ವಾಲ್ಮೀಕಿ ಮಠದ ಟ್ರಸ್ಟ್ ಸೂಪರ್ ಸೀಡ್ ಮಾಡುವಂತೆ ಆಗ್ರಹ

ದಾವಣಗೆರೆ: ಮೂಲ ಜಾತಿಯನ್ನು ಮರೆಮಾಚಿ ಸುಳ್ಳು ದಾಖಲೆ ಸೃಷ್ಠಿಸಿ ವಾಲ್ಮೀಕಿ ಸಮಾಜದವರೆಂದು ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ಅವರು, ನಾಯಕ ಸಮಾಜದ ಗುರುಪೀಠ ಅಲಂಕರಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಬುಡಕಟ್ಟು ಹಿತರಕ್ಷಣಾ ಸಂಘದ ರಾಜ್ಯಾಧ್ಯಕ್ಷ ಎಸ್.ಹೆಚ್ ಸುಭಾಷ್ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಸ್ತ ತಳವಾರ ಸಮುದಾಯಕ್ಕೆ ಸೇರಿದ ಪ್ರಸನ್ನಾನಂದ ಪುರಿ ಸ್ವಾಮೀಜಿ ಸುಳ್ಳು ದಾಖಲೆ ಸೃಷ್ಠಿಸಿದ್ದಾರೆ. ನಾಯಕ ಸಮಾಜಕ್ಕೆ ಸಲ್ಲಬೇಕಾದ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಅವರ ಓಟರ್ ಐಡಿ,ಪಡಿತರಚೀಟಿ ಸೇರಿದಂತೆ ಹಲವು ದಾಖಲೆಗಳಲ್ಲಿ ಬೆಸ್ತ ತಳವಾರ ಎಂದು ನಮೂದಾಗಿದೆ. ನಿಜವಾದ ನಾಯಕ ವಾಲ್ಮೀಕಿ ಸಮುದಾಯವನ್ನು ಸಾರ್ವಜನಿಕವಾಗಿ ಕೀಳಾಗಿ ಕಾಣುತ್ತಿದ್ದಾರೆ. ಸಮಾಜ ತುಳಿತಕ್ಕೊಳಗಾಗಿದೆ,ಬಡತನದಲ್ಲಿದೆ. ಆದರೆ ವಾಲ್ಮೀಕಿ ಜಾತ್ರೆ ಹೆಸರಿನಲ್ಲಿ ಶ್ರೀಗಳು ಬ್ಲಾಕ್ ಮನಿಯನ್ನು ವೈಟ್ ಮಾಡಲು ಹೊರಟಿದ್ದಾರೆ. ಇದಕ್ಕೆ ಟ್ರಸ್ಟ್ ನ ಸದಸ್ಯರು ಕೈಜೋಡಿಸಿದ್ದಾರೆ ಎಂದು ಆರೋಪಿಸಿದರು.
ಟ್ರಸ್ಟ್ ನಲ್ಲಿರುವವರು ಬೆಸ್ತ ಸಮುದಾಯದವರು ಇಲ್ಲಿಯೂ ಕೂಡ ನಾಯಕ ಸಮಾಜದ ಸದಸ್ಯರಿಲ್ಲ. ಆದ್ದರಿಂದ ಟ್ರಸ್ಟ್ ಸೂಪರ್ ಸೀಡ್ ಮಾಡಬೇಕು. ಶ್ರೀಗಳು ತಮ್ಮ ಕುಟುಂಬದ ಸದಸ್ಯರಿಗೆ ಆಸ್ತಿ ಮಾಡಲು ಸಹಕಾರ ನೀಡುತ್ತಿದ್ದಾರೆ. ಸರ್ಕಾರದಿಂದ ಪಡೆದ ಹಣಕ್ಕೆ ಇವರ ಬಳಿ ದೃಢೀಕೃತ ದಾಖಲೆಗಳಿಲ್ಲ.ಎಲ್ಲಾ ದಾಖಲೆಗಳನ್ನು ಪ್ರಸ್ತುತ ಪಡಿಸಬೇಕು.ಜಾತ್ರೆ ಹೆಸರಿನಲ್ಲಿ ಸರ್ಕಾರದಿಂದ ಕೋಟ್ಯಾಂತರ ಹಣಪಡೆದು ಸ್ವಂತಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ಸಮಾಜದವರಿಂದಲೂ ವಸೂಲಿ ಮಾಡಿದ್ದಾರೆಂದು ಆರೋಪ ಮಾಡಿದರು.
ಸರ್ಕಾರದ ಅನುದಾನ ಸಮಾಜಕ್ಕೆ ಅನುಕೂಲವಾಗಿಲ್ಲ ಬದಲಿಗೆ ಶ್ರೀಗಳ ಸ್ವಹಿತಾಸಕ್ತಿಗೆ ಬಳಕೆಯಾಗಿದೆ. ಅವರು ಕೂಡಲೇ ಪೀಠತ್ಯಾಗ ಮಾಡಬೇಕು. ಟ್ರಸ್ಟ್ ನಲ್ಲಿರುವ ಅನ್ಯ ಸಮುದಾಯದವರನ್ನು ತಕ್ಷಣ ಕಿತ್ತೊಗೆಯಬೇಕು.ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುತ್ತಿದೆ.ಲೆಕ್ಕಪತ್ರ ಕೇಳಿದರೆ ನಮ್ಮ ಮೇಲೆ ಬೆದರಿಕೆ ಹಾಕುತ್ತಿದ್ದಾರೆ. ಮಠಕ್ಕೆ ಸೇರಿದ ಆಸ್ತಿ ಕಬಳಿಸಲು ಬಿಡುವುದಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಚಿಕ್ಕಬಳ್ಳಾಪುರ ವಾಲ್ಮೀಕಿ ಗುರುಪೀಠದ ಬ್ರಹ್ಮಾನಂದ ಗುರೂಜಿ,ಸುರೇಶ್ ತಾತ,ವಿಶ್ವಾರಾಧ್ಯ ನಾಯ್ಕ್,ಅಂಜಿನಾಯ್ಕ್ ಇದ್ದರು




