ಕಲಬುರ್ಗಿ ಮತದಾರರ ಪಟ್ಟಿಗೆ ಎಂಎಲ್ಸಿಗಳ ಸೇರ್ಪಡೆ ವಿಚಾರ: ಹೈಕೋರ್ಟ್ ಮೆಟ್ಟಿಲೇರಿದ ಕಾಂಗ್ರೆಸ್

ಕಲಬುರ್ಗಿ: ಬಿಜೆಪಿ ಕಾರ್ಯವೈಖರಿ ವಿರುದ್ಧ ಕಾಂಗ್ರೆಸ್ ಹೈಕೋರ್ಟ್ ಮೆಟ್ಟಿಲೇರಿದೆ. ಕಲಬುರಗಿ ನಿವಾಸಿಗಳು ಅಲ್ಲದಿದ್ದರೂ ಏಳು ಜನ ಎಂಎಲ್‌ಸಿ ಗಳನ್ನು ಕಲಬುರಗಿ ಮತದಾರರ ಪಟ್ಟಿಗೆ ಸೇರ್ಪಡೆ ಗೊಳಿಸುತ್ತಿರುವದನ್ನು ಪ್ರಶ್ನಿಸಿ ಕಲಬುರ್ಗಿ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ ಎಂದು ಮಾಜಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ಮಹಾನಗರ ಪಾಲಿಕೆ ಮೇಯರ್ ಉಪ ಮೇಯರ್ ಅಧಿಕಾರ ಹಿಡಿಯಲು ಬಿಜೆಪಿಯವರು ವಾಮಮಾರ್ಗ ಅನುಸರಿಸುತ್ತಿದ್ದಾರೆ. ಕಲಬುರ್ಗಿ ನಿವಾಸಿಗಳು ಅಲ್ಲದಿದ್ದರೂ ಕಾನೂನು ಬಾಹಿರವಾಗಿ ರಾಜ್ಯದ ಏಳು ಜನ ಎಂಎಲ್‌ಸಿ ಗಳನ್ನು ಕಲಬುರ್ಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಹುನ್ನಾರ ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಲಬುರಗಿಯಲ್ಲಿ ಒಂದು ದಿನ ಮಲಗದ ವ್ಯಕ್ತಿಗಳು ಹೇಗೆ ಇಲ್ಲಿಯ ನಿವಾಸಿಗಳಾಗ್ತಾರೆ?. ಮತದಾರರ ಪಟ್ಟಿಗೆ ಸೇರಲು ಅದರದೆಯಾದ ನಿಯಮಗಳಿವೆ. ಎಲ್ಲಾ ನಿಯಮಗಳನ್ನ ಗಾಳಿಗೆ ತೂರಿ ಅದು ಹೇಗೆ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗುತ್ತಿದೆ ಅಂತಾ ಕಿಡಿ ಕಾರಿದ ಪಾಟೀಲ್ ಈ ಕುರಿತಾಗಿ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಶಾಸಕ ಪ್ರಿಯಾಂಕ್ ಖರ್ಗೆ ಗಂಡೋ ಹೆಣ್ಣೋ ಎಂಬ ಪ್ರತಾಪ್ ಸಿಂಹ ಹೇಳಿಕೆ ತೀವ್ರವಾಗಿ ಖಂಡಿಸಿದ ಅವರು, ಇಂತಹ ಹೇಳಿಕೆಗಳು ಪ್ರತಾಪ್ ಸಿಂಹ ಅವರ ಸಂಸ್ಕೃತಿ ಏನೆಂದು ತೊರಿಸಿಕೊಡುತ್ತವೆ. ಪ್ರಿಯಾಂಕ್ ಖರ್ಗೆ ಗಂಡೋ ಹೆಣ್ಣೋ ರಾಜ್ಯಕ್ಕೆ ಗೊತ್ತಿದೆ. ಅವಿವೇಕಿ ತರಹ ಸಂಸದ ಪ್ರತಾಪ್ ಸಿಂಗ್ ಮಾತಾಡ್ತಿದ್ದಾರೆ ಎಂದರು.




