ಸಿಡಿಮದ್ದು ತುಂಬಿದ ಕಾರು ಸ್ಫೋಟ; ಮತ್ತೆ ಎದುರಾದ ಆತಂಕ

ರಾಜೇಶ್ ಕೊಂಡಾಪುರ
ರಾಮನಗರ: ಶಿವಮೊಗ್ಗ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸಂಭವಿಸಿದ್ದ ಗಣಿ ಸ್ಪೋಟ ಪ್ರಕರಣ ಮಾಸುವ ಮುನ್ನವೇ ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ಸಿಡಿಮದ್ದು ತುಂಬಿದ್ದ ಕಾರು ಸ್ಪೋಟಗೊಂಡಿರುವುದು ಆತಂಕ ಸೃಷ್ಟಿಸಿದೆ.
ಕನಕಪುರ ತಾಲೂಕಿನ ಮರಳೆಗವಿ ಮಠದ ಸಮೀಪ ಸೋಮವಾರ ಮಧ್ಯಾಹ್ನ ಗಣಿಗಾರಿಕೆಗೆ ಸಿಡಿಮದ್ದು ಕೊಂಡೊಯ್ಯುತ್ತಿದ್ದ ಚಾಲಕನ ಸಮೇತ ಕಾರು ಸ್ಪೋಟಗೊಂಡು ಛಿದ್ರ ಛಿದ್ರಗೊಂಡಿದೆ. ಈ ಘಟನೆ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಡುವುದರ ಮೂಲಕ ರಾಜ್ಯದ ಗಮನವನ್ನೂ ಸೆಳೆದಿದೆ.
ಜನವರಿ 21ರ ಶಿವಮೊಗ್ಗದ ಹುಣಸಗೋಡಿನ ಗಣಿ ದುರಂತ ಹಾಗೂ ಫೆಬ್ರವರಿ 22ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಹಿರೇನಾಗವಲ್ಲಿ ನಡೆದ ಗಣಿ ಸ್ಪೋಟ ಸಂಭವಿಸಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದರು. ಇದಾದ ನಂತರವೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ.
ಈ ಎರಡು ಗಣಿ ಸ್ಪೋಟ ಪ್ರಕರಣಗಳ ಕುರಿತು ರಾಜ್ಯ ಸರ್ಕಾರ ಸೂಕ್ತ ತನಿಖೆ ನಡೆಸಿ, ಇದರಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳುವಲ್ಲಿ ಎಡವಿದೆ. ಹೀಗಾಗಿಯೇ ಇಂತಹ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತಿರುವುದು ರಾಜ್ಯದಲ್ಲಿ ಗಣಿ ಸ್ಪೋಟಕ್ಕೆ ಬಳಸುವ ಜಿಲೆಟೀನ್ ಸೇರಿದಂತೆ ಯಾವುದೇ ಸ್ಪೋಟಕಗಳ ಬಳಕೆ ನಿರ್ಬಂಧವಿಲ್ಲದೆ ನಡೆಯುತ್ತಿದೆ ಎನ್ನುವುದಕ್ಕೆ ರಾಜಧಾನಿ ಮಗ್ಗುಲಲ್ಲಿಯೇ ಇರುವ ಮರಳೇಗವಿ ಮಠದ ಬಳಿ ನಡೆದ ಕಾರು ಸ್ಪೋಟ ಸ್ಪಷ್ಟ ನಿದರ್ಶನವಾಗಿದೆ.
ಈಗ ಕನಕಪುರ ತಾಲೂಕು ಸೇರಿದಂತೆ ಜಿಲ್ಲೆಯ ಹಲವೆಡೆ ಬಳ್ಳಾರಿಯನ್ನು ಮೀರಿಸುವ ರೀತಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಸಾಂಗವಾಗಿ ನಡೆಯುತ್ತಿದೆ. ಕ್ರಷರ್ ಗಳ ಹಾವಳಿ ಹಾಗೂ ಕಲ್ಲು ಕ್ವಾರಿಗಳ ಆರ್ಭಟ ಸುದ್ದು ಮಾಡುತ್ತಿದೆ. ಈ ಗಣಿಗಾರಿಕೆ ಪ್ರಾಕೃತಿಕ ಸೌಂದರ್ಯಕ್ಕೆ ಘಾಸಿ ಮಾಡುತ್ತಿದೆ. ಅರಣ್ಯ ಪ್ರದೇಶ, ಗೋಮಾಳ, ಸರ್ಕಾರಿ ಭೂಮಿಗಳಲ್ಲದೇ ಕಂದಾಯ ಭೂಮಿಗಳಲ್ಲೂ ಸಣ್ಣಪುಟ್ಟ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಇಲ್ಲಿಯೂ ಕೂಡ ಜಿಲೆಟಿನ್ ಕಡ್ಡಿಗಳು, ಸಿಡಿ ಮದ್ದುಗಳನ್ನು ವ್ಯಾಪಕವಾಗಿ ಬಳಕೆ ಮಾಡಲಾಗುತ್ತಿದೆ.
