ವೈದ್ಯರ ಕೆಲಸ ಸ್ಮರಣೆ

ರಾಮನಗರ : ಕರೊನಾ ಮೊದಲ ಅಲೆಗಿಂತ ಭೀಕರವಾಗಿ ಅಪ್ಪಳಿಸಿದ ಎರಡನೇ ಅಲೆಯಲ್ಲಿ ಆಸ್ಪತ್ರೆಗಳಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿ ನಡೆದುಕೊಂಡ ರೀತಿಗೆ ಎಲ್ಲರೂ ತಲೆಬಾಗಿ ನಮಿಸಬೇಕು ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಎಸ್. ಶಶಿಧರ್ ತಿಳಿಸಿದರು.
ನಗರದ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಗುರುವಾರ ನಡೆದ ವೈದ್ಯರ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಕರೋನ ಸೋಂಕಿತರ ದೊಡ್ಡ ಸಂಖ್ಯೆ, ತೀವ್ರ ಒತ್ತಡ, ಜೀವ ಉಳಿಸುವ ಹೋರಾಟ, ಸೌಲಭ್ಯಗಳ ಕೊರತೆ, ವಿಶ್ರಾಂತಿ ಇಲ್ಲದ ದುಡಿಮೆ ಹೀಗೆ ಸಾಲು ಸಾಲು ಸವಾಲುಗಳನ್ನು ಎದುರಿಸುತ್ತಾ ಕೊರೊನಾ ಎರಡನೇ ಅಲೆ ವಿರುದ್ಧ ಹೋರಾಟದಲ್ಲಿ ನಿರ್ಣಾಯಕ ಸಮರ ಸಾರಿದ್ದ ವೈದ್ಯರು, ಪ್ರತಿದಿನ ಸೋಂಕಿಗೆ ಒಳಗಾದವರಿಗಿಂತ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗುತ್ತಿರುವವರ ಸಂಖ್ಯೆ ಹೆಚ್ಚು ಇರುವುದಕ್ಕೆ ಕಾರಣ ವೈದ್ಯಲೋಕದ ಶ್ರಮ ಎಂದರು.
ಈ ನಡುವೆ ವೈದ್ಯರ ಮೇಲೆ ಹಲ್ಲೇ, ವಾಗ್ದಾಳಿ ಮೊದಲಾದ ಪ್ರಕರಣಗಳು ಜೀವ ರಕ್ಷಕರ ಮನಸ್ಸನ್ನು ನೋಯಿಸಿದೆ. ಆದರೂ ದೃತಿಗೆಡದೆ ಕರ್ತವ್ಯ ವಿಮುಖರಾಗದೆ ರೋಗಿಗಳ ಪ್ರಾಣ ಉಳಿಸಲು ಶ್ರಮ ವಹಿಸುತ್ತಿದ್ದಾರೆ ವೈದ್ಯರ ಸೇವೆ ಶ್ಲಾಘನೀಯ ಎಂದು ತಿಳಿಸಿದರು.
ನಾವೆಲ್ಲರೂ ನಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕಿದೆ, ರೋಗವನ್ನು ತಡೆಗಟ್ಟಲು ಹಲವಾರು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕಿದೆ ಮುಖ್ಯವಾಗಿ ಮಾಸ್ಕï ಧರಿಸುವುದು, ಲಸಿಕೆ ಪಡೆಯುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕೈಗಳನ್ನು ಶುಭ್ರವಾಗಿ ಇಟ್ಟುಕೊಳ್ಳುವುದು ಮತ್ತು ಸಾಧ್ಯವಾದಷ್ಟು ಜನಜಂಗುಳಿಯಿಂದ ದೂರವಿರಬೇಕು ಎಂದರು.
ಜನರಿಗೆ ಇದನ್ನು ಮನದಟ್ಟು ಮಾಡಿಕೊಟ್ಟು ಇವುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಹೇಳಬೇಕು. ಜಗತ್ತಿನಿಂದ ಕೋವಿಡ್-19 ಸೋಂಕು ಬೇಗ ತೊಲಗಲಿ ಎಂದು ನಾವೆಲ್ಲರೂ ಆಶಿಸೋಣ. ನಮ್ಮೆಲ್ಲರ ಜವಾಬ್ದಾರಿ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ವೈದ್ಯರಿಗೆ ಮತ್ತು ವೈದ್ಯಕೀಯ ಸಿಬ್ಬಂದಿಗೆ ಗೌರವ ಸಲ್ಲಿಸೋಣ ಎಂದರು. ವೈದ್ಯರಾದ ಡಾ. ಶಿವಸ್ವಾಮಿ, ಡಾ. ಅನಿಲ್ ಕುಮಾರ್, ಡಾ. ರಾಜು, ಡಾ. ಪ್ರಕಾಶ್, ಡಾ. ಸುಷ್ಮ, ಡಾ. ಉಮಾಮಹೇಶ್ವರಿ, ಡಾ. ಸುರೇಶ್, ಡಾ. ನದೀಂ, ಡಾ. ಮಮತಾ ಇದ್ದರು.




