ಸತ್ತೇಗಾಲ ನೀರಾವರಿ ಯೊಜನೆ 2022ರ ಅಂತ್ಯದೊಳಗೆ ಪೂರ್ಣ: ಎಚ್ಡಿಕೆ

ರಾಮನಗರ: ರಾಮನಗರ ಜಿಲ್ಲೆಯನ್ನು ಸಂಪೂರ್ಣ ನೀರಾವರಿಯನ್ನಾಗಿಸುವ ಮಹತ್ವಾಕಾಂಕ್ಷೆಯಿಂದ ಸುಮಾರು 540 ಕೋಟಿರೂ. ವೆಚ್ಚದಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರೂಪಿಸಿದ್ದ ಸತ್ತೇಗಾಲ ನೀರಾವರಿ ಯೋಜನೆ ೨೦೨೨ರ ಡಿಸೆಂಬರ್ ಅಂತ್ಯದ ವೇಳೆಗೆ ಮುಕ್ತಾಯಗೊಳ್ಳಲಿದೆ, ಯೋಜನೆಗೆ ಎದುರಾಗಿದ್ದ ಎಲ್ಲ ಅಡೆತಡೆಗಳನ್ನು ನಿವಾರಿಸಲಾಗಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ತಾಲೂಕಿನ ಇಗ್ಗಲೂರು ಎಚ್.ಡಿ.ದೇವೇಗೌಡ ಬ್ಯಾರೇಜ್ ಹಾಗೂ ಕಣ್ವ ಜಲಾಶಯದ ಬಳಿ ಕಾಮಗಾರಿ ಪರಿಶೀಲನೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯೋಜನೆ ಪೂರ್ಣಗೊಳಿಸಲು ಹಣಕಾಸಿನ ತೊಂದರೆ ಯಿಲ್ಲ, ಮುಖ್ಯಮಂತ್ರಿಯಾಗಿದ್ದಾಗಲೇ ಆಡಳಿತಾತ್ಮಕ ಅನುಮೋದನೆ ನೀಡಿ, ಹಣವನ್ನೂ ಬಿಡುಗಡೆ ಗೊಳಿಸಲಾಗಿದೆ. ಮದ್ದೂರು ಹಾಗೂ ಮಳವಳ್ಳಿ ಭಾಗದ ರೈತರಿಗೆ ಇದ್ದ ಕೆಲವು ಗೊಂದಲಗಳಿಂದ ಆ ಭಾಗದಲ್ಲಿ ಯೋಜನೆ ಕುಂಠಿತಗೊಂಡಿತ್ತು. ಇದೀಗ ರೈತರು ಹಾಗೂ ಅಲ್ಲಿನ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ, ಅವರಿಗೂ ಅನುಕೂಲವಾಗುತ್ತದೆ ಎಂಬುದನ್ನು ಮನದಟ್ಟು ಮಾಡಿಕೊಡಲಾಗಿದೆ ಹಾಗಾಗಿ ಯೋಜನೆಗೆ ಯಾವುದೇ ಅಡ್ಡಿಯಾಗದು ಎಂದು ಹೇಳಿದರು.
ರಾಮನಗರ ಜಿಲ್ಲೆಯ ಪ್ರತಿ ಮನೆಗಳಿಗೆ ನೀರು ಒದಗಿಸುವುದರ ಜತೆಗೆ ಕೆರೆಗಳನ್ನು ತುಂಬಿಸುವ ಯೋಜನೆ ಇದಾಗಿದೆ, ಸತ್ತೇಗಾಲದ ಬಳಿ ಕಾವೇರಿ ನದಿಯಿಂದ ಇಗ್ಗಲೂರು ಎಚ್.ಡಿ.ದೇವೇಗೌಡ ಬ್ಯಾರೇಜಿಗೆ ಗುರುತ್ವಾಕರ್ಷಣ ಶಕ್ತಿಯ ಮೂಲಕ ಪೈಪ್‌ಲೈನ್‌ನಿಂದ ನೀರು ಹರಿಸಲಾಗುವುದು ಅಲ್ಲಿಂದ ಕಣ್ವ ಜಲಾಶಯಕ್ಕೆ ನೀರೆತ್ತಿ, ಕಣ್ವ ಜಲಾಶಯದಿಂದ ಮಂಚನಬೆಲೆ ಹಾಗೂ ವೈ.ಜಿ.ಗುಡ್ಡ ಕೆರೆಗಳಿಗೆ ತುಂಬಿಸಲಾಗುತ್ತದೆ.
ಹೈಟೆಕ್ ಮಾರುಕಟ್ಟೆ, ಸಂಸ್ಕರಣಾ ಘಟಕಕ್ಕೆ ಶೀಘ್ರ ಚಾಲನೆ:
ಚನ್ನಪಟ್ಟಣದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ಹಾಗೂ ಮಾವು ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಸಂಬಂಧಪಟ್ಟಂತೆ ಡಿಸಿಎಂ ನೇತೃತ್ವದ ಸಭೆಯಲ್ಲಿ ಡಿಪಿಆರ್ ಸಿದ್ದಪಡಿಸಲು ಹಾಗೂ ಶೀಘ್ರದಲ್ಲೇ ಟೆಂಡರ್ ಆಹ್ವಾನಿಸಲು ನಿರ್ಧರಿಸಲಾಯಿತು.
