ಚರಂಡಿ ಸಮಸ್ಯೆ; ಕೋಡಂಬಳ್ಳಿಯಲ್ಲಿ ಕಾಯಿಲೆ ಭೀತಿ

ವರದಿ: ರಾಜೇಶ್ ಕೊಂಡಾಪುರ
ರಾಮನಗರ: ಕೊರೊನಾ ಸೇರಿದಂತೆ ಹಲವು ಸಾಂಕ್ರಾಮಿಕ ರೋಗಗಳು ಹರಡುತ್ತಿದೆ. ಆದರೇ, ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿಯ ಚನ್ನಪಟ್ಟಣ-ಹಲಗೂರು ರಸ್ತೆಯಲ್ಲಿ ಚರಂಡಿ ಇಲ್ಲದೆ ಜನತೆ ಸಾಂಕ್ರಾಮಿಕ ರೋಗಗಳಿಂದ ಮತ್ತಷ್ಟು ಬಳಲುವಂತಾಗಿದೆ.
ಹೌದು, ಚನ್ನಪಟ್ಟಣ-ಹಲಗೂರು ಹೆದ್ದಾರಿಯ ಪ್ರಮುಖ ವಾಣಿಜ್ಯ ಕೇಂದ್ರವಾದ ಕೋಡಂಬಳ್ಳಿಯ ಸರಕಾರಿ ಪ್ರೌಢಶಾಲೆಯ ಮುಂಭಾಗದ ಬಳಿಯಿಂದ ಪೆಟ್ರೋಲ್ ಬಂಕ್‌ವರೆಗೆ ಚರಂಡಿ ಇಲ್ಲದೇ ಕೊಳಚೆ ನೀರು ರಸ್ತೆ ಬದಿಯಲ್ಲಿಯೇ ನಿಂತು ಕೊಳೆತು ನಾರುತ್ತಿದೆ. ಇನ್ನು ಇದಕ್ಕೆ
ಅಭಿಮುಖವಾಗಿ ಸರಕಾರಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪಿಯು ಕಾಲೇಜಿದ್ದು, ಇವುಗಳ ಕಾಂಪೌಂಡ್‌ಗೆ ಹೊಂದಿಕೊಂಡಂತೆ ಚರಂಡಿ ಮಾಡಲಾಗಿದೆ. ಆದರೇ, ಚರಂಡಿ ದುರಸ್ತಿ ಮಾಡದ್ದರಿಂದ ಚರಂಡಿಯಲ್ಲಿ ಹೂಳು ತುಂಬಿ ಹುಳು-ಉಪ್ಪಟೆಗಳ ಅವಾಸಸ್ಥಾನವಾಗಿದೆ.

ಜತೆಗೆ ಶಾಲಾ ಕಾಂಪೌಂಡ್ ಮೇಲೆ ಕುಳಿತು ಕುಡಿದು ಬೀಸಾಡಿದ ಮದ್ಯದ ಪಾಕೇಟ್‌ಗಳು ಈ ಹೂಳು ತುಂಬಿದ ಚರಂಡಿಯಲ್ಲಿ ಎಲ್ಲೆಂದರಲ್ಲಿ ರಾಚುತ್ತಿವೆ. ಇಷ್ಟಿದ್ದರೂ ಶಾಲಾ ಆವರಣವೆಂದು ತಿಳಿದಾದರೂ ಈ ಚರಂಡಿಯನ್ನು ದುರಸ್ಥಿಪಡಿಸುವ ಗೋಚಿಗೆ ಗ್ರಾ.ಪಂ. ಇರಲಿ ಶಾಲೆ ಮತ್ತು ಕಾಲೇಜು ಅಭಿವೃದ್ಧಿ ಸಮಿತಿಗಳು ಈ ಬಗ್ಗೆ ಗಮನ ನೀಡಿಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಚನ್ನಪಟ್ಟಣ-ಹಲಗೂರು ರಸ್ತೆ ರಾಜ್ಯ ಹೆದ್ದಾರಿಯಾಗಿ ಪರಿವರ್ತನೆಗೊಂಡಿದ್ದು, ಅಭಿವೃದ್ಧಿ ಕೆಲಸ ಸಾಕಷ್ಟು ನಡೆಯುತ್ತಿದೆ. ಈ ಹೆದ್ದಾರಿಯ ಕೋಡಂಬಳ್ಳಿ ಗ್ರಾಮ ಪರಿಮಿತಿಯಲ್ಲಿ ಕಾಂಕ್ರೀಟ್ ಕಾಮಗಾರಿ ಕೂಡ ನಡೆದಿದೆ. ಆದರೆ ಇದಕ್ಕೆ ಹೊಂದಿಕೊಂಡಂತೆ ಚರಂಡಿ ನಿರ್ಮಾಣ ಮಾಡದಿರುವುದರಿಂದೆ ರಸ್ತೆಯ ಪಕ್ಕದಲ್ಲಿ ನೀರು ತುಂಬಿ ರಸ್ತೆಯ ಪಕ್ಕದಲ್ಲಿ ವಾಸ ಮಾಡುತ್ತಿರುವ ನಿವಾಸಿಗಳು ನಿತ್ಯ ನರಕಯಾತನೆ
ಅನುಭವಿಸುವಂತಾಗಿದೆ.

