ರಾಮನಗರ ವಿಧಾನಸಭಾ ಕ್ಷೇತ್ರ; ಕಾಂಗ್ರೆಸ್ನಲ್ಲಿ ಬಣ ರಾಜಕೀಯ
ರಾಮನಗರ: ರಾಮನಗರ ಕ್ಷೇತ್ರ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಜೆಡಿಎಸ್ ಹಿನ್ನೆಡೆ ಅನುಭವಿಸಿದ ನಂತರ ನಿಧಾನವಾಗಿ ಬಲಿಷ್ಠಗೊಳ್ಳುತ್ತಿರುವ ಕಾಂಗ್ರೆಸ್ ಪಕ್ಷದಲ್ಲೀಗ ಬಣ ರಾಜಕೀಯ ಪ್ರಾರಂಭಗೊಂಡಿದೆ.
ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರಕ್ಕೆ ಸೈಯದ್ ಜಿಯಾವುಲ್ಲಾ ಕಾಂಗ್ರೆಸ್ ಅಭ್ಯರ್ಥಿ ಆಗಬೇಕೆಂದು ನೀಡಿದ ಹೇಳಿಕೆ ಕೈ ಪಾಳಯದಲ್ಲಿ ಇದುವರೆಗೂ ತಣ್ಣಗಾಗಿದ್ದ ಗುಂಪುಗಾರಿಕೆಗೆ ಜೀವ ತುಂಬಿದಂತಾಗಿದೆ. ಕಾಂಗ್ರೆಸ್ ನಲ್ಲಿ ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್ ಅವರಿಗೆ ವಿರುದ್ಧವಾಗಿ ಮಿತ್ರ ಮಂಡಳಿಯೊಂದು ರಚನೆಗೊಂಡಿದೆ. ಆ ಮಂಡಳಿಯಲ್ಲಿನ ಹಿರಿಯ ನಾಯಕರು ತೆರೆಮರೆಯಲ್ಲಿ ನಿಂತು ಇಕ್ಬಾಲ್ ವಿರುದ್ಧ ಸಮರ ಸಾರಿದ್ದಾರೆ. ಇದಕ್ಕಾಗಿ ಆ ನಾಯಕರು ತಮ್ಮ ಬೆಂಬಲಿಗರನ್ನೇ ಅಸ್ತ್ರವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಈ ಮೊದಲು ಕ್ಷೇತ್ರದ ಮುಸ್ಲಿಂ ಸಮುದಾಯದ ಮೇಲೆ ಜಿಯಾವುಲ್ಲಾ ಹಿಡಿತ ಹೊಂದಿದ್ದರು. ಇದೀಗ ಮುಸ್ಲಿಂ ಸಮುದಾಯ ಮಾತ್ರವಲ್ಲದೆ ಅನ್ಯ ವರ್ಗದ ಜನರು ಸಹ ಇಕ್ಬಾಲ್ ನಾಯಕತ್ವ ಒಪ್ಪಿಕೊಳ್ಳುತ್ತಿದ್ದಾರೆ. ಇದರಿಂದ ವಿಚಲಿತಗೊಂಡಿರುವ ಮಿತ್ರಮಂಡಳಿ ಜಿಯಾವುಲ್ಲಾ ಅವರನ್ನು ಇಕ್ಬಾಲ್ ವಿರುದ್ಧ ಎತ್ತಿಕಟ್ಟುವ ಪ್ರಯತ್ನಕ್ಕೆ ಕೈಹಾಕಿದೆ ಎನ್ನಲಾಗುತ್ತಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿಗೆ ಎದುರಾಳಿಯಾಗಿದ್ದ ಇಕ್ಬಾಲ್ ಹುಸೇನ್ ಸಾಕಷ್ಟು ಪೈಪೋಟಿ ನೀಡಿದ್ದರು. ಆನಂತರ ಕುಮಾರಸ್ವಾಮಿ ರಾಜೀನಾಮೆಯಿಂದಾಗಿ ನಡೆದ ರಾಮನಗರ ಕ್ಷೇತ್ರ ಉಪಚುನಾವಣೆಯಲ್ಲಿ ಮೈತ್ರಿ ಧರ್ಮ ಪಾಲನೆಯ ಹೆಸರಿನಲ್ಲಿ ಇಕ್ಬಾಲ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲು ನಿರಾಕರಿಸಲಾಯಿತು.
