ಮೇಕೆದಾಟು ಪಾದಯಾತ್ರೆ ನೀರಿಗಾಗಿ ಅಲ್ಲ, ಅಧಿಕಾರಕ್ಕಾಗಿ: ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯನವರು ಬಳ್ಳಾರಿ ಪಾದಯಾತ್ರೆ ಮಾಡಿ ಸಿಎಂ ಆಗಿದ್ದರು. ಈಗ ಮೇಕೆದಾಟು ಪಾದಯಾತ್ರೆ ಮಾಡಿ ನಾನು ಸಿಎಂ ಆಗಬೇಕು ಅಂತಾ ಡಿಕೆಶಿಯವರು ಅಂದುಕೊಂಡಿದ್ದಾರೆ. ಹೀಗಾಗಿ ಇದು ನೀರಿಗಾಗಿ ನಡೆಯುತ್ತಿರುವ ಪಾದಯಾತ್ರೆಯಲ್ಲ, ಬದಲಾಗಿ ಅಧಿಕಾರಕ್ಕಾಗಿ ನಡೆಯುತ್ತಿರುವ ಪಾದಯಾತ್ರೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಸ್ತುತ ವ್ಯವಸ್ಥೆಯನ್ನು ಕಾಂಗ್ರೆಸ್ ನಾಯಕರು ಒಪ್ಪಿಕೊಳ್ಳಬೇಕು. ಈ ಹಿಂದೆ ಇವರೇ ಅಧಿಕಾರದಲ್ಲಿದ್ದಾಗ ಮೇಕೆದಾಟು ಕುರಿತು ಯಾವುದೇ ಪ್ರೊಗ್ರೆಸ್ ಮಾಡಲಿಲ್ಲ. ಅಧಿಕಾರದಲ್ಲಿದ್ದಾಗ ಇವರಿಗೆ ಮೇಕೆದಾಟು ಬೇಡಾವಾಗಿತ್ತು, ಅಧಿಕಾರ ಇಲ್ಲದಿರುವಾಗ ಇವರಿಗೆ ಮೇಕೆದಾಟು ಬೇಕಾಗಿದೆ. ಇತ್ತಿಚೆಗೆ ಗೋವಾ ಚುನಾವಣೆಯಲ್ಲಿ ಅಲ್ಲಿನ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಮಹದಾಯಿ ನೀರು ರಾಜ್ಯಕ್ಕೆ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಅದರ ಬಗ್ಗೆ ರಾಜ್ಯ ಕಾಂಗ್ರೆಸ್ ನಾಯಕರು ಏನು ಹೇಳುತ್ತಾರೆ. ಇವರು ಒಂದು ರೀತಿಯಲ್ಲಿ ಸುಳ್ಳಿನ ಸರದಾರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಉಕ್ರೇನಲ್ಲಿರುವ ನಮ್ಮವರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.
ಉಕ್ರೇನ್ನಲ್ಲಿರುವ ನಮ್ಮ ಭಾರತೀಯರ ರಕ್ಷಣೆಗೆ ಈಗಾಗಲೇ ಹಲವು ಕ್ರಮಗಳನ್ನು ಕೈಗೊಳ್ಳುಲಾಗುತ್ತಿದೆ. ಸರ್ವ ರೀತಿಯಲ್ಲಿ ಅವರನ್ನು ರಕ್ಷಣೆ ಮಾಡಿಕೊಂಡು ಸುರಕ್ಷಿತವಾಗಿ ಕರೆ ತರಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಹಲವು ವಿದ್ಯಾರ್ಥಿನಿಯರ ಪಾಲಕರು ನಮ್ಮ ಜೊತೆಗೆ ಸಂಪರ್ಕದಲ್ಲಿದ್ದಾರೆ. ಉಕ್ರೇನ್ ವೆಸ್ಟರ್ನ್ ಭಾಗದಲ್ಲಿ ಸ್ವಲ್ಪ ಸಮಸ್ಯೆಗಳು ಹೆಚ್ಚಾಗಿದ್ದು, ಈಸ್ಟ್‌ನಲ್ಲಿ ಸ್ವಲ್ಪ ಕಡಿಮೆ ಇದೆ. ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿಯ ಸರ್ಕಾರ ವಿಮಾನ ಹಾರಾಟ ಬಂದ್ ಮಾಡಿದೆ. ಹಾಗಾಗಿ ಉಕ್ರೇನ್ ದೇಶದ ಅಕ್ಕ ಪಕ್ಕದ ದೇಶಗಳ ಸಹಕಾರದೊಂದಿಗೆ ನಮ್ಮವರನ್ನು ಕರೆ ತರುವ ಪ್ರಯತ್ನಗಳು ನಡೆಯುತ್ತಿವೆ. ಈಗಾಗ್ಲೆ ಎರಡು ವಿಮಾನಗಳ ಮೂಲಕ ಕೆಲವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದೆ ಎಂದು ತಿಳಿಸಿದರು.
ಉಕ್ರೇನ್‌ನಲ್ಲಿ ಬಾಂಬ್, ಮಿಸೈಲ್ ದಾಳಿಗಳು ನಡೆಯುತ್ತಿರುವುದರಿಂದ ನಮ್ಮವರನ್ನು ಶಿಫ್ಟ್ ಮಾಡುವುದು ತುಂಬಾ ಕಷ್ಟವಾಗುತ್ತಿದೆ. ಯುದ್ಧ ತೀವ್ರತೆ ಕಡಿಮೆ ಇರುವ ಸಮಯ ನೋಡಿಕೊಂಡು, ನಮ್ಮವರ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಭಾರತೀಯ ಸರ್ಕಾರ ನಮ್ಮವರನ್ನು ಸುರಕ್ಷಿತವಾಗಿ ಕರೆ ತರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ರಷ್ಯಾ ಹಾಗೂ ಉಕ್ರೇನ್ ದೇಶಗಳ ಅಧ್ಯಕ್ಷರ ಜೊತೆಗೆ ಪ್ರಧಾನಿಯವರು ನಮ್ಮವರ ಸುರಕ್ಷತೆ ಬಗ್ಗೆ ಮಾತನಾಡಿದ್ದಾರೆ. ಅವರು ಕೂಡಾ ಅದಕ್ಕೆ ಪಾಸಿಟಿವ್ ಆಗಿ ಸ್ಪಂದಸಿದ್ದು, ಸಮಯ ನೋಡಿಕೊಂಡು ನಮ್ಮವರನ್ನ ಕರೆತರುತ್ತೇವೆ ಎಂದರು.