ಇದರಿಂದ ಕಲ್ಲುಗಳ ನಿಕ್ಷೇಪ ಹೆಚ್ಚಿರುವ ಗ್ರಾಮೀಣ ಭಾಗಗಳಲ್ಲಿ ಜನ ಜಾನುವಾರುಗಳ ಜೊತೆಗೆ ಪರಿಸರದ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ. ಕಲ್ಲು ಗಣಿಗಾರಿಕೆಗಾಗಿ ಸಂಗ್ರಹಿಸಿದ ಜಿಲೆಟಿನ್ ಕಡ್ಡಿಗಳ ಸ್ಪೊಟ ಪ್ರಕರಣಗಳಿಗೆ ಕೊನೆ ಮೊದಲು ಇಲ್ಲದಂತಾಗಿದೆ. ಈ ಘಟನೆ ಮನಸೋಯಿಚ್ಛೆ ಸ್ಪೋಟಕಗಳ ಬಳಕೆ, ಸುರಕ್ಷತಾ ಕ್ರಮ ಅನುಸರಿಸದೆ ಇರುವುದನ್ನು ಸಾಬೀತು ಪಡಿಸುತ್ತಿದೆ.
ಪ್ರಾಣಗಳ ಜೊತೆ ಆಟ:
ಗಣಿ ಸ್ಪೋಟ ಸಂಭವಿಸಿದಾಗ ಭೂ ವಿಜ್ಞಾನಿ ಹಾಗೂ ನ್ಯಾಯಾದೀಶರನ್ನು ಒಳಗೊಂಡ ಆಯೋಗದಿಂದ ತನಿಖೆ ನಡೆಸಬೇಕು. ಅಕ್ರಮ ಕಲ್ಲು ಗಣಿಗಾರಿಕೆ ಸಂಪೂರ್ಣ ನಿಷೇಧ ಮಾಡಬೇಕು ಎನ್ನುವ ಕೂಗಿಗೆ ಸರ್ಕಾರ ಸೊಪ್ಪು ಹಾಕಿಲ್ಲ. ಘಟನೆ ನಡೆದಾಗ ಕೂಗು ಹಾಕುವ ವಿಪಕ್ಷಗಳು ಕೂಡ ಸೂತಕ ಕಳೆದ ಮನೆ ಮತ್ತೇ ತಹಬದಿಗೆ ಬಂದಂತೆ ವರ್ತಿಸುತ್ತಿರುವುದು ಕೂಡ ಗಣಿಗಾರಿಕೆ ಯಥಾಸ್ಥಿತಿಗೆ ತರುವುದರ ಜೊತೆಗೆ ಜೀವಗಳ ಜೊತೆ ಆಟವಾಡುತ್ತಿರುವಂತೆ ಕಾಣುತ್ತಿದೆ.
ಕಲ್ಲು ಗಣಿಗಾರಿಕೆಯಿಂದ ಪರಿಸರ, ಕೃಷಿ ಮೇಲೆ ಆಗುತ್ತಿರುವ ಪರಿಣಾಮ ಹಾಗೂ ಅಮಾಯಕರು ಪ್ರಾಣ ತೆತ್ತುತ್ತಿರುವುದರ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸದೆ ಮೀನಾಮೇಷಾ ಎಣಿಸುತ್ತಿರುವುದು ಗಣಿ ಉದ್ಯಮಿಗಳೊಟ್ಟಿಗೆ ಕೈಜೋಡಿಸಿದೆ ಎನ್ನುವ ಆರೋಪ ಸಾರ್ವಜನಿಕರಿಂದ ವ್ಯಾಪಕವಾಗಿ ಕೇಳಿ ಬರುತ್ತಿದೆ.
