ದಂಪತಿಗೆ ಬೆದರಿಸಿ ದರೋಡೆ ನಡೆಸಿದ ಕಿಡಿಗೇಡಿ

ರಾಮನಗರ: ಬೈಕ್ ನಲ್ಲಿ ಬಂದ ಮೂರು ಮಂದಿ ದರೋಡೆಕೋರ ಯುವಕರು ಬೈಕ್ ನಲ್ಲಿ ಬರುತ್ತಿದ್ದ ದಂಪತಿಯನ್ನು ಬೆದರಿಸಿ, ದರೋಡೆ ನಡೆಸಿದ್ದಾರೆ.
ಚನ್ನಪಟ್ಟಣ ತಾಲೂಕಿನ ನೀಲಕಂಠನಹಳ್ಳಿ ಪ್ರಗತಿ ಸ್ಪೋರ್ಟ್ಸ್ ಕ್ಲಬ್ ಬಳಿ ಘಟನೆ ನಡೆದಿದ್ದು, ತಾಲೂಕಿನ ಎ.ವಿ.ಹಳ್ಳಿಯ ಕೃಷ್ಣೇಗೌಡ ಮತ್ತು ಅವರ ಪತ್ನಿ ದರೋಡೆಗೆ ಒಳಗಾದವರು.
ಸದ್ಯ ಚನ್ನಪಟ್ಟಣದಲ್ಲಿ ವಾಸವಿರುವ ಕೃಷ್ಣೇಗೌಡ ದಂಪತಿ ತಮ್ಮ ಸ್ವಗ್ರಾಮ ಎ.ವಿ.ಹಳ್ಳಿಗೆ ಹೋಗಿ ಅಲ್ಲಿ ಕೃಷಿ ಮುಗಿಸಿ ವಾಪಸ್ ಆಗುವ ವೇಳೆ ಪಲ್ಸರ್ ಬೈಕ್ ನಲ್ಲಿ ಬಂದ ಮೂರು ಮಂದಿ ವಿಳಾಸ ಕೇಳುವ ನೆಪದಲ್ಲಿ ಬೈಕ್ ಅಡ್ಡಗಟ್ಟಿದ್ದಾರೆ.
ನಂತರ ಕೃಷ್ಙೇಗೌಡರ ಕೊರಳಿಗೆ ಲಾಂಗ್ ಇಟ್ಟು, ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ಕೃಷ್ಣೇಗೌಡ ತಮ್ಮ ಬಳಿ ಹಣವಿಲ್ಲ, ಕೃಷಿ ಕೆಲಸ ಮುಗಿಸಿ ಬರುತ್ತಿದ್ದೇನೆ ಎಂದು ಹೇಳಿದ್ದಾರೆ.
ಆಗಿದ್ದರೇ ನಿಮ್ಮ ಪತ್ನಿಯ ಕೊರಳಲ್ಲಿನ ಮಾಂಗಲ್ಯ ಸರವನ್ನು ತೆಗೆದುಕೊಡುವಂತೆ ಕೇಳಿದ್ದಾರೆ. ಇದಕ್ಕೆ ಕೃಷ್ಣೇಗೌಡರ ಪತ್ನಿ ಶೃತಿ ಒಪ್ಪದಿದ್ದಾಗ ಕೊರಳಿಗೆ ಕೈ ಹಾಕಿ ಮಂಗಲ್ಯ ಸರ ಕಸಿಯುವ ವೇಳೆ ಸರ ತುಂಡಾಗಿ ಒಂದು ಭಾಗ ದರೋಡೆಕೋರರಿಗೂ ಮತ್ತೊಂದು ಭಾಗ ಶೃತಿ ಕೈಯಲ್ಲಿ ಉಳಿದಿದೆ. ಈ ವೇಳೆ ಯಾರೋ ಬರುತ್ತಿರುವುದನ್ನು ಗಮನಿ ದರೋಡೆಕೋರರು ಪರಾರಿಯಾಗಿದ್ದಾರೆ.
ಈ ಬಗ್ಗೆ ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




