ವಿಶೇಷ ಯೋಜನೆಯಲ್ಲಿ ಹೆಚ್ಚುವರಿ ಮನೆ ಮಂಜೂರು

ರಾಮನಗರ: ಚನ್ನಪಟ್ಟಣ ತಾಲೂಕಿಗೆ ವಸತಿ ಯೋಜನೆಯಲ್ಲಿ ಸಮರ್ಪಕವಾಗಿ ಮನೆಗಳು ದೊರೆತಿಲ್ಲ, ಎಲ್ಲರಿಗೂ ವಸತಿ ಸೌಲಭ್ಯ ದೊರೆಯ ಬೇಕಿದ್ದು, ನಮ್ಮ ತಾಲೂಕಿಗೆ ವಿಶೇಷ ಕೋಟಾ ಯೋಜನೆಯಡಿಯಲ್ಲಿ ಹೆಚ್ಚುವರಿ ಮನೆಯನ್ನು ಮಂಜೂರು ಮಾಡಬೇಕು ಎಂದು ವಿಧಾನಪರಿಷತ್ ಸದಸ್ಯ ಯೋಗೇಶ್ವರ್ ವಸತಿ ಸಚಿವ ಸೋಮಣ್ಣ ಆಗ್ರಹಿಸಿದರು.
ವಸತಿ ಸಚಿವ ವಿ.ಸೋಮಣ್ಣ ನೇತೃತ್ವದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಸಂಬಂಧಿಸಿದಂತೆ ಸಭೆಯಲ್ಲಿ ಮಾತನಾಡಿದ ಯೋಗೇಶ್ವರ್ ಅವರು, ಕಳೆದ ನಾಲ್ಕು ವರ್ಷಗಳಿಂದ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ವಸತಿ ಯೋಜನೆಯನ್ನು ನೀಡಲಾಗಿಲ್ಲ. ಇದರಿಂದಾಗಿ ಬಡ ಹಾಗೂ ರೈತಾಪಿ ವರ್ಗದ ಜನತೆ ಕಂಗಾಲಾಗಿದ್ದಾರೆ. ಈ ಕಾರಣದಿಂದಾಗಿ ತಾಲೂಕಿಗೆ ವಿಶೇಷ ಕೋಟಾದಡಿ ಹೆಚ್ಚುವರಿ ವಸತಿಯನ್ನು ಬಿಡುಗಡೆ ಮಾಡಿಸಬೇಕು ಎಂದು ಕೋರಿದ್ದಾರೆ.
ಪ್ರಧಾನಮಂತ್ರಿ ಆವಾಸ್ ಯೋಜನೆ ಯಡಿಯಲ್ಲಿ ಬಿಡುಗಡೆಯಾಗಿರುವ ವಸತಿ ಯೋಜನೆಗಳ ಅಡಿಯಲ್ಲಿ ಚನ್ನಪಟ್ಟಣ ತಾಲೂಕಿಗೆ ಹೆಚ್ಚುವರಿ ವಸತಿಯನ್ನು ಬಿಡುಗಡೆ ಮಾಡಬೇಕು ಎಂದು ತಿಳಿಸಿದ ಯೋಗೇಶ್ವರ್ ಅವರು, ಕೆಲ ಮಂದಿ ವಸತಿ ಯೋಜನೆಯನ್ನು ನಂಬಿ ತಮ್ಮ ಗುಡಿಸಲುಗಳನ್ನು ಕಿತ್ತುಹಾಕಿದ್ದಾರೆ. ಇದರಿಂದಾಗಿ ಕಷ್ಟದಲ್ಲಿರುವವಿಗೆ ಮನೆಗಳನ್ನು ಮಂಜೂರು ಮಾಡಿಸಬೇಕು ಎಂದು ತಿಳಿಸಿದರು.