ಆಗ ವರಿಷ್ಠರ ಆದೇಶದಂತೆ ಇಕ್ಬಾಲ್ ಹುಸೇನ್ ಒಲ್ಲದ ಮನಸ್ಸಿನಿಂದಲೇ ಜೆಡಿಎಸ್ ಅಭ್ಯರ್ಥಿ ಅನಿತಾ ಪರ ಪ್ರಚಾರ ನಡೆಸಿ ಗೆಲುವಿನ ದಡ ಸೇರಿಸಿದರು. ಚುನಾವಣೆಯಲ್ಲಿ ಸೋತರು ಹಾಗೂ ಟಿಕೆಟ್ ಸಿಗದಿದ್ದರು ಪಲಾಯನ ಮಾಡದೆ ಕ್ಷೇತ್ರದಲ್ಲಿಯೇ ಇದ್ದುಕೊಂಡು ಕೋವಿಡ್ ಸಮಯದಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸಿ ಜನಪ್ರತಿನಿಗಳಿಗೆ ಮಾದರಿ ಎನಿಸಿಕೊಂಡರು.
‘ರಾಮನಗರದ ಜನ ಸೇವಕ‘ ಎಂಬ ಹೆಸರಿನಲ್ಲಿ ಜನಪರ ಕಾರ್ಯಕ್ರಮಗಳ ಮೂಲಕ ಸಂಭವನೀಯ ಅಭ್ಯರ್ಥಿ ಇಕ್ಬಾಲ್ ಅವರ ಸಮಾಜ ಸೇವೆ ಮುಂದುವರೆದಿದೆ. ಕಾರ್ಯಕರ್ತರಲ್ಲಿ ಶಕ್ತಿ ತುಂಬುವ ಮೂಲಕ ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗುವ ಜತೆಗೆ ಮುಂಬರುವ ವಿಧಾನಸಭೆ ಚುನಾವಣೆಗೂ ಸಾಕಷ್ಟು ತಯಾರಿಗಳನ್ನು ಮಾಡಿಕೊಂಡಿದ್ದಾರೆ.
ಟಿಕೆಟ್ ತಪ್ಪಿಸಲು ಪ್ರಯತ್ನ:
ಕಳೆದ ಗ್ರಾಮ ಪಂಚಾಯಿತಿ ಚುನಾವಣೆ ಸಮಯದಲ್ಲಿಯೇ ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿ ಚರ್ಚೆ ಜೋರಾಗಿ ನಡೆದಿತ್ತು. ಆಗಲೇ ಸಂಸದ ಡಿ.ಕೆ.ಸುರೇಶ್ ರವರು ಇಕ್ಬಾಲ್ ಹುಸೇನ್ ಅವರನ್ನು ರಾಮನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂದು ಘೋಷಣೆ ಮಾಡಿ ಪಕ್ಷದೊಳಗಿನ ಭಿನ್ನಮತಿಯರ ಬಾಯಿ ಮುಚ್ಚಿಸಿದ್ದರು.
ಆ ಹುಮ್ಮಸ್ಸಿನಲ್ಲಿ ಇಕ್ಬಾಲ್ ರವರು ಗ್ರಾಪಂ, ನಗರಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಅಕ ಸ್ಥಾನಗಳಲ್ಲಿ ಗೆಲ್ಲುವಂತೆ ನೋಡಿಕೊಂಡರು. ಜತೆಗೆ ಪಕ್ಷದ ಕೆಲ ನಾಯಕರ ವಿರೋಧವನ್ನು ಕಟ್ಟಿಕೊಂಡರು. ಆ ನಾಯಕರ ಮಿತ್ರ ಮಂಡಳಿ ಇಕ್ಬಾಲ್ ಹುಸೇನ್ ಅವರಿಗೆ ಕಾಂಗ್ರೆಸ್ ಟಿಕೆಟ್ ತಪ್ಪಿಸಿ ಗಂಟು ಮೂಟೆ ಕಟ್ಟಿಸಲು ತಂತ್ರಗಾರಿಕೆ ಹೆಣೆಯುತ್ತಿದೆ.
.
ಗ್ರಾಪಂ ಮತ್ತು ನಗರಸಭೆ ಚುನಾವಣೆಯಲ್ಲಿ ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡದಿರುವುದು. ಪಕ್ಷದ ಅಕೃತ ಅಭ್ಯರ್ಥಿಯನ್ನೇ ಮಣಿಸಲು ಎದುರಾಳಿಗಳಿಗೆ ಆರ್ಥಿಕ ಸಹಾಯ ಮಾಡಿದ್ದು ಹಾಗೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಾಲ್ಕೈದು ಮಂದಿಯ ಕೈಗೊಂಬೆಯಂತೆ ಇಕ್ಬಾಲ್ ವರ್ತಿಸುತ್ತಿರುವುದೇ ಮಿತ್ರ ಮಂಡಳಿ ರಚನೆಗೆ ಕಾರಣ ಎಂದು ಕಾಂಗ್ರೆಸ್ ನ ನಿಷ್ಠಾವಂತ ನಾಯಕರೊಬ್ಬರು ಹೇಳುತ್ತಾರೆ.




