ಸಿನಿಮೀಯ ಸ್ಟೈಲ್ನಲ್ಲಿ ಮೊಬೈಲ್ ಕಳ್ಳರನ್ನ ಹಿಡಿದ ಪೊಲೀಸ್

ಮೈಸೂರು: ಕಾನ್ಸ್ಟೇಬಲ್ ಒಬ್ಬರು ಸಿನಿಮೀಯ ರೀತಿಯಲ್ಲಿ ಮೊಬೈಲ್ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಇಬ್ಬರನ್ನ ಬಂಧಿಸಿದ್ದಾರೆ. ಉದ್ಯಾನವದಲ್ಲಿ ಕುಳಿತಿದ್ದ ವ್ಯಕ್ತಿಯೋರ್ವರಿಂದ ಕಳ್ಳರು ಮೊಬೈಲ್ ಕಿತ್ತು ಪರಾರಿಯಾಗುತ್ತಿದ್ದರು. ಈ ವೇಳೆ ವ್ಯಕ್ತಿ ಕೂಗಾಡಿದ್ದು ಕೂಗಾಟ ಕೇಳಿದ ಕಾನ್ಸ್ಟೇಬಲ್ ಸಿನಿಮೀಯಾ ರೀತಿಯಲ್ಲಿ ಚೇಸ್ ಮಾಡಿ ಕಳ್ಳರನ್ನ ಹಿಡಿದಿದ್ದಾರೆ.
ಕಾನ್ಸ್ಟೇಬಲ್ ಲಿಂಗರಾಜು ಆರೋಪಿಗಳನ್ನ ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಲಿಂಗರಾಜು ಕೆಲಸಕ್ಕೆ ಎಲ್ಲೆಡೆ ಶ್ಲಾಘನೆ ಕೇಳಿ ಬರ್ತಿದೆ. ಉದ್ಯಾನವನದಲ್ಲಿ ಕುಳಿತಿದ್ದ ವ್ಯಕ್ತಿಯ ಬಳಿ ಬಂದ ಇಬ್ಬರು ಯುವಕರು ಮನೆಗೆ ಕರೆ ಮಾಡಬೇಕು ಎಂದು ಮೊಬೈಲ್ ಕೇಳಿದ್ದಾರೆ. ಅವರ ಮಾತನ್ನ ನಂಬಿದ ವ್ಯಕ್ತಿ ಮೊಬೈಲ್ ನೀಡಿದ್ದಾರೆ.
ಮೊಬೈಲ್ ಪಡೆದುಕೊಂಡ ಯುವಕರು ಪರಾರಿಯಾಗಲು ಯತ್ನಿಸಿದ್ದಾರೆ. ಆಗ ವ್ಯಕ್ತಿ ಮೊಬೈಲ್ ಕಳ್ಳ, ಮೊಬೈಲ್ ಕಳ್ಳ ಎಂದು ಕೂಗಿಕೊಂಡಿದ್ದಾರೆ. ಯುವಕರು ಮೊಬೈಲ್ ತೆಗೆದುಕೊಂಡು ಓಡಿ ಹೋಗುತ್ತಿರುವುದನ್ನು ಅಲ್ಲೇ ಇದ್ದ ಗುಪ್ತಚರ ಇಲಾಖೆಯ ಕಾನ್ಸ್‌ಟೇಬಲ್ ನೋಡಿ ಅವರನ್ನು ಹಿಂಬಾಲಿಸಿ ಹಿಡಿದು ಲಕ್ಷ್ಮಿಪುರಂ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ.
ಉದ್ಯಾನದಲ್ಲಿದ್ದ ವ್ಯಕ್ತಿ ಯುವಕರಿಗೆ ಪರಿಚಯವಿರುವ ಯುವತಿಯೊಬ್ಬಳ ಫೋಟೋ ಕಳುಹಿಸಿ ಕಿರುಕುಳ ನೀಡುತ್ತಿದ್ದರು. ಹೀಗಾಗಿ ಮೊಬೈಲ್ ಕಿತ್ತುಕೊಂಡು ಫೋಟೋ ಡಿಲೀಟ್ ಮಾಡಲು ಯತ್ನಿಸಿದ್ದೆವು ಎಂದು ವಿಚಾರಣೆ ವೇಳೆ ಯುವಕರು ಹೇಳಿಕೆ ನೀಡಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಲಕ್ಷ್ಮಿಪುರಂ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.




