ಸಮುದಾಯದ ಅಭಿವೃದ್ಧಿ ಕಾರ್ಯಕ್ಕೆ ಶ್ರಮ-ರಾಜಪ್ಪ

ದೇವನಹಳ್ಳಿ : ಯುವಜನರಲ್ಲಿ ಜಾಗೃತಿ ಮೂಡಿಸಿ, ಅಭಿವೃದ್ಧಿಪರವಾಗಿ ಸಂಘಟನೆ ಶ್ರಮಿಸಲಿದೆ ಎಂದು ಸಮುದಾಯದ ಮುಖಂಡ ಬುಳ್ಳಹಳ್ಳಿ ರಾಜಪ್ಪ ಹೇಳಿದರು.
ಪಟ್ಟಣದಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿಯಿಂದ ಹಮ್ಮಿಕೊಂಡಿದ್ದ ಶ್ರೀ ಆದಿ ಜಾಂಭವ ಜಯಂತಿ ಹಾಗೂ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿ ನಂತರ ಮಾತನಾಡಿದ ಅವರು, ಜಾತ್ಯತೀತವಾಗಿ ದಲಿತರು, ಬಡತನ ರೇಖೆಗಿಂತ ಕಡಿಮೆ ಇರುವ ಜನರನ್ನು ಸಂಘಟನೆಯತ್ತ ಕರೆತಂದು, ಯುವಕರಲ್ಲಿ ಜಾಗೃತಿ ಮೂಡಿಸಬೇಕು. ಮಹಿಳೆಯರು, ಯುವಕರು, ರೈತರು ಹಾಗೂ ಹಿಂದುಳಿದ ಜನರ ಅಭಿವೃದ್ಧಿಗಾಗಿ ಸಂಘಟನೆ ಶ್ರಮಿಸಲಿದೆ ಎಂದರು.
ಇದೇ ವೇಳೆ ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ, ತಾಲ್ಲೂಕಿನಲ್ಲಿ ನಮ್ಮ ಸಮುದಾಯದ ಜನತೆ ಹೆಚ್ಚಾಗಿದ್ದರೂ ಸಹ ಯಾವುದೇ ರೀತಿಯ ಅಭಿವೃದ್ಧಿ ಸಾಧ್ಯವಾಗಿಲ್ಲ. ರಾಜಕೀಯವಾಗಿ ಬಳಸಿಕೊಳ್ಳಲು ಮಾತ್ರ ಮುಖಂಡರು ಮುಂದಾಗಿದ್ದಾರೆ. ಸಮುದಾಯದ ಪ್ರಗತಿ ಸಂಘಟನೆಯಿಂದ ಮಾತ್ರ ಸಾಧ್ಯ ಎಂದರು.
ತಾಲ್ಲೂಕಿನಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ಅದಕ್ಕೆ ಕಡಿವಾಣ ಹಾಕಲು ಸಂಬಂಧಪಟ್ಟವರು ಮುಂದಾಗಬೇಕು. ಎಲ್ಲರ ಸಹಕಾರವಿದ್ದಲ್ಲಿ ಮಾತ್ರ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ. ಇಲ್ಲವಾದಲ್ಲಿ ತಟಸ್ಥನಾಗಿ ಜನಪರ ಸೇವೆಯಲ್ಲಿ ಮುಂದುವರೆಯುತ್ತೇನೆ ಎಂದು ತಿಳಿಸಿದರು.
ಮಾದಿಗ ದಂಡೋರದ ತಾಲ್ಲೂಕು ಅಧ್ಯಕ್ಷ ಕದೀರಪ್ಪ, ಅಣ್ಣೇಶ್ವರ ಗ್ರಾಪಂ ವೇಣುಗೋಪಾಲ್, ಜಿಪಂ ಮಾಜಿ ಸದಸ್ಯ ಚನ್ನೇನಹಳ್ಳಿ ಮುನಿಯಪ್ಪ, ಜೆಡಿಎಸ್ ತಾಲ್ಲೂಕು ಉಪಾಧ್ಯಕ್ಷ ಹನುಮಂತಪ್ಪ, ಪುರಸಭಾ ಸದಸ್ಯ ಡಿ.ಆರ್.ಬಾಲರಾಜು, ಆದಿ ಜಾಂಭವ ಟ್ರಸ್ಟಿನ ಅಧ್ಯಕ್ಷ ಶ್ರೀನಿವಾಸ್ ಇತರರಿದ್ದರು.




