ಮೇಕೆದಾಟು ಯೋಜನೆ; ಕೇಂದ್ರದ ನಿಲುವಿಗೆ ಎಚ್ಡಿಕೆ ಖಂಡನೆ

ರಾಮನಗರ: ಬಯಲುಸೀಮೆ ಜಿಲ್ಲೆಗಳ ಕುಡಿಯುವ ನೀರಿನ ಬವಣೆಯನ್ನು ನೀಗಿಸುವ ಮಹತ್ವಾಕಾಂಕ್ಷೆಯ ಮೇಕೆದಾಟು ಯೋಜನೆಯ ಬಗ್ಗೆ ಕೇಂದ್ರ ಸರ್ಕಾರ ತಳೆದಿರುವ ಧೋರಣೆಯನ್ನು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಖಂಡಿಸಿದರು.
ಬಿಡದಿಯ ಕೇತಗಾನಹಳ್ಳಿಯ ತೋಟದ ಮನೆಯ ಬಳಿ ಮಾಧ್ಯಮಗಳ ಜೊತೆ ಕುಮಾರಸ್ವಾಮಿ ಮಾತನಾಡಿ, ನಾವು ಈಗಾಗಲೇ ರಾಜ್ಯಪಾಲರನ್ನು ಭೇಟಿ ಮಾಡಿ ಮೇಕೆದಾಟು ಯೋಜನೆಗೆ ಒತ್ತಾಯಿಸಿ ಮನವಿ ಸಲ್ಲಿಸಿದ್ದೇವೆ ಎಂದರು. ನಮ್ಮ ಪಕ್ಷದ ಸಂಸದ ಪ್ರಜ್ವಲ್ ರೇವಣ್ಣ ಸದನದಲ್ಲಿ ಮೇಕೆದಾಟು ಯೋಜನೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಕೇಂದ್ರದ ಮಂತ್ರಿಗಳು ಮೇಕೆದಾಟು ಯೋಜನೆಗೆ ನಾವು ಯಾವುದೇ ರೀತಿಯ ಒಪ್ಪಿಗೆ ನೀಡಿಲ್ಲ ಎಂದಿದ್ದಾರೆ. ಯೋಜನೆಗೆ ಕೇಂದ್ರ ಸರ್ಕಾರದ ಒಪ್ಪಿಗೆ ಪಡೆಯಬೇಕು ಎಂದು ಉತ್ತರ ನೀಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.
ಮೇಕೆದಾಟು ಯೋಜನೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಒಪ್ಪಿಗೆ ಬೇಕು ಎನ್ನುವ ಕೇಂದ್ರದ ಮಂತ್ರಿಗಳ ಹೇಳಿಕೆ ರಾಷ್ಟ್ರೀಯ ಪಕ್ಷಗಳ ಧೋರಣೆಯನ್ನು ಸ್ಪಷ್ಟಪಡಿಸಿದೆ. ರಾಷ್ಟ್ರೀಯ ಪಕ್ಷಗಳ ನಡುವಳಿಕೆಯನ್ನು ರಾಜ್ಯದ ಜನ ಅರ್ಥ ಮಾಡಿಕೊಳ್ಳಬೇಕಿದೆ. ಕರ್ನಾಟಕವನ್ನ ರಾಷ್ಟ್ರೀಯ ಪಕ್ಷಗಳು ಲಘುವಾಗಿ ಕಾಣುತ್ತಾ ಬಂದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರದಲ್ಲಿ ಆಡಳಿತ ನಡೆಸುವ ರಾಷ್ಟ್ರೀಯ ಪಕ್ಷಗಳು ಕರ್ನಾಟಕದ ವಿಚಾರದಲ್ಲಿ ತುಂಬಾ ಲಘುವಾಗಿ ನಡೆದುಕೊಳುತ್ತವೆ. ಕಾಂಗ್ರೆಸ್ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಮಯದಲ್ಲಿ ಬೆಂಗಳೂರಿಗೆ ಕುಡಿಯುವ ನೀರು ಬಳಕೆಗೆ 9 ಟಿಎಂಸಿ ನೀರು ಬಳಕೆಗೆ ಕಾಂಗ್ರೆಸ್ ಒಪ್ಪಿಗೆ ನೀಡಲಿಲ್ಲ. ನಂತರ ದೇವೇಗೌಡರು ಪ್ರಧಾನಿಗಳಾದ ಹತ್ತು ತಿಂಗಳ ಅಧಿಕಾರವಧಿಯಲ್ಲಿ ನೀರು ಬಳಕೆಗೆ ಒಪ್ಪಿಗೆ ನೀಡಿದ್ದು ಎಂದು ರಾಷ್ಟ್ರೀಯ ಪಕ್ಷಗಳ ಧೋರಣೆ ಖಂಡಿಸಿದರು.
ಜಮೀರ್ ಅಹಮ್ಮದ್ ಖಾನ್ ವಿರುದ್ಧ ಇಡಿಗೆ ನಾನು ದೂರು ಕೊಟ್ಟಿಲ್ಲ. ಇಡಿಗೆ ಯಾರು ದೂರು ನೀಡಿದ್ದಾರೆಂದು ನನಗೆ ಗೊತ್ತಿಲ್ಲ, ನಾನಂತೂ ಯಾರ ಬಗ್ಗೆಯೂ ದೂರು ನೀಡಿಲ್ಲ. ಅವರ ಬಗ್ಗೆ ಯಾರು ದೂರು ಕೊಟ್ಟಿದ್ದಾರೋ ಅವರೇ ಸಮರ್ಥವಾಗಿ ಉತ್ತರ ಕೊಡಬೇಕು ಎಂದು ತಿಳಿಸಿದರು.
