ರಾಮನಗರ

ಶಿಥಿಲಗೊಂಡ ಛಾವಣಿ; ಕುಸಿದುಬೀಳುವ ಸ್ಥಿತಿಯಲ್ಲಿದೆ ಶಾಲೆ

ರಾಮನಗರ: ಚನ್ನಪಟ್ಟಣ ತಾಲೂಕಿನ ಕೂಡ್ಲೂರು ಪ್ರಾಥಮಿಕ ಶಾಲೆಯು ಶಿಥಿಲಾವಸ್ಥೆ ತಲುಪಿದ್ದು, ಮಾಳಿಗೆ ಸೋರುತ್ತಿದ್ದು, ಯಾವ ಕ್ಷಣದಲ್ಲಾದರೂ ಕುಸಿದು ಬೀಳುವ ಹಂತ ತಲುಪಿದೆ.

ಚನ್ನಪಟ್ಟಣ ತಾಲೂಕಿನ ಕೂಡ್ಲೂರು ದೊಡ್ಡ ಗ್ರಾಮವಾಗಿದ್ದು, ಪುರಾತನ ಹಾಗೂ ಐತಿಹಾಸಿಕ ಹಿನ್ನಲೆಯಿದೆ. ಆದರೆ ಇಲ್ಲಿನ ಸರಕಾರಿ ಪ್ರಾಥಮಿಕ ಶಾಲೆ ಸಂಪೂರ್ಣ ಶಿಥಿಲಗೊಂಡಿದ್ದು, ಶಾಲೆ ಆರಂಭಗೊಂಡರೆ ಮಕ್ಕಳು ಕುಳಿತು ಪಾಠ ಕೇಳುವುದು ಹೇಗೆ ಎಂಬ ಭಯ ಮತ್ತು ಆತಂಕ ಪೋಷಕರಲ್ಲಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ಮಾಡಿದ್ದರೂ ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಲಿಲ್ಲ. ಇದರಿಂದ ಪೋಷಕರು ಮಕ್ಕಳನ್ನು ಭಯದಿಂದ ಶಾಲೆಗೆ ಕಳಿಸುವಂತಾಗಿದೆ.

ಸುಮಾರು 60 ವರ್ಷದ ಸೀಮೆ ಹೆಂಚಿನ ಕಟ್ಟಡವಾಗಿದ್ದು, ಗೋಡೆ ಜಖಂ ಆಗಿ ಕುಸಿದು ಬೀಳುವ ಹಂತ ತಲುಪಿದೆ. ಮೇಲ್ಛಾವಣಿಗೆ ಅಳವಡಿಸಲಾಗಿದ್ದ ಮರಗಳು ಸಂಪೂರ್ಣ ಹಾಳಾಗಿವೆ. ಹೆಂಚುಗಳು ಮಳೆಗಾಳಿಗೆ ಹಾರಿ ಹೋಗಿದ್ದು, ಬಿಸಿಲು ಮಳೆಯಲ್ಲಿ ಪಾಠ ಕೇಳುವ ಪರಿಸ್ಥಿತಿ ಎದುರಾಗಿದೆ. ಶಾಲೆ ಹರುಕು ಜಂತಿ, ಮುರುಕು ತೊಲೆಗಳಿಂದ ಕೂಡಿದೆ. ಅರ್ಧಕ್ಕರ್ಧ ಹೆಂಚು ಇಲ್ಲವಾಗಿದೆ. ಶಾಲೆಯ ಗೋಡೆ ಬಿರುಕು ಬಿಟ್ಟುದ್ದು, ಬೇರೆ ಕೊಠಡಿ ಇಲ್ಲದ ಪರಿಣಾಮ ಶಿಥಿಲಗೊಂಡಿರುವ ಕೊಠಡಿಯಲ್ಲೇ ಶಿಕ್ಷಕರು ಕೆಲಸ ಮಾಡಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ. ಸಂಬಂಧಿಸಿದವರು ಈ ಬಗ್ಗೆ ಗಮನಹರಿಸುತ್ತಿಲ್ಲ.

ಒಂದರಿಂದ ಏಳನೇ ತರಗತಿವರೆಗೆ ಇರುವ ಶಾಲೆಗೆ ಕೂಡ್ಲೂರುಲ್ಲದೆ ಅಕ್ಕಪಕ್ಕದ ಗ್ರಾಮದ ವಿದ್ಯಾರ್ಥಿಗಳು ಬರುವ ಕಾರಣ ಸಂಖ್ಯೆ ೧೬೦ಕ್ಕೂ ಹೆಚ್ಚು. ಆದರೆ ವಿದ್ಯಾರ್ಥಿಗಳು ಜೀವ ಅಂಗೈಯಲ್ಲಿಡಿದು ಪಾಠ ಕೇಳುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕಳೆದ ಎರಡು ವರ್ಷಗಳಲ್ಲಿ ಇಲ್ಲಿನ ಅವ್ಯವಸ್ಥೆ ಬಗ್ಗೆ ಸಂಬಂಧಿಸಿದ ಶಾಸಕ ಹೆಚ್.ಡಿ. ಕುಮಾರಸ್ವಾಮಿ ಸ್ಥಳಕ್ಕೆ ಬಂದು ನೋಡಿ ಹೋಗಿದ್ದಾರೆ. ಜತೆಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಮಸ್ಯೆ ಬಗ್ಗೆ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸರಕಾರಿ ಶಾಲೆಗೆ ಸೌಕರ್ಯವಿಲ್ಲದ ಕಾರಣ ಪೋಷಕರು ಮೂಗು ಮುರಿಯುತ್ತಿದ್ದಾರೆ. ಇಂತಹ ದುಃಸ್ಥಿತಿಯಲ್ಲಿರುವ ಶಾಲೆಗೆ ಯಾರು ಮಕ್ಕಳನ್ನು ಕಳುಹಿಸುತ್ತಾರೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಹೊಸ ಕೊಠಡಿ ನಿರ್ಮಿಸಲು ಶಿಕ್ಷಣ ಇಲಾಖೆ ಮೀನಮೇಷ ಎಣಿಸುತ್ತಿರುವುದು ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು ಇನ್ನಾದರೂ ಇತ್ತ ಗಮನ ಹರಿಸಲಿ ಎಂದು ಆಗ್ರಹಿಸಿದ್ದಾರೆ.