ಹೈಟೆಕ್ ರೇಷ್ಮೆ ಮಾರುಕಟ್ಟೆ ಕೇವಲ ರಾಜ್ಯದಲ್ಲಿ ಮಾತ್ರವಲ್ಲ, ದಕ್ಷಿಣ ಭಾರತದಲ್ಲೇ ಅತ್ಯಾಧುನಿಕ ರೀತಿಯಲ್ಲಿ ನಿರ್ಮಾಣವಾಗಲಿದೆ, ಸುಮಾರು ೭೫ ಕೋಟಿರೂ. ವೆಚ್ಚದಲ್ಲಿ ಮಾರುಕಟ್ಟೆ ನಿರ್ಮಾಣವಾಗಲಿದ್ದು, ರಾಮನಗರ ಜಿಲ್ಲೆಗೆ ಕಳಶಪ್ರಾಯವಾಗಲಿದೆ. ರೈತರಿಗೆ, ರೀಲರ್‌ಗಳಿಗೆ ಎಲ್ಲ ಅನುಕೂಲಗಳನ್ನು ಒಳಗೊಂಡಿರಲಿದೆ ಎಂದರು.ಕೆಲವರು ರಾಮನಗರದಿಂದ ಚನ್ನಪಟ್ಟಣಕ್ಕೆ ಮಾರುಕಟ್ಟೆ ಸ್ಥಳಾಂತರಿಸುತ್ತಿದ್ದಾರೆಂದು ವಿರೋಧಿಸು ತ್ತಿದ್ದಾರೆ, ಚನ್ನಪಟ್ಟಣ ರಾಮನಗರ ಜಿಲ್ಲೆಯಲ್ಲಿಲ್ಲವೇ, ಯೋಜನೆಗೆ ಹದಿನೈದು ಎಕರೆ ಜಾಗ ಅವಶ್ಯವಿದ್ದುದರಿಂದ ಚನ್ನಪಟ್ಟಣದಲ್ಲಿ ಲಭ್ಯವಿರುವ ಜಾಗ ಬಳಸಿಕೊಳ್ಳಲು ತೀರ್ಮಾನವಾಗಿದೆ. ಅದನ್ನು ಬಿಟ್ಟು ಬೇರೆ ಉದ್ದೇಶವಿಲ್ಲ ಎಂದು ಎಚ್ಡಿಕೆ ಸಮರ್ಥಿಸಿಕೊಂಡರು.
ಇದರ ಜತೆಗೆ ಭೈರಾಪಟ್ಟಣದ ಬಳಿಯ ತೋಟಗಾರಿಕಾ ಫಾರಂನ 15 ಎಕರೆ ಜಾಗದಲ್ಲಿ ಹಣ್ಣುಗಳ ಸಂಸ್ಕರಣೆ ಅದರಲ್ಲೂ ಮಾವು ಸಂಸ್ಕರಣ ಘಟಕವನ್ನು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಅನುಷ್ಟಾನಗೊಳಿಸಲಾಗುತ್ತಿದೆ. ಇದೂ ಸಹ 10 ಕೋಟಿರೂ. ವೆಚ್ಚದಲ್ಲಿ ಅನುಷ್ಟಾನವಾಗಲಿದೆ, ಈ ಸಂಬಂಧ ಕೇಂದ್ರ ಸರ್ಕಾರದ ಜತೆಗೆ ಅವಶ್ಯವಿರುವ ಅನುಮೋದನೆಗಾಗಿ ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.
ಚಂಚನಬೆಲೆ ಜಲಾಶಯದ ಬಳಿ ಸುಮಾರು ೧೫೦ ಕೋಟಿರೂ. ವೆಚ್ಚದಲ್ಲಿ ವಾಟರ್ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣ ಮಾಡಲು ಮುಖ್ಯಮಂತ್ರಿಯಾಗಿದ್ದಲೇ ಅನುಮೋದನೆ ಕೊಟ್ಟಿದ್ದೆ. ಆದರೆ ಬಿಜೆಪಿ ಸರ್ಕಾರದಲ್ಲಿ ಅದನ್ನು ಡೈವರ್ಟ್ ಮಾಡಲಾಗಿದೆ ಎಂದು ಎಚ್ಡಿಕೆ ಆರೋಪಿಸಿದರು. ದೊಡ್ಡ ಯೋಜನೆ ಬಿಟ್ಟು ಇದೀಗ ಅಲ್ಲಿ ಪ್ರವಾಸೋದ್ಯಮ ಸಚಿವರು ಜಂಗಲ್ ಲಾಡ್ಜ್ ನಿರ್ಮಿಸಲು 10 ಎಕರೆ ಕೇಳಿದ್ದಾರೆ, ಸುತ್ತಮುತ್ತಲ ಸುಮಾರು 5000 ಕುಟುಂಬಗಳಿಗೆ ಉದ್ಯೋಗ ಒದಗಿಸುವ ಗುರಿ ನಮ್ಮದಾಗಿತ್ತು, ಕೆಆರ್‌ಎಸ್ ಬಳಿಯೂ ಡಿಸ್ನಿ ಲ್ಯಾಂಡ್ ಮಾದರಿಯಲ್ಲಿ ಅಭಿವೃದ್ದಿಪಡಿಸಲು ಯೋಜಿಸಲಾಗಿತ್ತು ಸುಮಾರು 50 ಸಾವಿರ ಮಂದಿಗೆ ಉದ್ಯೋಗ ರೂಪಿಸುವ ದೊಡ್ಡ ಮಟ್ಟದ ಯೋಜನೆಯನ್ನೂ ಡೈವರ‍್ಟ್ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಡೈವರ್ಟ್ ಮಾಡಿರುವ ಯೋಜನೆಗಳನ್ನು ಸಾಕಾರಗೊಳಿಸಲು ತಮ್ಮದೇ ಆದ ರೀತಿಯಲ್ಲಿ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ಸಂದರ್ಭದಲ್ಲಿ ರಾಮನಗರ ಶಾಸಕಿ ಅನಿತಾ, ಮಾಗಡಿ ಶಾಸಕ ಎ.ಮಂಜುನಾಥ್, ಹಾಗೂ ತಾಲೂಕು ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.