ರಸ್ತೆ ಬದಿಯಲ್ಲಿ ಚರಂಡಿ ಮಾಡಬೇಕಿರುವುದು ಲೋಕೋಪಯೋಗಿ ಇಲಾಖೆಗೆ ಬಿಟ್ಟಿದ್ದು, ರಸ್ತೆ ಮತ್ತು ರಸ್ತೆ ಬದಿ ಆ ಇಲಾಖೆ ವ್ಯಾಪ್ತಿಗೆ ಸೇರಿದೆ. ಅದ್ದರಿಂದ ನಾವು ಅಲ್ಲಿ ಚರಂಡಿ ನಿರ್ಮಿಸಲು ಬರುವುದಿಲ್ಲವೆಂದು ಗ್ರಾ.ಪಂ. ಅಧಿಕಾರಿಗಳು ಹೇಳುತ್ತಿದ್ದಾರೆ. ಅದ್ದರಿಂದ ಗ್ರಾಮ ಪಂಚಾಯಿತಿಗೆ ನೀಡಿದ ಯಾವುದೇ ಅರ್ಜಿಗಳಿಗೆ ಇದುವರೆಗೂ ಉತ್ತರ ನೀಡಿಲ್ಲ. ಇನ್ನು ಲೋಕೋಪಯೋಗಿ ಇಲಾಖೆ ಕೂಡ ಈ ಬಗ್ಗೆ ಹತ್ತಾರು ವರ್ಷಗಳಿಂದ ಗಮನ ನೀಡಿಲ್ಲವೆಂದು ಕೋಡಂಬಳ್ಳಿ ಗ್ರಾಮದ ಯುವ ಮುಖಂಡ ಕೆ.ಪಿ. ಮಹೇಂದ್ರ ಬೇಸರ ವ್ಯಕ್ತಪಡಿಸುತ್ತಾರೆ.
ಪಂಚಾಯಿತಿಯವರು ಪ್ರತಿ ವರ್ಷವು ನಮ್ಮಿಂದ ತೆರಿಗೆ ಕಟ್ಟಿಸಿಕೊಳ್ಳುತ್ತಾರೆ. ಆದರೆ ಡ್ರೈನೇಜ್ ಮಾಡಿ, ನೀರು ಸುಲಭವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಿಕೊಡಿ ಎಂದು ಮನವಿ ಮಾಡಿದೂ ನಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತನ್ನು ಪಂಚಾಯಿತಿ ಅಧಿಕಾರಿಗಳು
ನೀಡುತ್ತಿಲ್ಲ. ಈಗ ಕೊರೊನಾ ರೋಗ ಬಂದಿದ್ದು, ಮಳೆಗಾಲ ಕೂಡ ಆರಂಭವಾಗಿದೆ. ಈಗ ನಾವು ಇಲ್ಲಿ ವಾಸ ಮಾಡಲು ಸಾಧ್ಯವಾಗದಂತಾಗಿದೆ ಎಂದು ಇಲ್ಲಿನ ನಿವಾಸಿ ಸಿದ್ದಚಾರಿ ಅಳಲು ತೋಡಿಕೊಳ್ಳುತ್ತಾರೆ.

ಒಟ್ಟಾರೆ, ರಸ್ತೆಯ ಒಂದು ಕಡೆ ಚರಂಡಿ ಮಾಡದೇ ನಾಗರೀಕರು ನರಕಯಾತನೆ ಅನುಸರಿಸುತ್ತಿದ್ದರೇ, ಮೊತ್ತೊಂದು ಬದಿ ಚರಂಡಿ ಇದ್ದರೂ ಅದರ ಹೂಳು ತೆಗೆಯದ್ದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ. ಈಗಲಾದರೂ ಸಂಬಂಧಪಟ್ಟವರು
ಎಚ್ಚೆತ್ತು. ಸಮಸ್ಯೆಯನ್ನು ಬಗೆಹರಿಸಬೇಕಿದೆ.





