ಮುರುಡೇಶ್ವರದ ಯುವ ಶಿಲ್ಪಿಗಳಿಗೆ ಅರ್ಜುನ್ ಸರ್ಜಾರಿಂದ ಗೌರವ ಸಮರ್ಪಣೆ

ಕಾರವಾರ : ವಾಯುಪುತ್ರ ಹನುಮಂತನ ಬಗ್ಗೆ ಅಪಾರ ಪ್ರೀತಿ, ಗೌರವ ಹೊಂದಿರುವ ನಟ ಅರ್ಜುನ್ ಸರ್ಜಾ ಕೊನೆಗೂ ತಾವು ಕಂಡಿದ್ದ ಕನಸು ಈಡೇರಿಸಿಕೊಂಡಿದ್ದಾರೆ. ಸರ್ಜಾ ಕಟ್ಟಿಸಿದ್ದ ಆಂಜನೇಯ ಸ್ವಾಮಿ ದೇವಸ್ಥಾನದ ಕುಂಭಾಭಿಷೇಕ ಜುಲೈ 2 ರಂದು ನೆರವೇರಿದೆ. ಇದೇ ವೇಳೆ ದೇವಸ್ಥಾನದ ದ್ವಾರ ಕೆತ್ತನೆ ಮಾಡಿದ ಮುರುಡೇಶ್ವರದ ಭರತ್ ನಾಯ್ಕ ಅವರ ತಂಡಕ್ಕೆ ನಟ ಅರ್ಜುನ್ ಸರ್ಜಾ ಸನ್ಮಾನಿಸಿ ಧನ್ಯವಾದ ತಿಳಿಸಿದ್ದಾರೆ.
ಕನ್ನಡ ಮತ್ತು ತಮಿಳಿನ ಹೆಸರಾಂತ ನಟ ಅರ್ಜುನ್ ಸರ್ಜಾ ಆಂಜನೇಯನ ಪರಮ ಭಕ್ತರು. ಚೆನ್ನೈನಿಂದ ಹತ್ತು ಕಿ.ಮೀ.ದೂರದಲ್ಲಿರುವ ಜೆರುಗಮ್ ಭಕ್ಕಮ್ಮ ನಗರದಲ್ಲಿ 32 ಅಡಿ ಎತ್ತರದ ಆಂಜನೇಯನ ಮೂರ್ತಿಯನ್ನು ಸರ್ಜಾ ಅವರು ತಮ್ಮ ಸ್ವಂತ ವೆಚ್ಚದಲ್ಲಿ ನಿರ್ಮಿಸಿದ್ದಾರೆ. ಈ ದೇಗುಲದ ವಾಸ್ತು ಮಂಗಳೂರಿನ ಕೃಷ್ಣರಾಜ ತಂತ್ರಿಯವರದು.
ಈ ದೇಗುಲದ ಶಿಲೆ ಕಲ್ಲಿನ ಪ್ರಧಾನ ಬಾಗಿಲು ನಿರ್ಮಾಣಕ್ಕೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಭರತ್ ನಾಯ್ಕ ನೇತೃತ್ವದಲ್ಲಿ ಎಂಟು ಜನ ಯುವಕರ ತಂಡ ಕಳೆದ ಎಂಟು ತಿಂಗಳ ಹಿಂದೆ ಚೆನ್ನೈಗೆ ಪ್ರಯಾಣ ಬೆಳೆಸಿತ್ತು. ಕೇವಲ ಪ್ರಧಾನ ಬಾಗಿಲು ನಿರ್ಮಾಣಕ್ಕೆ ಸರ್ಜಾ ಕುಟುಂಬ ಈ ಯುವಕರಿಗೆ 3 ಲಕ್ಷ 80 ಸಾವಿರ ರೂ. ಪಾವತಿಸಿದ್ದಾರೆ. ಅರ್ಜುನ್ ಸರ್ಜಾ ತಮ್ಮನ್ನು ಕಾರ್ಮಿಕರಂತೆ ಕಾಣದೇ ಕುಟುಂಬದ ಸದಸ್ಯರಂತೆ ಕಂಡಿದ್ದಾರೆಂದು ಯುವಕ ಭರತ್ ನಾಯ್ಕ ಸ್ಮರಿಸಿಕೊಳ್ಳುತ್ತಾರೆ.
ಮುರುಡೇಶ್ವರ ಭರತ್ ನಾಯ್ಕ ತಂಡದ ಯುವ ಶಿಲ್ಪಿಗಳಾದ ವಿಜಯ್ ನಾಯ್ಕ, ಶರತ್ ನಾಯ್ಕ, ನಾಗರಾಜ್ ನಾಯ್ಕ, ವಸಂತ ನಾಯ್ಕ, ಸುಬ್ರಹ್ಮಣ್ಯ ನಾಯ್ಕ, ವೆಂಕಟೇಶ್ ನಾಯ್ಕ, ಮಣಿಕಂಠ ನಾಯ್ಕ ತಂಡದವರಿಗೆ ಅರ್ಜುನ್ ಸರ್ಜಾ ಮತ್ತು ಸರ್ಜಾ ಕುಟುಂಬದವರು ಗೌರವ ಸಲ್ಲಿಸಿದ್ದಾರೆ.