2017ರಲ್ಲಿ ಸ್ಪೋಟ ಸಂಭವಿಸಿ ಇಬ್ಬರ ಸಾವು:
2017ರ ಮೇ ತಿಂಗಳಲ್ಲಿ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಬೆಂಗಳೂರು ದಕ್ಷಿಣ ತಾಲೂಕು ತಾವರೆಕರೆ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಲುಗಣಿಯೊಂದರಲ್ಲಿ ಅನಾಹುತ ಸಂಭವಿಸಿತ್ತು. ಮಾದಾಪಟ್ಟಣ ಎಂಬ ಗ್ರಾಮದ ಬಳಿಯ ಕಲ್ಲುಗಣಿಯೊಂದರಲ್ಲಿ ಸ್ಪೋಟಕಗಳನ್ನು ಶೇಖರಿಸಿ ಇಡಲಾಗಿತ್ತು. ರಾತ್ರಿ ಧಾರಾಕಾರಣ ಮಳೆ ಮತ್ತು ಸಿಡಿಲು ಮಿಂಚು ಆರ್ಭಟ ಇತ್ತು. ಬಿಹಾರ ಮೂಲದ ಇಬ್ಬರು ಕಾರ್ಮಿಕರು ವಿಶ್ರಾಂತಿ ಪಡೆಯುತ್ತಿದ್ದರು. ಸ್ಪೋಟಕಗಳಿದ್ದ ಸ್ಥಳಕ್ಕೆ ಸಿಡಿಲು ಬಡಿದು ಸ್ಪೋಟ ಸಂಭವಿಸಿ ಇಬ್ಬರು ಕಾರ್ಮಿಕರು ಮೃತ ಪಟ್ಟಿದ್ದರು. ಇದಾದ ನಂತರ ಜಿಲ್ಲೆಯಲ್ಲಿ ಮರಳೇಗವಿ ಮಠದ ಸಮೀಪ ಸಂಭವಿಸಿರುವ ಕಾರು ಸ್ಪೋಟ ಎರಡನೇ ಪ್ರಕರಣವಾಗಿದೆ.
ಜಿಲ್ಲೆಯಲ್ಲಿ 171 ಕಲ್ಲುಗಣಿ ಗುತ್ತಿಗೆ:
ರಾಮನಗರ ಜಿಲ್ಲೆಯಲ್ಲಿ ಅಕ್ರಮವಾಗಿ ಎಷ್ಟು ಗಣಿಗಾರಿಕೆ ನಡೆಯುತ್ತಿದೆ ಎಂಬ ಮಾಹಿತಿ ಸ್ವತಃ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಕಾರಿಗಳ ಬಳಿಯೇ ಮಾಹಿತಿ ಇಲ್ಲ. ತೀರಾ ಇತ್ತೀಚೆಗೆ ಗಣಿ ಖಾತೆ ಸಚಿವರು ಜಿಲ್ಲೆಗೆ ಭೇಟಿ ನೀಡಿದಾಗ ಸಚಿವರು ಇದೇ ಪ್ರಶ್ನೆಯನ್ನು ಅಕಾರಿಗಳಿಗೆ ಕೇಳಿದ್ದರು. ಉತ್ತರ ಸಿಗದಿದ್ದಾಗ ವರದಿ ಕೊಡಿ ಎಂದು ಸಹ ಆದೇಶಿಸಿದ್ದರು.
ಸದ್ಯ 15ರಿಂದ 20 ಅಕ್ರಮ ಗಣಿಗಾರಿಕೆಗಳು ಇರಬಹುದು ಎಂದು ಅಂದಾಜಿಸಲಾಗಿದೆ. ಜಿಲ್ಲೆಯಲ್ಲಿ ಅಲಂಕಾರಿಕ ಕಲ್ಲುಗಣಿಗಾರಿಕೆ ನಡೆಸುವ 61 ಗಣಿ ಗುತ್ತಿಗೆಗಳಿವೆ. ಈ ಪೈಕಿ 30 ಗುತ್ತಿಗೆಗಳು ಚಾಲ್ತಿಯಲ್ಲಿವೆ, ಕಟ್ಟಡಕಲ್ಲು ಗಣಿಗೆ 110 ಗುತ್ತಿಗೆಗಳನ್ನು ನೀಡಲಾಗಿದೆ. ಈ ಪೈಕಿ 65 ಚಾಲ್ತಿಯಲ್ಲಿದ್ದರೆ, 44 ನಿಷ್ಕ್ರಿಯವಾಗಿವೆ. ಜಿಲ್ಲೆಯಲ್ಲಿ 53 ಜಲ್ಲಿ ಕ್ರಷರ್ ಘಟಕಗಳಿದ್ದು, 12 ಎಂ.ಸ್ಯಾಂಡ್ ಘಟಕಗಳಿಗೆ ಅನುಮತಿ ನೀಡಲಾಗಿದೆ.