ಅವ್ಯವಸ್ಥೆ ಸರಿಪಡಿಸುವ ಹಿನ್ನೆಲೆಯಲ್ಲಿ ತಾಪಂ ಮಾಜಿ ಸದಸ್ಯ ಕೂಡ್ಲೂರು ವೆಂಕಟೇಶ್ ಪ್ರಯತ್ನದ ಹಿನ್ನೆಲೆಯಲ್ಲಿ ಟಯೋಟಾ ಕಿರ್ಲೋಸ್ಕಾರ್ ಸಂಸ್ಥೆ ತನ್ನ ಸಿಎಸ್‌ಆರ್ ನಿಧಿಯಲ್ಲಿ ದುರಸ್ಥಿ ಮಾಡುವ ಪ್ರಕ್ರಿಯೆ ಆರಂಭಿಸಿತ್ತು. ಸಂಸ್ಥೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದರು. ಆದರೆ ಮತ್ತೆ ಸುಮ್ಮನಾಗಿದ್ದಾರೆ. ಕನಿಷ್ಟ ೬ ಕೊಠಡಿ ನಿರ್ಮಿಸಿದಲ್ಲಿ ಶಾಲಾಮಕ್ಕಳು ನೆಮ್ಮದಿಯಿಂದ ಕುಳಿತು ಪಾಠ ಕೇಳಬಹುದಾಗಿದೆ. ಸಂಬಂಧಿಸಿದ ಅಧಿಕಾರಿಗಳು ಚುನಾಯಿತ ಪ್ರತಿನಿಧಿಗಳು ಇತ್ತ ಗಮನಹರಿಸಲಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಶಾಲೆಯ ಆವರಣದಲ್ಲಿ ಹಳೆಯದಾದ ಓವರ್ ಹೆಡ್ ಟ್ಯಾಂಕ್ ಇದ್ದು, ಅದು ಕೂಡ ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ. ಟ್ಯಾಂಕಿನ ಕಾಂಕ್ರೀಟ್ ಕಿತ್ತು ಬೀಳುತ್ತಿದ್ದು, ನೀರು ಸೋರುತ್ತಿದೆ. ಶಾಲಾ ಮಕ್ಕಳು ಅದರ ಕೆಳಗೆ ಆಟವಾಡುತಿರುತ್ತಾರೆ. ಟ್ಯಾಂಕ್ ಯಾವಾಗ ಬೀಳುತ್ತದೆ ಎಂಬ ಆತಂಕ ಮಕ್ಕಳಲ್ಲಿ, ಶಾಲಾ ಶಿಕ್ಷಕರು, ಪೋಷಕರು ಹಾಗೂ ಗ್ರಾಮಸ್ಥರಲ್ಲಿ ಮನೆಮಾಡಿದೆ. ಕೂಡ್ಲೂರು ಗ್ರಾ.ಪಂ. ಅಧಿಕಾರಿಗಳು ಹಾಗೂ ಚುನಾಯಿತ ಸದಸ್ಯರು ಆತಂಕ ದೂರ ಮಾಡಿ ಮಕ್ಕಳ ಭವಿಷ್ಯ ರೂಪಿಸಬೇಕಾಗಿದ್ದು, ಆದಷ್ಟು ಬೇಗ ಹೊಸ ಕಟ್ಟಡ ನಿರ್ಮಿಸಿ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಶಾಲೆಯ ಅವ್ಯವಸ್ಥೆ ಬಗ್ಗೆ ಬಿಇಓ, ಡಿಡಿಪಿಓ, ಶಾಸಕರು ಹಾಗೂ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿನ ಮಕ್ಕಳು ಮತ್ತು ಶಿಕ್ಷಕರು ಭಯದಿಂದ ದಿನಕಳೆಯುತ್ತಿದ್ದಾರೆ. ಮುರಿದ ಹೆಂಚು, ಶೀತಲಗೊಂಡಿರುವ ಕೊಠಡಿಗಳಲ್ಲಿ ಮಕ್ಕಳಿಗೆ ಕಲಿಸುವುದಾದರೂ ಹೇಗೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದು, ಇದರ ಬಗ್ಗೆ ಸಂಬಂಧಪಟ್ಟವರು ಸೂಕ್ತ ಕ್ರಮಕೈಗೊಂಡು ಸರಕಾರಿ ಶಾಲೆ ಉಳಿಸಬೇಕಾಗಿದೆ ಎನ್ನುತ್ತಾರೆ ಜಿ.ವೆಂಕಟೇಶ್, ತಾ.ಪಂ. ಮಾಜಿ ಸದಸ್ಯ.

Spread the love

Related Articles

Leave a Reply

Your email address will not be published. Required fields are marked *

Back to top button