ಜಿಲ್ಲಾ ಸುದ್ದಿಬಾಗಲಕೋಟೆ

ಕೃಷ್ಣಾ ನದಿಯಲ್ಲಿ ಪ್ರವಾಹದ ಅಬ್ಬರ: ಗ್ರಾಮಕ್ಕೆ ನುಗ್ಗಿದ ನೀರು, ಬೋಟ್ ಮೂಲಕ ಜಾನುವಾರು ಸ್ಥಳಾಂತರ

ಬಾಗಲಕೋಟೆ: ಘಟಪ್ರಭಾ ನದಿಯಲ್ಲಿ ಪ್ರವಾಹದ ಅಬ್ಬರ ಜೋರಾಗಿದೆ. ಮುಧೋಳ ತಾಲೂಕಿನ ಒಂಟಿಗೋಡಿ ಗ್ರಾಮಕ್ಕೆ ನೀರು ನುಗ್ಗಿ ಗ್ರಾಮಸ್ಥರು ಪರದಾಡುವಂತಾಗಿದೆ.

ಮುಧೋಳ ತಾಲೂಕಿನ ಮಿರ್ಜಿ, ಒಂಟಗೋಡಿ, ಉತ್ತೂರು ಗ್ರಾಮಗಳು ಜಲಾವೃತ. ಮಿರ್ಜಿ ಗ್ರಾಮದ ಬಸವೇಶ್ವರ ವೃತ್ತ ಜಲಾವೃತಗೊಂಡಿದೆ. ಒಂಟಗೋಡಿ ಗ್ರಾಮಕ್ಕೆ ನೀರು ನುಗ್ಗಿದ್ದು, ಜನರು ಸ್ಥಳಾಂತರಗೊಳ್ಳುತ್ತಿದ್ದಾರೆ. 1 ಲಕ್ಷ 50 ಸಾವಿರ ಕ್ಯೂಸೆಕ್ಸ್ ಗೂ ಅಧಿಕ ಪ್ರಮಾಣದ ನೀರು ಘಟಪ್ರಭಾ ನದಿಗೆ ಹರಿದು ಬರುತ್ತಿದೆ.

ಮುಧೋಳ ಯಾದವಾಡ ಸಂಪರ್ಕಿಸುವ ಯಾದವಾಡ ಸೇತುವೆ ಜಲಾವೃತವಾಗಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ.ಮುಧೋಳ ನಗರದಿಂದ ಯಾದವಾಡ ಸೇರಿದಂತೆ ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದ್ದು, ಮುಧೋಳ ತಾಲೂಕಿನ ಚನಾಳ, ರೂಗಿ ಸೇರಿದಂತೆ 14 ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ.

ಮುಧೋಳ ತಾಲೂಕಿನ ಮಳಲಿ ಗ್ರಾಮ ಸಂಪೂರ್ಣ ಜಲಾವೃತಗೊಂಡಿದ್ದು, ರಾತ್ರೋ ರಾತ್ರಿ ಇಡೀ ಗ್ರಾಮವನ್ನು ನೀರು ಸುತ್ತುವರಿದಿದೆ. ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರನ್ನ ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗುತ್ತಿದೆ. ಗ್ರಾಮ ಪಂಚಾಯತಿ ಸಿಬ್ಬಂದಿಗಳಿಂದ ಜನರನ್ನು ಸ್ಥಳಾಂತರಿಸುವ ಕಾರ್ಯ ನಡೆದಿದೆ. ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆದು ಜನರನ್ನು ಸ್ಥಳಾಂತರಿಸಲಾಗುತ್ತಿದೆ.

ಇನ್ನೊಂದೆಡೆ ಜಮಖಂಡಿ ತಾಲೂಕಿನಲ್ಲಿ ಕೃಷ್ಣಾ ಪ್ರವಾಹ ಅಬ್ಬರ ಜೋರಾಗಿದ್ದು, ಮಹಾರಾಷ್ಟ್ರ ರಣಮಳೆಗೆ ಬಾಗಲಕೋಟೆ ಜಿಲ್ಲೆಯ ಕೃಷ್ಣಾ ಮಲಪ್ರಭಾ ಘಟಪ್ರಭಾ ತ್ರಿವಳಿ‌ನದಿಗಳಲ್ಲಿ ಅಬ್ಬರಿಸುತ್ತಿದ್ದು, ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಜಮಖಂಡಿ ತಾಲೂಕಿನ ಮುತ್ತೂರು, ಮೈಗೂರು, ಶೂರ್ಪಾಲಿ, ಕಂಕಣವಾಡಿ ಸೇರಿದಂತೆ ಸುಮಾರು 17ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹ ಭೀತಿ ಎದುರಿಸುತ್ತಿವೆ.

ನದಿಗೆ 2 ಲಕ್ಷ 50 ಸಾವಿರ ಕ್ಯೂಸೆಕ್ಸ್ ಗೂ ಅಧಿಕ ನೀರು ಹರಿಬಿಟ್ಟ ಕಾರಣ ಮುತ್ತೂರು ಗ್ರಾಮದ ನಡುಗಡ್ಡೆ ಪ್ರದೇಶದ ತೋಟದ ಮನೆಗಳಲ್ಲಿ ವಾಸವಿದ್ದ ಜನ ಜಾನುವಾರುಗಳ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಬೋಟ್ ಮೂಲಕ ಎತ್ತು, ಎಮ್ಮೆ, ಮೇಕೆ, ದನಕರುಗಳು ಸೇರಿದಂತೆ ಸಾಕು ಪ್ರಾಣಿಗಳನ್ನ ಬೋಟ್ ಮೂಲಕ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಲಾಗುತ್ತಿದೆ.

Spread the love

Related Articles

Leave a Reply

Your email address will not be published. Required fields are marked *

Back to top button