ಶಾಲಾ ಮಕ್ಕಳಿಂದ ಕೋವಿಡ್ ಜಾಗೃತಿ ಜಾಥಾ ಕಾರ್ಯಕ್ರಮ

ರಾಮನಗರ: ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಎಸ್.ಬಿ.ಸಿ.ಸಿ ಘಟಕ ರಾಮನಗರ, ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಚಕ್ರಬಾವಿ, ಅಗಲಕೋಟೆ ಗ್ರಾಮ ಪಂಚಾಯಿತಿ, ಸರ್ಕಾರಿ ಶಾಲೆ ಹಾಗೂ ವಿವಿಧ್ ಎಂಟರ್ ಪ್ರೈಸಸ್ ಸ್ವಯಂ ಸೇವಾ ಸಂಸ್ಥೆ, ಇವರ ಸಂಯುಕ್ತ ಆಶ್ರಯದಲ್ಲಿ ಅಗಲಕೋಟೆ ಗ್ರಾಮದಲ್ಲಿ ಕೋವಿಡ್ ಲಸಿಕೆ ಮತ್ತು ಕೋವಿಡ್ ನಿಯಂತ್ರಣ, ಕುರಿತು ಅರಿವು ಮೂಡಿಸಲು ಜಾಗೃತಿ ಜಾಥಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ವೈದ್ಯಾಧಿಕಾರಿ ಡಾ. ಯದುಕುಮಾರ್ ಅವರು ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಮಾತನಾಡಿ ಈ ಗ್ರಾಮದಲ್ಲಿ ೫೦ ಮಂದಿ ಲಸಿಕೆ ಪಡೆಯಲು ಹಿಂಜರಿಯುತ್ತಿದ್ದ ಕಾರಣ ಎಲ್ಲರ ಸಹಕಾರದಿಂದ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಂಡು ಅರಿವು ಮೂಡಿಸಿ ಲಸಿಕೆ ನೀಡುವ ವಿಶೇಷವಾಗಿ ಲಸಿಕಾ ಶಿಬಿರವನ್ನು ಆಯೋಜಿಸಿದ್ದು ಇದರ ಪ್ರಯೋಜನವನ್ನು ಅರ್ಹ ಫಲಾನುಭವಿಗಳು ಕೋವಿಡ್ ಲಸಿಕೆ ಪಡೆಯುವಂತೆ ಸಲಹೆ ನೀಡಿದರು.
ಜಿಲ್ಲಾ ಎಸ್.ಬಿ.ಸಿ ಸಂಯೋಜಕ ಸುರೇಶ್ಬಾಬು ಅವರು ಮಾತನಾಡಿ ಕೋವಿಡ್ – 19ರ 3ನೇ ಅಲೆ ನಿಯಂತ್ರಿಸ ಬೇಕಾದರೆ 18ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ 2 ಡೋಸ್ ಲಸಿಕೆ ಪಡೆಯಬೇಕು ಇದರಿಂದ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ಒಮಿಕ್ರಾನ್ ಸೋಂಕನ್ನು ನಿಯಂತ್ರಿಸಲು ಸಾಧ್ಯ ಆದ್ದರಿಂದ ಯಾವುದೇ ಅಂಜಿಕೆ ಇಲ್ಲದೇ ಲಸಿಕೆ ಪಡೆಯುವಂತೆ ಸಲಹೆ ನೀಡಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್.ಗಂಗಾಧರ್ ಅವರು ಮಾತನಾಡಿ ಕೋವಿಡ್ ನಿಯಂತ್ರಿಸ ಬೇಕಾದರೆ ಸಾರ್ವಜನಿಕರು ನಿರಂತರವಾಗಿ ಮುಂಜಾಗೃತ ಕ್ರಮಗಳಾದ ಸಾಮಾಜಿಕ ಅಂತರ, ಮಾಸ್ಕ್ ಬಳಕೆ, ಕೈಗಳ ಸ್ವಚ್ಛತೆ, ಜೊತೆಗೆ ವೈಯಕ್ತಿಕ, ಪರಿಸರ ಸ್ವಚ್ಛತೆ ಕಾಪಾಡಿ ಜೊತೆಗೆ ಪೌಷ್ಠಿಕ ಆಹಾರ ಸೇವನೆ ಮಾಡಬೇಕು ವಿಶೇಷವಾಗಿ 18 ವರ್ಷದೊಳಗಿನ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಧು, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶಿವಕುಮಾರ್, ರಾಘವೇಂದ್ರ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಶಶಿಕಲಾ, ಶಿಕ್ಷಕರಾದ ಶ್ರೀಕಂಠ ಮೂರ್ತಿ, ಶಿವಶಂಕರ್, ಚಂದ್ರಶೇಖರ್, ಗ್ರಾಮ ಪಂಚಾಯಿತಿ ಸಿಬ್ಬಂದಿಗಳಾದ ನವೀನ್, ವಿವೇಕ್, ವಿವಿಧ್ ಎಂಟರ್ ಪ್ರೈಸ್ನ ಶಿವರಾಜ್, ಆಶಾ – ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಮಕ್ಕಳು, ಹಾಗೂ ಸಾರ್ವಜನಿಕರು ಹಾಜರಿದ್ದರು.




