ರಾಮನಗರ

ಚನ್ನಪಟ್ಟಣದಲ್ಲಿ ಆತಂಕ ಮೂಡಿಸಿದ್ದ ಚಿರತೆ ಸೆರೆ

ರಾಮನಗರ: ಚನ್ನಪಟ್ಟಣ ನಗರದ ಸಾಹುಕಾರ ಬೀದಿಯ, ಸೆಂಟ್‌ಮೈಕೇಲ್ ಶಾಲೆಯ ಪಕ್ಕದಲ್ಲಿ ಅವಿತು ಕುಳಿತಿದ್ದ ಹೆಣ್ಣು ಚಿರತೆಯನ್ನು ಶುಕ್ರವಾರ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಜಂಟಿ ಸತತ 5 ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ‌ ಸೆರೆಹಿಡಿದರು.

ಕಳೆದ ಮೂರು ದಿನಗಳ ಹಿಂದೆ ಎಂ.ಜಿ ರಸ್ತೆಯ ಮನೆಯೊಂದರ ಸಿಸಿ ಟಿವಿಯಲ್ಲಿ ಮುಂಜಾನೆ 4 ಗಂಟೆಯ ಸಮಯದಲ್ಲಿ ಈ ಚಿರತೆಯ ಓಡಾಡುತ್ತಿರುವುದು ಸೆರೆಯಾಗಿತ್ತು. ಈ ಸಂಬಂಧ ನಗರದ ನಾಗರಿಕರು ಆತಂಕಿಕ್ಕೀಡಾಗಿದ್ದರು. ಈಗ ತುಸು ಚಿರತೆ ಸೆರೆ ಹಿಡಿದಿದ್ದರಿಂದ ನೆಮ್ಮದಿ‌ ತಂದು‌ಕೊಂಡಿದ್ದಾರೆ.

ಇಂದು ಮುಂಜಾನೆ 7 ಗಂಟೆ ಸಮಯದಲ್ಲಿ ಅನೇಕ ಮಂದಿ ಈಶ್ವರ ದೇವಸ್ಥಾನದ ಹಿಂಭಾಗ ಚಿರತೆ ನಾಯಿ ಹಿಡಿಯುವುದನ್ನು ನೋಡಿದ್ದು, ಮತ್ತೆ ಚಿರತೆ ಇದೆ ಎಂಬುದು ಮುನ್ನೆಲೆಗೆ ಬಂದಿತ್ತು. ಇಷ್ಟು ದಿನ ಚಿರತೆ ಅಲ್ಲೇ ಇರಲಾರದು ಎನ್ನುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ಎಚ್ಚೆತ್ತುಕೊಂಡು 10 ಗಂಟೆಯ ವೇಳೆಗೆ ಪೊಲೀಸರ ಜೊತೆಗೂಡಿ ಕಾರ್ಯಾಚರಣೆಗೆ ಮುಂದಾದರು. ಇವರ ಜೊತೆಗೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಿಂದ ಇಬ್ಬರು ಅರವಳಿಕೆ ನೀಡುವ ತಜ್ಞ ವೈದ್ಯರು ಮತ್ತು ನಾಲ್ಕು ಶೂಟರ್‌ಗಳು ಬಂದಿದ್ದರು.

ನಗರಸಭೆಯು ಜೆಸಿಬಿ ಮೂಲಕ ಬೆಳೆದು ನಿಂತಿದ್ದ ಗಿಡಗಂಟಿಗಳನ್ನು ಸ್ವಚ್ಛ ಮಾಡುತ್ತಿದ್ದಂತೆ, ಸುತ್ತಲೂ ವೈದ್ಯರು, ಶೂಟರ್‌ಗಳು ಗನ್ ಹಿಡಿದು ನಿಂತಿದ್ದರು. ಅರಣ್ಯ ಇಲಾಖೆಯ ಸಿಬ್ಬಂದಿ ಬಲೆ ಬೀಸಿದ್ದು, ಮಧ್ಯೆ ಮಧ್ಯೆ ಪಟಾಕಿ ಸಿಡಿಸಿ ಚಿರತೆ ಪತ್ತೆ ಹಚ್ಚುವಲ್ಲಿ ನಿರತರಾದರು.

ಸುಮಾರು ಎರಡು ಗಂಟೆಗಳ ತರುವಾಯ ಚಿರತೆಯು ಪೊದೆಯಿಂದ ಹೊರಗೆ ಬಂದು, ಶಾಲೆಯ ಹಿಂಭಾಗದ ಸಂಪಿನೊಳಗೆ ಅವಿತುಕೊಂಡಿತು. ಮತ್ತೆ ಅರ್ಧಗಂಟೆಯ ನಂತರ ಹೊರಗೆ ಬಂದ ಚಿರತೆಗೆ ವೈದ್ಯರು, ಶೂಟ್ ಮಾಡುವ ಮೂಲಕ ಅರವಳಿಕೆ ಮದ್ದು ನೀಡಿದರು. ತದನಂತರ ಬಲೆಗೆ ಬಿದ್ದರೂ ತಪ್ಪಿಸಿಕೊಂಡು, ಮೊದಲಿನ ಪೊದೆಯ ಒಳಗೆ ಅವಿತುಕೊಂಡಿತು. ಈ ಮೊದಲೇ ಅರವಳಿಕೆ ಚುಚ್ಚು ಮದ್ದು ನೀಡಿದ್ದರಿಂದ ಪೊದೆಯಲ್ಲಿ ಹುಡುಕಿ, ಬಲೆ ಹಾಸುವ ಮೂಲಕ ಚಿರತೆಯನ್ನು ಸೆರೆ ಹಿಡಿದು, ಬೋನಿನೊಳಕ್ಕೆ ಬಿಟ್ಟು, ತೆಗೆದುಕೊಂಡು ಹೋಗಲಾಯಿತು.

ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ದಿನೇಶ್, ಪಶುವೈದ್ಯ ರಮೇಶ್, ನಗರ ವೃತ್ತ ನಿರೀಕ್ಷಕ ದಿವಾಕರ್, ಸಂಚಾರಿ ಪೊಲೀಸ್ ಉಪ ನಿರೀಕ್ಷಕ ಪ್ರಕಾಶ್, ಉಪ ನಿರೀಕ್ಷಕರುಗಳಾದ ಮಮತಾ, ಜೋಸೆಪ್, ನಂಜುಂಡಸ್ವಾಮಿ, ಪೌರಾಯುಕ್ತ ಶಿವನಂಕಾರಿಗೌಡ ಮುಂತಾದವರು ಪಾಲ್ಗೊಂಡಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button