ತಂದಿರುವ ಹೂವು ಮತ್ತು ಕಬ್ಬುಗಳನ್ನು ವಾಪಸ್ ಒಯ್ಯಲೂ ಆಗದೇ, ಮಾರಾಟ ಮಾಡಲೂ ಆಗದೇ ವ್ಯಾಪಾರಿಗಳು ಪರದಾಡುವಂತಾಗಿದೆ. ಮಳೆಯಿಂದ ಹೂವುಗಳು ಹಾಳಾಗುತ್ತಿವೆ.

ಒಟ್ಟಿನಲ್ಲಿ ವರುಣ ಹಬ್ಬದ ಸಡಗರಕ್ಕೆ ಅಡ್ಡಿಪಡಿಸಿದ್ದಲ್ಲದೆ ಬಡ ವ್ಯಾಪಾರಿಗಳಿಗೂ ನಿರಾಶೆಗೆ ಕಾರಣನಾಗಿದ್ದಾನೆ. ಈ ವರ್ಷ ಅಕಾಲಿಕ ಮಳೆಯಿಂದಾಗಿ ರೈತರು ಬೆಳೆಗಳನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಹಬ್ಬದ ಆಚರಣೆ ಒಂದೆಡೆಯಾದರೆ ಇನ್ನೊಂದೆಡೆ ರೈತರ ಬದುಕು ಕೂಡ ಕಷ್ಟದಲ್ಲಿದೆ .

Spread the love

Related Articles

Leave a Reply

Your email address will not be published. Required fields are marked *

Back to top button